ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಅಧಿಸೂಚನೆ ಹೊರಡಿಸಲು 5 ತಿಂಗಳು ಬೇಕು: ಸರ್ಕಾರದ ವಿವರಣೆ

ಇದೇ ವಿಷಯದ ಬಗ್ಗೆ ಈಗಾಗಲೇ ಆದೇಶ ಕಾಯ್ದಿರಿಸಿರುವಾಗ, ವಿಚಾರಣೆ ಮುಂದುವರಿಸುವುದು ಹೇಗೆ? ಈ ಬಗ್ಗೆ ಧಾರವಾಡ ಹೈಕೋರ್ಟ್ ಪೀಠದಿಂದ ಮಂಗಳವಾರ ಸ್ಪಷ್ಟನೆ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ.
Karnataka High Court
Karnataka High Court
Published on

ನವೆಂಬರ್ ಅಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 180ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು 150 ದಿನಗಳು ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿತು.

ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ 16 ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು ಹಾಗೂ ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 65ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಅವಧಿ ಮುಗಿಯಲಿರುವ ಸುಮಾರು 188 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳು ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು. ಅದರಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಜತೆಗೆ ಕೆಲವು ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಬೇಕಿದೆ. ಮೊದಲು ಕರಡು ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಿ ಅವುಗಳನ್ನು ಇತ್ಯರ್ಥಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಇದಕ್ಕೆ ಸಮಯ ಹಿಡಿಯುತ್ತದೆ. ಆದ್ದರಿಂದ, 150 ದಿನಗಳು ಬೇಕಾಗುತ್ತದೆ. ಮೀಸಲಾತಿ ಅಂತಿಮ ಅಧಿಸೂಚನೆ ಬಳಿಕ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬಹುದು” ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವ ಹಾಗೂ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಕಾಲಕ್ಕೆ ಚುನಾವಣೆ ನಡೆಸದೇ ಸುದೀರ್ಘ ಅವಧಿಗೆ ಸ್ಥಳೀಯ ಸಂಸ್ಥೆಗಳನ್ನು ಖಾಲಿ ಇಡುವುದು, ಮಿತಿಗಿಂತ ಹೆಚ್ಚು ಅವಧಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವುದು ಸಂವಿಧಾನ ಮತ್ತು ಕಾಯಿದೆಗೆ ವಿರುದ್ಧವಾಗಿದೆ. ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗಷ್ಟೇ ವಾರ್ಡ್ ಪುನರ್ ವಿಂಗಡಣೆ ಮಾಡಬೇಕಿದೆ. ಇದು ಮುಗಿಸಿ ಸರ್ಕಾರ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ, ಅದರ ಜೊತೆ ಜೊತೆಯಾಗಿ ಆಯೋಗ ಮತದಾರರ ಪಟ್ಟಿ ತಯಾರಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಬಸವರಾಜ್ ಅವರು “ವಾರ್ಡ್ ಮರು ವಿಂಗಡಣೆ ಮಾಡಲು, ಮೀಸಲಾತಿ ನಿಗದಿಪಡಿಸಲು ತಮ್ಮದೇನು ಅಡ್ಡಿಯಿಲ್ಲ. ಒಂದೊಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದೇ ಆದಲ್ಲಿ, ಎಲ್ಲಾ ಅರ್ಜಿದಾರರು ತಮ್ಮ ಮನವಿಯಿಂದ ಹಿಂದೆ ಸರಿಯಲಿದ್ದಾರೆ. ಆದರೆ, ಅಸಲಿಗೆ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಬೇಕಿಲ್ಲ. ಆದಷ್ಟು ಬೇಗ ಸ್ಥಳೀಯ ಸಂಸ್ಥೆಗಳನ್ನು ಆಡಳಿತಾಧಿಕಾರಿಗಳ ವಶಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರ ಹೊಂದಿದೆ. ಆಡಳಿತಾಧಿಕಾರಿಗಳ ನೇಮಕಕ್ಕೆ ಸರ್ಕಾರ ಯಾಕಿಷ್ಟು ಆತುರಪಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಈಗಾಗಲೇ ಬಿಬಿಎಂಪಿಗೆ ಏಳೆಂಟು ವರ್ಷಗಳಿಂದ ಚುನಾವಣೆ ನಡೆದಿಲ್ಲ, ಪಂಚಾಯಿತಿಗಳಿಗೆ ನಾಲ್ಕು ವರ್ಷಗಳಿಂದ ಚುನಾವಣೆ ಆಗಿಲ್ಲ. ಈಗ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿದರೆ, ಕನಿಷ್ಠ ಒಂದು ವರ್ಷದ ತನಕ ಸರ್ಕಾರ ಚುನಾವಣೆ ನಡೆಸುವುದಿಲ್ಲ” ಎಂದು ಆರೋಪಿಸಿದರು.

Also Read
[ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನ] ರಾಜ್ಯಪತ್ರದಲ್ಲಿ ಮೀಸಲಾತಿ ಪ್ರಕಟ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಸರ್ಕಾರ ಮತ್ತು ಚುನಾವಣಾ ಆಯೋಗದ ವಾದ ಆಲಿಸಿದ ಪೀಠವು ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ, ಅದಕ್ಕೂ ಮೊದಲು ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ನಿರ್ದಿಷ್ಠವಾಗಿ ಯಾವ ಕಾಲಮಿತಿಯಲ್ಲಿ ಮುಗಿಯಲಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯ ನಡೆಸಬಹುದುದೇ ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಬುಧವಾರದಂದು (ನವೆಂಬರ್‌ 5) ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಿತು. ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.

ಅಲ್ಲದೇ, ಅವಧಿ ವಿಸ್ತರಿಸಬೇಕು ಮತ್ತು ಆಡಳಿತಾಧಿಕಾರಿ ನೇಮಕ ಮಾಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಧಾರವಾಡ ಹೈಕೋರ್ಟ್ ಪೀಠ ಆದೇಶ ಕಾಯ್ದಿರಿಸಿದೆ ಎಂದು ಹೇಳಲಾಗಿದೆ. ಹೀಗಾಗಿ, ಇದೇ ವಿಷಯದ ಬಗ್ಗೆ ಈಗಾಗಲೇ ಆದೇಶ ಕಾಯ್ದಿರಿಸಿರುವಾಗ, ವಿಚಾರಣೆ ಮುಂದುವರಿಸುವುದು ಹೇಗೆ? ಈ ಬಗ್ಗೆ ಧಾರವಾಡ ಹೈಕೋರ್ಟ್ ಪೀಠದಿಂದ ಮಂಗಳವಾರ ಸ್ಪಷ್ಟನೆ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಪೀಠ ಸೂಚಿಸಿತು.

Kannada Bar & Bench
kannada.barandbench.com