ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಸೇರಿ 5 ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ, ಸರಕು & ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಸೇರಿ 5 ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಸೇರಿದಂತೆ ಐದು ಮಸೂದೆಗಳು ಸೋಮವಾರ ವಿಧಾನಸಭೆಯಲ್ಲಿ ಅನುಮೋದನೆಯಾಗಿವೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಅನುಮೋದನೆಗೊಂಡಿವೆ.

ಉಳಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ತಿದ್ದುಪಡಿ ವಿಧೇಯಕ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ ವಿಧೇಯಕ): ಕರ್ನಾಟಕ ಸ್ಟಾಂಪುಗಳ ಅಧಿನಿಯಮ 1957ರ ಮೇರೆಗೆ ಮಾರ್ಗಸೂಚಿ ಮೌಲ್ಯಕ್ಕೆ ಸಂಬಂಧಿಸಿದಂತೆ ಉಪಕರದ ಪ್ರಮಾಣ, ಪರಿಶೀಲನಾ ಶುಲ್ಕ ಇತ್ಯಾದಿಗಳನ್ನು ನಿರ್ದಿಷ್ಟಪಡಿಸಲು ಮತ್ತು ಹಿಂದೆ ಉಪಕರ ಪರಿಶೀಲನಾ ಶುಲ್ಕ ಇತ್ಯಾದಿಗಳನ್ನು ಸಂಗ್ರಹಿಸಿದನ್ನು ಸಿಂಧುಗೊಳಿಸಲು ಉಪಬಂಧ ಕಲ್ಪಿಸುವುದಕ್ಕಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020 ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976ನ್ನು ತಿದ್ದುಪಡಿ ಮಾಡುವುದು ಅವಶ್ಯಕ ಎಂದು ಪರಿಗಣಿಸಲಾಗಿದೆ.

ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ: ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಪುರಾತನ ದೇವಾಲಯವಾಗಿದೆ. ಮುಖ್ಯ ದೇವಾಲಯವು ಪರಶುರಾಮ ದೇವಸ್ಥಾನ, ತೀರ್ಥಕೊಂಡ ಮ್ತು ಇತರ ಧಾರ್ಮಿಕ ಸ್ಥಳಗಳಿಂದ ಆವೃತವಾಗಿದೆ.

ವಿಶೇಷವಾಗಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತರ ಅನುಕೂಲಕ್ಕಾಗಿ ಮೂಲಭೂತ ಅವಶ್ಯಕತೆ ಮತ್ತು ಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಈ ಸ್ಥಳದ ಪಾವಿತ್ರ್ಯತೆ ಕಾಪಾಡಲು ಮತ್ತು ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಸಲುವಾಗಿ ಯಲ್ಲಮ್ಮ ಕ್ಷೇತ್ರದ ಪುರಾತತ್ವ ಅವಶೇಷ ಮತ್ತ ನೈಸರ್ಗಿಕ ಪರಿಸರಗಳೊಂದಿಗೆ ಅದರ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಲು, ಸಾಂಸ್ಕೃತಿಕ ಅಸ್ಮಿತೆ ರಕ್ಷಿಸಲು, ಯಾತ್ರಾ ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರ ಅಭಿವೃದ್ಧಿಪಡಿಸಲು ಹಾಗೂ ಈ ಪ್ರದೇಶದ ಅನಿಯಂತ್ರಿತ ಅಭಿವೃದ್ಧಿ ಮತ್ತು ಪ್ರದೇಶದ ವಾಣಿಜ್ಯ ನಿಬಿಡತೆಯನ್ನು ತಡೆಗಟ್ಟಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸುವುದು ಅಗತ್ಯ ಎಂದು ಪರಿಗಣಿಸಲಾಗಿದೆ.

Also Read
ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ತಿದ್ದುಪಡಿ ವಿಧೇಯಕವನ್ನು 2023-24ರ ಆಯವ್ಯಯ ಭಾಷಣದಲ್ಲಿನ ಪ್ರಸ್ತಾವ ಜಾರಿಗೆ ತರಲು, ಉಪಮುಖ್ಯಮಂತ್ರಿ ಮತ್ತು ಬುಡಕಟ್ಟು ಕಲ್ಯಾಣ ಮಂತ್ರಿ ಅವರನ್ನು ರಾಜ್ಯ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್‌ಗೆ ಪದನಿಮಿತ್ತ ಸದಸ್ಯರಾಗಿ ಸೇರಿಸಲು, ಬುಡಕಟ್ಟು ಕಲ್ಯಾಣ ಮಂತ್ರಿ ಅವರನ್ನು ಅನುಸೂಚಿತ ಜಾತಿಗಳ ಉಪಹಂಚಿಕೆ/ಬುಡಕಟ್ಟು ಉಪಹಂಚಿಕೆ ನೋಡಲ್‌ ಏಜೆನ್ಸಿಗೆ ಉಪಾಧ್ಯಕ್ಷರಾಗಿ ಸೇರಿಸಲು ತಿದ್ದುಪಡಿ ಮಾಡುವುದು ಅಗತ್ಯ ಎಂದು ಪರಿಗಣಿಸಲಾಗಿದೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ: ವಿಜಯನಗರ ಹೆಸರಿನ ಹೊಸ ಜಿಲ್ಲೆಯನ್ನು ರಚಿಸಲಾಗಿದೆ. ಆದ್ದರಿಂದ ಪ್ರಾಧಿಕಾರವು ಸುಗಮ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ಯೋಜಿತ ಅಭಿವೃದ್ಧಿ ಕಾರ್ಯಗತಗೊಳಿಸಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಅಧಿನಿಯಮ 2002 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅಗತ್ಯ ಎಂದು ಪರಿಗಣಿಸಲಾಗಿದೆ.

Attachment
PDF
Hampi World Heritage Area Management Authority Amendment Bill.pdf
Preview
Attachment
PDF
Karnataka SC Sub-Allocation and Tribal sub allocation and utilization Bill.pdf
Preview
Attachment
PDF
Shree Renuka Yellamma Kshetra Tourism Development Board Bill.pdf
Preview
Attachment
PDF
BBMP & certain other law (amendment) Bill 2023.pdf
Preview
Kannada Bar & Bench
kannada.barandbench.com