ಯುವತಿಯೊಬ್ಬರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸಂತ್ರಸ್ತ ಯುವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ಶುಕ್ರವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376ಸಿ (ಅತ್ಯಾಚಾರ), 354ಎ (ಮಹಿಳೆಯ ಮಾನಹಾನಿ), 506 (ಜೀವ ಬೆದರಿಕೆ), 417 (ವಂಚನೆ), ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67 (ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪ) ಅಡಿ ರಮೇಶ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆ ನೀಡಿರುವ ಲಿಖಿತ ದೂರನ್ನು ವಕೀಲ ಕೆ ಎನ್ ಜಗದೀಶ್ ಕುಮಾರ್ ಅವರು ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಭೇಟಿ ಮಾಡಿದ ಅವರು ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಕೋರಿದರು. "ಸಂತ್ರಸ್ತೆಗೆ ರಕ್ಷಣೆ ಒದಗಿಸುವ ಭರವಸೆ ಪಡೆದಿದ್ದು ಅವರು ಶೀಘ್ರ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ” ಎಂದು ಜಗದೀಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂತ್ರಸ್ತೆ ಬರೆದಿರುವ ದೂರಿನ ಪ್ರತಿಯನ್ನು ಜಗದೀಶ್ ಕುಮಾರ್ ಅವರು ಪೊಲೀಸರಿಗೆ ತಲುಪಿಸಿದ್ದಾರೆ. ಕೈಬಹರದ ಪ್ರತಿಯಲ್ಲಿ ಯುವತಿಯು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪತ್ರದಲ್ಲಿನ ಪ್ರಮುಖ ಆರೋಪಗಳು ಇಂತಿವೆ.
ರಮೇಶ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಾರೆ. "ವಿಡಿಯೋ ಕರೆ ಮೂಲಕ ಅಶ್ಲೀಲ ಮಾತು, ನಗ್ನವಾಗಿ ಮಾತನಾಡಿಸಲು ಪುಸಲಾಯಿಸಿ ಕೆಲಸ ಕೊಡಿಸದೇ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ".
ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬಂದಿದ್ದು, ಕಿರುಚಿತ್ರ ಮಾಡುವ ಸಲುವಾಗಿ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೆ. ನಂತರ ನನ್ನ ಮೊಬೈಲ್ ನಂಬರ್ ಸಂಗ್ರಹಿಸಿಕೊಂಡು ನನ್ನ ಹಾಗೂ ಕುಟುಂಬದ ಬಗ್ಗೆ ಸಲುಗೆಯಿಂದ ಮಾತನಾಡಲು ಆರಂಭಿಸಿದರು. ಸಚಿವರು ಸಲುಗೆಯಿಂದ ಮಾತನಾಡಿದ್ದನ್ನು ಕಂಡು ನಾನೂ ಹಾಗೇ ಮಾತನಾಡಲು ಆರಂಭಿಸಿದೆ.
ಮಂತ್ರಿಯಾಗಿದ್ದ ರಮೇಶ ಜಾರಕಿಹೊಳಿ ಅವರು ಹೇಳಿದಂತೆ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದ್ದೆ. ಅವರ ಸೂಚನೆಯಂತೆಯೇ ನಡೆದುಕೊಂಡಿದ್ದೇನೆ.
ಕೆಲಸದ ವಿಚಾರವಾಗಿ ಮಾತನಾಡಬೇಕು ನನ್ನ ನಿವಾಸಕ್ಕೆ ಬಾ ಎಂದು ಎರಡು ಬಾರಿ ಕರೆಸಿಕೊಂಡಿದ್ದಾರೆ. ಅವರು ಸೂಚಿಸಿದ ಅಪಾರ್ಟ್‌ಮೆಂಟ್‌ಗೆ ಎರಡು ಬಾರಿ ತೆರಳಿದ್ದೆ. ಆಗ ಅವರು ನನ್ನ ಜೊತೆ ಅಶ್ಲೀಲವಾಗಿ ನಡೆದುಕೊಂಡರು. ಅವರ ಎದುರು ಮಾತನಾಡಲು ಹೆದರಿ ಜಾರಕಿಹೊಳಿ ಅವರು ಹೇಳಿದಂತೆ ನಡೆದುಕೊಂಡಿದ್ದೇನೆ. ಸರ್ಕಾರಿ ನೌಕರಿಯ ಬಗ್ಗೆ ಕೇಳಲಾಗಿ, ಸ್ವಲ್ಪ ಹಣ ಬೇಕಾದರೆ ಕೇಳು ನೌಕರಿ ಆನಂತರ ನೋಡೋಣ ಎಂದು ನನ್ನನ್ನು ದೂರವಿಡಲು ಪ್ರಯತ್ನಿಸಿದ್ದಾರೆ.
ಆನಂತರ ಕೆಲವು ದಿನಗಳ ಬಳಿಕ ವಿಡಿಯೊಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ನಾನು ರಮೇಶ ಜಾರಕಿಹೊಳಿ ಅವರ ವಿರುದ್ಧ ದೂರು ನೀಡುವುದನ್ನು ತಡೆಯುವ ಉದ್ದೇಶದಿಂದ ಈ ತಂತ್ರ ಮಾಡಿದ್ದಾರೆ. ಪ್ರಭಾವಿಯಾದ ರಮೇಶ ಜಾರಕಿಹೊಳಿ ಅವರಿಂದ ನನಗೆ ಮತ್ತು ನನ್ನ ಕುಟುಂಬದವರಿಗೆ ಪ್ರಾಣ ಬೆದರಿಕೆ ಇದೆ.
ಪೊಲೀಸ್ ಠಾಣೆಗೆ ತೆರಳಿ ದೂರು ನೀಡದಂತೆ ನನ್ನನ್ನು ತಡೆಯಲಾಗುತ್ತಿದೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ತಡೆಯಲಾಗುತ್ತಿದೆ. ನನ್ನ ಬೆಂಬಲಕ್ಕೆ ನಿಲ್ಲಲು ಯತ್ನಿಸುವವರಿಗೆ ಕಿರುಕುಳ ನೀಡಲಾಗುತ್ತಿದೆ.
ಭದ್ರತೆಯ ಸಮಸ್ಯೆಯಿಂದಾಗಿ ಕೈಬರಹದ ದೂರನ್ನು ವಕೀಲ ಜಗದೀಶ್ ಕುಮಾರ್ ಮೂಲಕ ಕಳುಹಿಸುತ್ತಿದ್ದೇನೆ. ರಮೇಶ್ ಜಾರಕಿಹೊಳಿ ಅವರ ಕಡೆಯಿಂದ ನಮಗೆ ತೊಂದರೆಯಾಗದಂತೆ ಭದ್ರತೆ ಕಲ್ಪಿಸಲು ಮನವಿ ಮಾಡುತ್ತೇನೆ.