ಸುಪ್ರೀಂಕೋರ್ಟ್ ಕದ ತಟ್ಟಿದ ಪೆಗಸಸ್ ಗೂಢಚರ್ಯೆ ಪಟ್ಟಿಯಲ್ಲಿರುವ ಐವರು ಪತ್ರಕರ್ತರು

ಪೆಗಸಸ್ ಬಳಕೆಗೆ ಸಂಬಂಧಿಸಿದ ಎಲ್ಲಾ ತನಿಖೆ, ಅಧಿಕಾರ ಮತ್ತು ಆದೇಶಗಳ ಕುರಿತಾದ ಸಾಕ್ಷ್ಯ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮತ್ತು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಅರ್ಜಿದಾರರು ಕೋರಿದ್ದಾರೆ.
Paranjoy Thakurta, Abdi, Prem  Jha, Rupesh Kumar Singh and Ipsa, Pegasus, Supreme Court
Paranjoy Thakurta, Abdi, Prem Jha, Rupesh Kumar Singh and Ipsa, Pegasus, Supreme Court

ಮಾಧ್ಯಮ ವರದಿಗಳ ಪ್ರಕಾರ ಪೆಗಸಸ್ ಬೇಹು-ತಂತ್ರಾಂಶಗಳ ವಿಚಕ್ಷಣೆಗೆ ಗುರಿಯಾಗಿದ್ದ ಐವರು ಪತ್ರಕರ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ಗೂಢಚರ್ಯೆ ನಡೆಸುವುದು ಸಂವಿಧಾನದ ಅಡಿ ಒದಗಿಸಲಾದ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.

ಪತ್ರಕರ್ತರಾದ ಪರಂಜಯ್‌ ಗುಹಾ ಠಾಕೂರ್ತಾ, ಎಸ್‌ಎನ್‌ಎಂ ಅಬ್ದಿ, ಪ್ರೇಮಶಂಕರ್‌ ಝಾ, ರೂಪೇಶ್‌ ಕುಮಾರ್‌ ಸಿಂಗ್‌, ಇಪ್ಸಾ ಶತಾಕ್ಷಿ ತಮ್ಮ ವಿರುದ್ಧ ಪೆಗಸಸ್‌ ಬಳಕೆಗೆ ಸಂಬಂಧಿಸಿದ ಎಲ್ಲಾ ತನಿಖೆ, ಅಧಿಕಾರ ಮತ್ತು ಆದೇಶಗಳ ಕುರಿತಾದ ಸಾಕ್ಷ್ಯ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮತ್ತು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಖಾಸಗಿತನದ ಮೇಲಿನ ಆಕ್ರಮಣ ಮತ್ತು ಹ್ಯಾಕಿಂಗ್‌ ಕುರಿತು ಯಾವುದೇ ದೂರುಗಳನ್ನು ಪರಿಗಣಿಸಲು ಮತ್ತು ಅದಕ್ಕೆ ಕಾರಣರಾದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಶಿಕ್ಷಿಸಲು ನ್ಯಾಯಾಂಗ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಅರ್ಜಿದಾರರು ಪ್ರಾರ್ಥಿಸಿದ್ದಾರೆ.

Also Read
ಪೆಗಾಸಸ್‌ ಗೂಢಚರ್ಯೆ: ನ್ಯಾಯಾಲಯದ ನೇತೃತ್ವದಲ್ಲಿ ಹಗರಣದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ಅರ್ಜಿಯ ಪ್ರಮುಖಾಂಶಗಳು

  • ತಮ್ಮನ್ನು ಆಳವಾದ ಕಣ್ಗಾವಲಿಗೆ ಒಳಪಡಿಸಲಾಗಿದೆ ಮತ್ತು ಕೇಂದ್ರ ಸೆರ್ಕಾರ ಅಥವಾ ಯಾವುದೋ ಮೂರನೇ ವ್ಯಕ್ತಿ ಹ್ಯಾಕಿಂಗ್‌ಗೆ ಒಳಪಡಿಸಿದ್ದಾರೆ.

  • ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭದ್ರತಾ ಪ್ರಯೋಗಾಲಯ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳಿಂದ ಪೆಗಸಸ್‌ ಭದ್ರತಾ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ.

  • ಪತ್ರಕರ್ತರ ಮೂಲಗಳು ಹಾಗೂ ಮಾಹಿತಿದಾರರಿಗೆ ಈ ರೀತಿಯ ಬೇಹಗಾರಿಕೆ/ ಕಣ್ಗಾವಲು ನಿರ್ದಿಷ್ಟ ಬೆದರಿಕೆಯೊಡ್ಡಿದೆ. ಸರ್ಕಾರದ ಪಾರದರ್ಶಕ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸುವ ಸದೃಢ ಮತ್ತು ಮುಕ್ತ ಪತ್ರಿಕೋದ್ಯೋಗ ಅಸ್ತಿತ್ವದಲ್ಲಿರಲು ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು.

  • ಅರ್ಜಿದಾರರು ಸಲ್ಲಿಸಿದ ಅರ್ಜಿಯ ಪ್ರಕಾರ, ಸರ್ಕಾರಿ- ಪ್ರಾಯೋಜಿತ ಕಾನೂನುಬಾಹಿರ ಹ್ಯಾಕಿಂಗ್‌ನಿಂದ ಉಂಟಾದ ಹಾನಿ ಅಸಾಮಾನ್ಯವಾಗಿದ್ದು ಮತ್ತು ಹೋಲಿಸಲು ಅಸಾಧ್ಯವಾದುದಾಗಿದೆ. ಸಂವಿಧಾನದ 19 ಮತ್ತು 21ನೇ ವಿಧಿ ಅಡಿಯಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

  • ಪೆಗಸಸ್‌ನಂತಹ ಕುತಂತ್ರಾಂಶ ಬಳಕೆಯಿಂದ ಭಾರತೀಯ ನಾಗರಿಕರನ್ನು ರಕ್ಷಿಸುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

Also Read
ಪೆಗಾಸಸ್‌ ಹಗರಣ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ ಸರ್ಕಾರ

ಐಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು 'ಕಂಪ್ಯೂಟರ್' ಮತ್ತು 'ಕಂಪ್ಯೂಟರ್ ಸಿಸ್ಟಂ' ನ ವಿವರಣೆಗೆ ಒಳಪಡುವ ಸ್ಮಾರ್ಟ್ ಫೋನ್‌ಗಳನ್ನು ಪೆಗಸಸ್ ನಂತಹ ಮಿಲಿಟರಿ ದರ್ಜೆಯ ತಂತ್ರಜ್ಞಾನವನ್ನು ಬಳಸಿ ಹ್ಯಾಕ್‌ ಮಾಡುವುದು ಕಾನೂನುಬಾಹಿರ ಎಂದು ತಿಳಿಸಲಾಗಿದೆ.

"ಈ ಕಾರಣಗಳಿಂದಾಗಿ ಐಟಿ ಕಾಯಿದೆ ಅನ್ವಯ ಪೆಗಸಸ್‌ ಒಂದು 'ಕಂಪ್ಯೂಟರ್ ವೈರಸ್‌' ಮತ್ತು 'ಕಂಪ್ಯೂಟರ್ ಹಾನಿಕಾರಕ'ವಾಗಿದ್ದು ಇದರ ಉದ್ದೇಶ ಗುರಿಗೀಡಾದ ಉಪಕರಣಗಳಿಗೆ ತಾನಾಗಿಯೇ ಜೋಡಣೆಗೊಂಡು ಆನಂತರ ಆ ಗುರಿಗೀಡಾದ ಉಪಕರಣವನ್ನು ತಿರುಚಿ, ದತ್ತಾಂಶವನ್ನು ಸಂಗ್ರಹಿಸಿ, ದಾಖಲಿಸಿ, ಪ್ರಸರಿಸುವುದಾಗಿದೆ," ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪೆಗಸಸ್‌ ಗೂಢಚರ್ಯೆಗೆ ನೇರವಾಗಿ ತುತ್ತಾದ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋದ ಮೊದಲ ಪ್ರಕರಣ ಇದಾಗಿದೆ. ಹಗರಣ ಕುರಿತು ತನಿಖೆ ನಡೆಸಲು ಕೋರಿ ಪ್ರಸ್ತುತ ಮೂರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಇವು ಮೂರನೇ ವ್ಯಕ್ತಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಸ್ವರೂಪದಲ್ಲಿವೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ನ್ಯಾಯಪೀಠ ಆಗಸ್ಟ್ 5 ರಂದು ಪಿಐಎಲ್‌ಗಳ ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com