ಇಲ್ಲಿದೆ ಕೇಂದ್ರ ಸರ್ಕಾರ 'ರಾಷ್ಟ್ರೀಯ ಭದ್ರತೆ'ಯ ವಾದ ಮಂಡಿಸಿದ ಐದು ಪ್ರಕರಣಗಳ ವಿವರ

ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ವಾದ ಮುಂದಿಟ್ಟ ಐದನೇ ಪ್ರಕರಣ ಪೆಗಸಸ್ ಆಗಿದ್ದು ಅಂತಹ ಉಳಿದ ನಾಲ್ಕು ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲಿದೆ.
North and South Block
North and South Block
Published on

ಪೆಗಸಸ್‌ ಹಗರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಉಂಟಾಗಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಮನವಿಗಳಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಪ್ರಕರಣವೊಂದರಲ್ಲಿ ನ್ಯಾಯಾಂಗದ ಮಧ್ಯಪ್ರವೇಶವನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ವಾದ ಮುಂದಿಟ್ಟ ಐದನೇ ಪ್ರಕರಣ ಇದಾಗಿದೆ. ಉಳಿದ ನಾಲ್ಕು ಪ್ರಕರಣಗಳ ವಿವರ ಹೀಗಿದೆ:

ರಫೇಲ್ ಹಗರಣ

ನ್ಯಾಯಾಂಗ ಪರಿಶೀಲನೆಯಿಂದ ದೂರವಿರುವಂತೆ ನ್ಯಾಯಾಲಯವನ್ನು ಕೋರುವ ಸಲುವಾಗಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆಯ ವಾದವನ್ನು ಅಖಾಡಕ್ಕಿಳಿಸಿದ ಅತ್ಯಂತ ಮಹತ್ವದ ಪ್ರಕರಣಗಳಲ್ಲಿ ಇದೂ ಒಂದು. ಪರಿಣಾಮ, ಸರ್ಕಾರ ಕೆಲ ವಿವರಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿತು.

ಹಗರಣದ ತನಿಖೆ ಕೋರಿದ್ದ ಅರ್ಜಿಗೆ ಅಂತಿಮವಾಗಿ ಸುಪ್ರೀಂಕೋರ್ಟ್‌ ಅನುಮತಿ ನೀಡಲಿಲ್ಲ. ಆದರೂ, ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ನೀಡಿದ ವಿವರ ಮತ್ತು ನ್ಯಾಯಾಲಯದ ತೀರ್ಪಿನ ನಡುವೆ ಸ್ಪಷ್ಟವಾದ ಹೊಂದಾಣಿಕೆಯಿಲ್ಲದಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕಾರಣವಾಯಿತು. ಮರು ಪರಿಶೀಲನೆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಯ ವಾದವನ್ನೂ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಮತ್ತು ರಹಸ್ಯ ದಾಖಲೆಗಳ ನಕಲು ಪ್ರತಿಗಳನ್ನು ಲಗತ್ತಿಸುವ ಮೂಲಕ ಅರ್ಜಿದಾರರು ಕಳ್ಳತನ ಮಾಡಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದು ಎಂದು ರಕ್ಷಣಾ ಸಚಿವಾಲಯ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದ ಅಫಿಡವಿಟ್‌ನಲ್ಲಿ ಹೇಳಿದೆ. ಅಂತಿಮವಾಗಿ ಈ ಮರುಪರಿಶೀಲನಾ ಅರ್ಜಿಗಳನ್ನು ಕೂಡ ನ್ಯಾಯಾಲಯ ವಜಾಗೊಳಿಸಿತು.

ಕಾಶ್ಮೀರ ಅಂತರ್ಜಾಲ ನಿಷೇಧ

370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧವನ್ನು ಪ್ರಶ್ನಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರ ಪ್ರಸ್ತಾಪಿಸಲಾಯಿತು. ರಾಷ್ಟ್ರೀಯ ಭದ್ರತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ದೃಷ್ಟಿಯಿಂದ ಅಂತರ್ಜಾಲದ ಮೇಲೆ ನಿರ್ಬಂಧಗಳು ಅಗತ್ಯವೆಂದು ಕೇಂದ್ರ ಸರ್ಕಾರ ವಾದಿಸಿತು.

ಅಂತರ್ಜಾಲ ಮತ್ತು ದೂರಸಂಪರ್ಕಕ್ಕೆ ಅವಕಾಶ ನೀಡಿದರೆ ಕಣಿವೆ ರಾಜ್ಯದಲ್ಲಿ ಭಾರತ ವಿರೋಧಿ ವ್ಯಕ್ತಿಗಳ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂಬುದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದವಾಗಿತ್ತು. ನಿರ್ಬಂಧಗಳು ಜಾರಿಯಾದ 5 ತಿಂಗಳ ನಂತರ ಜನವರಿ 10 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿತು. ಅಂತರ್ಜಾಲದ ಮೂಲಕ ವ್ಯಾಪಾರ ಅಥವಾ ವೃತ್ತಿ ನಡೆಸುವ ಸ್ವಾತಂತ್ರ್ಯ ಸಂವಿಧಾನದ 19 ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ಅದು ಹೇಳಿತು.

Also Read
ತನ್ಹಾ ಇತರರಿಗೆ ಜಾಮೀನು ನಿರಾಕರಿಸಲು ಕೋರಿರುವ ಅರ್ಜಿಯಲ್ಲಿ ಸುಪ್ರೀಂ ಎದುರು ದೆಹಲಿ ಪೊಲೀಸರು ಬಿಚ್ಚಿಟ್ಟ ಆರು ಅಂಶಗಳು

ಭೀಮಾ ಕೋರೆಗಾಂವ್

ರಾಷ್ಟ್ರೀಯ ಭದ್ರತೆಯ ಸಮಸ್ಯೆಯನ್ನು ಉಲ್ಲೇಖಿಸಿರುವ ಇತ್ತೀಚಿನ ಪ್ರಕರಣಗಳಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿರುವ ಭೀಮಾ ಕೋರೆಗಾಂವ್ ಕೇಸ್‌ ಕೂಡ ಒಂದು. ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸುವುದನ್ನು ಪ್ರಶ್ನಿಸಿ ಆರೋಪಿಗಳಾದ ಸುರೇಂದ್ರ ಗಾಡ್ಲಿಂಗ್ ಮತ್ತು ಸುಧೀರ್ ಧವಳೆ ಅವರು ಸಲ್ಲಿಸಿದ ಮನವಿಯಲ್ಲಿ ಕೇಂದ್ರ ಸರ್ಕಾರ ಈ ವಾದ ಮಂಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ ಅಫಿಡವಿಟ್ ನಲ್ಲಿ, "ಅಪರಾಧ ಗುರುತರವಾಗಿರುವುದು ಮತ್ತು ಅದರ ಅಂತರ-ರಾಜ್ಯ ನಂಟು ಹಾಗೂ ರಾಷ್ಟ್ರೀಯ ಭದ್ರತೆಯ ಮೇಲೆ ಬೀರುವ ಪರಿಣಾಮ” ಪರಿಗಣಿಸಿ ಕೇಂದ್ರ ಸರ್ಕಾರ ತನಿಖೆ ವಹಿಸಿಕೊಳ್ಳುವಂತೆ ಎನ್‌ಐಎಗೆ ಸೂಚಿಸಿದೆ ಎಂದು ತಿಳಿಸಲಾಗಿದೆ.

ರೋಹಿಂಗ್ಯಾ ನಿರಾಶ್ರಿತರು

ಮ್ಯಾನ್ಮಾರ್‌ನಿಂದ ಬಂದ ರೋಹಿಂಗ್ಯಾ ನಿರಾಶ್ರಿತರಿಗೆ ಸಂಬಂಧಿಸಿದ ಪ್ರಕರಣದಲ್ಲಿಯೂ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ಸಂಗತಿ ಪ್ರಸ್ತಾಪಿಸಿದೆ. ಸರ್ಕಾರವು 2017 ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಮುಂದುವರೆಸುವುದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಹೇಳಿತು. ತಮ್ಮನ್ನು ಗಡಿಪಾರು ಮಾಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಇಬ್ಬರು ರೋಹಿಂಗ್ಯಾಗಳ ಕೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತ್ತು.

Kannada Bar & Bench
kannada.barandbench.com