ಪಟಾಕಿ ನಿಷೇಧ: ಪಟಾಕಿ ವ್ಯಾಪಾರಿಗಳ ಪರವಾನಗಿ ರದ್ದತಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ದೆಹಲಿಯ ಹೊರಗಿನಿಂದ ಪಟಾಕಿ ಕೊಳ್ಳಲಲು ಬರುವವರಿಗೂ ಪಟಾಕಿ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಸಂಜೀವ್‌ ಸಚದೇವ್‌ ಹೇಳಿದ್ದಾರೆ.
ಪಟಾಕಿ ನಿಷೇಧ: ಪಟಾಕಿ ವ್ಯಾಪಾರಿಗಳ ಪರವಾನಗಿ ರದ್ದತಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಣೆ
Firecrackers

ದೆಹಲಿಯಲ್ಲಿ ಪಟಾಕಿ ಮಾರಾಟ ಮಾಡಲು ಮಾರಾಟಗಾರರ ಪರವಾನಗಿ ರದ್ದು ಮಾಡಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಸೋಮವಾರ ಹೇಳಿದೆ.

ಪಟಾಕಿ ಮಾರಾಟಗಾರರ ಮನವಿಗಳ ಪೈಕಿ ಒಂದಾದ ದೆಹಲಿಯ ಹೊರಗಿನಿಂದ ಬರುವವರಿಗೂ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಬೇಕು ಎನ್ನುವ ಮನವಿಯನ್ನು ತಿರಸ್ಕರಿಸಿರುವುದಾಗಿ ನ್ಯಾಯಮೂರ್ತಿ ಸಂಜೀವ್‌ ಸಚದೇವ್‌ ಹೇಳಿದ್ದಾರೆ.

ದೆಹಲಿಯಲ್ಲಿ ಪಟಾಕಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೊರಡಿಸಿರುವ ಆದೇಶ ಮತ್ತು ಅದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದು ಮೇಲ್ನೋಟಕ್ಕೆ ಅರ್ಜಿದಾರರಿಗೆ ಅಡ್ಡಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪರವಾನಗಿ ರದ್ದತಿಯು ಅರ್ಜಿದಾರರಿಗೆ ಗಾಳಿಯ ಗುಣಮಟ್ಟ ಉತ್ತಮವಾಗಿರುವ ಮತ್ತು ಸ್ಥಳೀಯ ಆಡಳಿತವು ಅನುಮತಿಸುವ ದೆಹಲಿಯ ಹೊರಗಿನ ಸ್ಥಳಗಳಲ್ಲಿ ಪಟಾಕಿಗಳನ್ನು ವಿಲೇವಾರಿ ಮಾಡುವುದಕ್ಕೂ ಅಡ್ಡಿಯಾಗಿದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಹೀಗಾಗಿ, ಈ ವಿಚಾರದಲ್ಲಿ ಪರಿಹಾರ ನೀಡಬಹುದೇ ಎಂದು ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

“ಇದನ್ನು (ಪಟಾಕಿಗಳನ್ನು) ಅವರು ನಾಶಪಡಿಸಲಾಗದು. ಹಾಗೆ ಮಾಡಿದರೆ ಮತ್ತೊಮ್ಮೆ ಮಾಲಿನ್ಯದ ಸಮಸ್ಯೆ ಉಂಟಾಗಲಿದೆ. ಇಂದು ಅವರು ಕಾನೂನುಬಾಹಿರವಾಗಿ ಪಟಾಕಿಗಳನ್ನು ಇಟ್ಟುಕೊಂಡಿದ್ದು, ಅದನ್ನು ದೆಹಲಿಯ ಹೊರಗೆ ತೆಗೆದುಕೊಂಡು ಹೋಗುವುದು ಅನಿವಾರ್ಯ. ಇದಕ್ಕೆ ಏನೆಲ್ಲಾ ವಿಧಿ-ವಿಧಾನಗಳಿವೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು” ಎಂದು ಪೀಠ ಹೇಳಿದೆ.

ಪಟಾಕಿಯನ್ನು ಎಲ್ಲಿ ಮಾರಾಟ ಮಾಡಲಾಗುತ್ತದೆ ಎಂಬ ವಿಚಾರಗಳನ್ನು ಅರ್ಜಿದಾರರು ಪ್ರಸ್ತಾಪಿಸಿದರೆ ಆ ವಿಚಾರಗಳ ಕುರಿತು ಸೂಚನೆಗಳನ್ನು ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ವಕೀಲರು ಹೇಳಿದರು. ಹೀಗಾಗಿ, ಅರ್ಜಿದಾರರು ಮನವಿಯನ್ನು ಹಿಂಪಡೆದರು.

ಪಟಾಕಿ ಖರೀದಿಸಲು ದೆಹಲಿಯ ಹೊರಗಿನಿಂದ ಬರುವವರೆಗೆ ಅವುಗಳನ್ನು ಮಾರಾಟ ಮಾಡಲು ಅನಮತಿ ನೀಡುವಂತೆ ಪರವಾನಗಿ ಹೊಂದಿರುವ 50 ಪಟಾಕಿ ಮಾರಾಟಗಾರರು ಕೋರಿದ್ದರು.

ಪಟಾಕಿ ಮಾರಾಟ ಮಾಡದಂತೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿಲ್ಲ ಎಂದು ಅರ್ಜಿದಾರರ ಪರ ವಕೀಲೆ ರೋಹಿಣಿ ಮೂಸಾ ಹೇಳಿದರು. ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ (ಎನ್‌ಸಿಆರ್‌) ಪಟಾಕಿ ಮಾರಾಟ ಮಾಡಲು ಅನುಮತಿ ಕೋರುತ್ತಿಲ್ಲ. ಎನ್‌ಸಿಆರ್‌ ಹೊರಗೆ ಪಟಾಕಿ ಮಾರಾಟ ಮಾಡಲು ಅನುಮತಿ ಕೋರುತ್ತಿರುವುದಾಗಿ ಹೇಳಿದರು. ಪರವಾನಗಿ ರದ್ದು ಮಾಡುವುದರಿಂದ ಹೊರಗಿನವರಿಗೂ ಪಟಾಕಿ ಮಾರಾಟ ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

“ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಮಾಡುವ ವಿಚಾರ ಚರ್ಚೆಯಾಗುತ್ತಿಲ್ಲ. ಎನ್‌ಸಿಆರ್‌ನಲ್ಲಿ ಪಟಾಕಿ ಮಾರಾಟ ಮಾಡಲು ಅವರು ಅನುಮತಿ ಕೋರುತ್ತಿಲ್ಲ. ಅನುಮತಿ ಇರುವ ಯಾವುದೇ ಪ್ರದೇಶದಲ್ಲಿ ಮಾರಾಟ ಮಾಡಲು ಅವರು ವಿನಾಯಿತಿ ಕೇಳುತ್ತಿದ್ದಾರೆ. ನಿಮ್ಮ ಆದೇಶದ ಪ್ರಕಾರ ಅವರು ದೆಹಲಿಯಲ್ಲಿ ಪಟಾಕಿ ಇಟ್ಟುಕೊಳ್ಳುವಂತಿಲ್ಲ. ಈಗ ಅವರು ಏನು ಮಾಡಬೇಕು? ಅರ್ಜಿದಾರರ ಪರ ವಕೀಲರು ದೆಹಲಿಯ ಹೊರಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎನ್ನುತ್ತಿದ್ದಾರೆ. ಆದರೆ, ನೀವು ದೆಹಲಿಯಲ್ಲಿ ಅವರ ಪರವಾನಗಿ ರದ್ದು ಮಾಡಿದ್ದೀರಿ” ಎಂದು ಪೀಠವು ಕೇಂದ್ರ ಸರ್ಕಾರದ ವಕೀಲ ಕೀರ್ತಿಮಾನ್ ಸಿಂಗ್‌ ಅವರನ್ನು ಪ್ರಶ್ನಿಸಿತು.

ದೆಹಲಿಯಲ್ಲಿ ಪಟಾಕಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಆಗ ಸರ್ಕಾರದ ವಕೀಲರು ಎಲ್ಲಿ ಅವರು ಪಟಾಕಿ ಮಾರಾಟ ಮಾಡುತ್ತಾರೆ ಎಂಬ ಮಾಹಿತಿಯನ್ನು ನೀಡಲು ಸಲಹೆ ಮಾಡಿದರು.

Also Read
ಆದೇಶ ಉಲ್ಲಂಘನೆ: ದೇಶದ ಆರು ಪ್ರಮುಖ ಪಟಾಕಿ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಆಗ ಪೀಠವು “ಸಿಂಗ್‌ ಅವರೇ ಪಟಾಕಿ ಕೊಂಡೊಯ್ಯಲು ಕೆಲವು ದಿನಗಳ ಮಟ್ಟಿಗೆ ಅವರಿಗೆ ನೀವು ಪರವಾನಗಿ ನೀಡಬೇಕಾಗುತ್ತದೆ” ಎಂದರು.

“ಆದೇಶದ ಸಿಂಧುತ್ವವನ್ನು ಪ್ರಶ್ನಿಸುವ ಹಕ್ಕನ್ನು ಕಾಯ್ದಿರಿಸಿ ದೀಪಾವಳಿ ಹಬ್ಬಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವುದರಿಂದ ತಮ್ಮ ಮನವಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ” ಎಂದು ನ್ಯಾಯಾಲಯದ ಆದೇಶದಲ್ಲಿ ದಾಖಲಿಸಿಕೊಂಡಿದೆ.

ಪ್ರಸಕ್ತ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವ ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com