
ಈ ಹಿಂದೆ ನ್ಯಾಯಾಲಯದ ಕಲಾಪದ ವೇಳೆ ಆಕ್ಷೇಪಾರ್ಹವಾದ ಹೇಳಿಕೆಗಳನ್ನು ನೀಡಿದ್ದರಿಂದಾಗಿ ಸಾರ್ವಜನಿಕ ಆಕ್ರೋಶ ಎದುರಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮತ್ತೆ ಅಂಥದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಕಲಾಪದ ವೇಳೆ ಮದುವೆಗೆ ಸಂಬಂಧಿಸಿದಂತೆ ಅವರು ಆಡಿರುವ ಮಾತುಗಳ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು ರಾಜ್ಯದ ಕೆಲವೆಡೆ ಪ್ರತಿಭಟನೆಗೆ ಕಾರಣವಾಗಿದೆ. ನ್ಯಾಯಮೂರ್ತಿಗಳ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಅಭಿಪ್ರಾಯಗಳು ವ್ಯಕ್ತವಾಗಿವೆ.
ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾ. ಶ್ರೀಶಾನಂದ ಅವರು, “ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂಬ ಆಚರಣೆ ಇಂದಿಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ” ಎಂದು ನೀಡಿರುವ ಹೇಳಿಕೆಯನ್ನು ಒಳಗೊಂಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ನಾಗರಿಕ ಒಕ್ಕೂಟಗಳು ಪ್ರತಿಭಟನೆ ನಡೆಸಿವೆ.
ಜನವರಿ 13ರಂದು ಯಾದಗಿರಿಯ ಸುರಪುರ ತಾಲ್ಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಸಾಮೂಹಿಕ ಸಂಘಟನೆಗಳ ಒಕ್ಕೂಟವು ಯಶಸ್ವಿಯಾಗಿ ಬಂದ್ ಆಚರಿಸಿ, ನ್ಯಾ. ಶ್ರೀಶಾನಂದ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ. ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರಿಗೆ ನ್ಯಾ. ಶ್ರೀಶಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬರೆದಿರುವ ಮನವಿ ಸಲ್ಲಿಕೆ ಮಾಡಲಾಗಿದೆ. ಶಹಾಪುರದಲ್ಲಿ ವಾಲ್ಮೀಕಿ ಸಂಘದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ, ನ್ಯಾ. ಶ್ರೀಶಾನಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ನ್ಯಾ. ವಿ ಶ್ರೀಶಾನಂದ ಅವರ ಹೇಳಿಕೆಯ ವಿಡಿಯೊ ತುಣುಕನ್ನು ತಮ್ಮ ಎಕ್ಸ್ ಖಾತೆಯಲ್ಲಿ ಲಗತ್ತಿಸಿ, "ಈ ವ್ಯಕ್ತಿ ನ್ಯಾಯಮೂರ್ತಿಯಾಗಿರಲು ಅರ್ಹರೇ? ಅಶ್ಲೀಲ ಮತ್ತು ಜಾತ್ಯತೀತ ವಿರೋಧಿ ಹೇಳಿಕೆ ನೀಡಿ ಸುಪ್ರೀಂ ಕೋರ್ಟ್ ಕ್ಷಮೆ ಕೋರಿದ್ದವರು ಇವರೇ" ಎಂದು ಟೀಕಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ನ್ಯಾ. ಶ್ರೀಶಾನಂದ ಅವರು ವಿಚಾರಣೆಯೊಂದರ ವೇಳೆ, "ಹಳೆಯ ಶಿಲಾಯುಗದ ಕಾಲದಲ್ಲಿ ಹೆಣ್ಣು ಮಕ್ಕಳಿಗೋಸ್ಕರ ಕಾದಾಟಗಳು ನಡೆದಿದ್ದು, ಹೆಣಗಳು ಬೀಳುತ್ತಿದ್ದವು. ಯಾರಿಗೆ ಶಕ್ತಿ ಇತ್ತೋ (ಮೈಟಿ ಇಸ್ ದಿ ರೈಟ್) ಅವನು ನಾಯಕನಾಗುತ್ತಿದ್ದ. ಆ ನಾಯಕನಿಗೆ ಆ ಹೆಣ್ಣು ಮಗಳನ್ನು ಒಪ್ಪಿಸಿ, ಉಳಿದವರು ಎರಡು ಅಥವಾ ಮೂರನೆಯವರಾಗಿ ಆ ಹೆಣ್ಣು ಮಗಳನ್ನು ಉಪಯೋಗಿಸಿಕೊಳ್ಳಬೇಕಿತ್ತು. ಈ ದುಷ್ಟ ಆಚರಣೆ ಈಗಲೂ ಸುರಪುರದಲ್ಲಿದೆ ಎಂಬುದು ನಿಮಗೆ ಗೊತ್ತಿರಲಿ" ಎಂದಿದ್ದ ವಿಡಿಯೋ ತುಣುಕು ವೈರಲ್ ಆಗಿದೆ.
ಮುಂದುವರೆದು ವಿಡಿಯೋದಲ್ಲಿ, "ಯಾರನ್ನು ಬೇಕಾದರೂ ನೀವು ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕ ಜೊತೆ ಎಂದಿದೆ. ಆಮೇಲೆ ಅಲ್ಲೇ ಇರಬಹುದು ಅಥವಾ ಊರು ಬೇರೆ ಕಡೆ ಹೋಗಿ ಮದುವೆ ಮಾಡಿಕೊಳ್ಳಬಹುದು. ಏನ್ ಸಾರ್ ಅದೆಲ್ಲವೂ ಸಾಧ್ಯವಾ? ಎಂದರೆ ಆ ಥರ ಈಗಲೂ ನಡೆಯುತ್ತಿದೆ. ಅದರ ಮೇಲೆ ಬೇಕಾದಷ್ಟು ಚಲನಚಿತ್ರಗಳು ಬಂದಿವೆ. ಬೆತ್ತಲೆ ಸೇವೆ ಅಂಥ ಸಿನಿಮಾ ಬಂದಿದೆ. ಇನ್ನೊಂದು, ಮತ್ತೊಂದು ಬಂತು ಎಲ್ಲವೂ ಆಯ್ತು. ಸರಿಹೋಯ್ತ ಎಂದು ನೋಡಿದರೆ ಇನ್ನೂ ಸರಿ ಹೋಗಲಿಲ್ಲ. ದೇವದಾಸಿಯರು ಎಂದರೆ ಏನು? ಅವರೂ ಅದೇನೇ… ಎಲ್ಲ ಬೇಕಾದಷ್ಟು ಮಾಡಿಕೊಂಡರು.. ಅದು ಇರಲಿ.. ನಾವು ಆ ವಿಚಾರದ ಮೇಲಿಲ್ಲ” ಎಂದಿದೆ. ವಿಡಿಯೋ ಕ್ಲಿಪ್ 1.18 ನಿಮಿಷ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆಕ್ರೋಶ, ಪ್ರತಿಭಟನೆಗಳಿಗೆ ಕಾರಣವಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಲಾಪದ ವೇಳೆ ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಏಕೆಂದರೆ ಅದು ಪಾಕಿಸ್ತಾನದಲ್ಲಿದೆ ಎನ್ನುವ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿತ್ತು. ಅದೇ ರೀತಿ, ಮಹಿಳಾ ವಕೀಲೆಯೊಬ್ಬರ ಜೊತೆ ಕೀಳು ಅಭಿರುಚಿಯಿಂದ ಮಾತನಾಡಿದ್ದ ವಿಡಿಯೋ ಕೂಡ ವ್ಯಾಪಕವಾಗಿ ಪ್ರಸರಣಗೊಂಡಿತ್ತು. ಇವುಗಳನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಿಗೇ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮುಕ್ತ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದರು.
“ಅದೆಲ್ಲವೂ ಮುಗಿದ ಅಧ್ಯಯ. ಯಾವುದೇ ಹಿನ್ನಡೆಯಲಾಗಿಲ್ಲ. ಮುಕ್ತ ನ್ಯಾಯಾಲಯದಲ್ಲಿ ಕೆಲವು ವಿಚಾರಗಳನ್ನು ಸ್ಪಷ್ಟಪಪಡಿಸುವ ಉದ್ದೇಶವನ್ನು ನಾನು ನಿಲ್ಲಿಸುತ್ತೇನೆ. ನಾನೇಕೆ ಅದನ್ನು ಮಾಡಬೇಕು. ನಾನು ಇಲ್ಲಿ ನ್ಯಾಯಮೂರ್ತಿಯ ಕೆಲಸವನ್ನು ನಿಭಾಯಿಸಬೇಕು. ಅದನ್ನು ಮಾಡುತ್ತೇನೆ. ನಮ್ಮ ಕೆಲವು ಸ್ನೇಹಿತರಿಗೆ ಕಾನೂನು ತತ್ವದ ಶಿಕ್ಷಣ ಅಗತ್ಯವೆನಿಸಿದರೆ ಅವರು ಉಪನ್ಯಾಸ ಕಾರ್ಯಕ್ರಮ ಆಯೋಜಿಸಬಹುದು. ನಾನು ಅಲ್ಲಿಗೆ ತೆರಳಿ ಮಾತನಾಡುತ್ತೇನೆ” ಎಂದಿದ್ದರು.
“ನ್ಯಾಯಾಲಯದಲ್ಲಿ ಹೇಳಿದ್ದನ್ನು ಜನರು ತಿರುಚಿ ಹೇಳಿದಾಗ, ಅದಕ್ಕೆ ನಾವು ಅವಕಾಶವನ್ನೇಕೆ ನೀಡಬೇಕು? ಪ್ರಕರಣಕ್ಕೆ ಏನು ಬೇಕಿದೆ ಅದನ್ನು ಖಂಡಿತಾ ನ್ಯಾಯಾಲಯ ನಿರ್ಧರಿಸಲಿದೆ. ಅದನ್ನು ನಿಲ್ಲಿಸುವುದಿಲ್ಲ. ಜ್ಞಾನ ಹಂಚಿಕೊಳ್ಳಲು ಇತರೆ ವೇದಿಕೆಗಳಿವೆ. ಅಲ್ಲಿ ಅದನ್ನು ಹಂಚಿಕೊಳ್ಳಬಹುದು. ಮಾನಸಿಕ ನೆಮ್ಮದಿಯೂ ಬೇಕಲ್ಲವೇ? ನ್ಯಾಯಮೂರ್ತಿಯಾಗಿ ನಿರ್ದಿಷ್ಟ ವಿಧಾನದಲ್ಲಿ ನಾನು ಕೆಲಸ ಮಾಡಲು ಯಾರೂ ನಿರ್ಬಂಧಿಸಲಾಗದು. ಎರಡು ಮೂರು ದಿನಗಳ ಟ್ರಾಮಾ, ಮಾನಸಿಕ ನೋವು, ಅದು ನನಗೆ ಅಗತ್ಯವೇ? ಯಾರಿಗಾದರೂ ಜ್ಞಾನ ಬೇಕಾದರೆ ಆನ್‌ಲೈನ್ ಉಪನ್ಯಾಸ ನೀಡೋಣ. 15 ದಿನ ಅಥವಾ ತಿಂಗಳಿಗೊಮ್ಮೆ ನಿರ್ದಿಷ್ಟ ವಿಚಾರದ ಕುರಿತು ಚರ್ಚಿಸೋಣ. ಆದರೆ, ನ್ಯಾಯಾಲಯದಲ್ಲಲ್ಲ. ಪ್ರಕರಣವೇನಿದೆ ಅದನ್ನು ನೋಡಿ ಅಲ್ಲಿಯೇ ಆದೇಶ ಮಾಡುತ್ತೇನೆ. ಅನಗತ್ಯವಾಗಿ ಇದೆಲ್ಲ ಏಕೆ? ನನ್ನ ಬಗ್ಗೆ ಗೊತ್ತಿರುವವರು ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ” ಎಂದಿದ್ದರು.