ನಗದು ದೊರೆತಿಲ್ಲ; ನನ್ನನ್ನು ಸಿಲುಕಿಸಲು ಪಿತೂರಿ: ನ್ಯಾ. ವರ್ಮಾ ಪ್ರತಿಕ್ರಿಯೆ

ದೋಷಮುಕ್ತನಾಗುವ ನಿಟ್ಟಿನಲ್ಲಿ ನ್ಯಾಯಮೂರ್ತಿಯಾಗಿ ನನ್ನ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಬೇಕು ಎಂಬುದು ತಮ್ಮ ಕೋರಿಕೆ ಎಂದು ಹೇಳಿದ್ದಾರೆ ನ್ಯಾ. ವರ್ಮಾ.
Justice Yashwant Varma
Justice Yashwant Varma
Published on: 

ಅಗ್ನಿ ಆಕಸ್ಮಿಕಕ್ಕೆ ತುತ್ತಾದ ದೆಹಲಿಯ ತಮ್ಮ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ತಮ್ಮ ಮೇಲೆ ಸುಳ್ಳು ಆಪಾದನೆ ಮಾಡುವ ಮತ್ತು ಅಪಪ್ರಚಾರದ ಪಿತೂರಿಯ ಭಾಗ ಎಂದು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಹೇಳಿದ್ದಾರೆ.

ನ್ಯಾ. ವರ್ಮಾ ಅವರಿಂದ ಶನಿವಾರ ನ್ಯಾಯಾಂಗ ಕಾರ್ಯ ಹಿಂಪಡೆದ ಸಿಜೆಐ, ತನಿಖೆಗಾಗಿ ವಿವಿಧ ಹೈಕೋರ್ಟ್‌ಗಳ ಮೂವರು ನ್ಯಾಯಮೂರ್ತಿಗಳನ್ನು ನೇಮಿಸಿದರು. ಈ ಮಧ್ಯೆ ದೆಹಲಿ ಹೈಕೋರ್ಟ್ ಸಿಜೆ ಅವರು ಸಲ್ಲಿಸಿದ ವರದಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾ. ವರ್ಮಾ ಅವರ ಪ್ರತಿಕ್ರಿಯೆ ಕೂಡ ಪ್ರಕಟಿಸಿತು.

Also Read
ನ್ಯಾ. ವರ್ಮಾ ಮನೆಯಲ್ಲಿ ಭಾರೀ ಪ್ರಮಾಣದ ನಗದು ದೊರೆತ ಆರೋಪ: ಇಲ್ಲಿದೆ ವಿವಿಧ ಬೆಳವಣಿಗೆಗಳ ಮಾಹಿತಿ

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ನ್ಯಾ. ವರ್ಮಾ ಅವರು, ʼಬೆಂಕಿ ಕಾಣಿಸಿಕೊಂಡಿದ್ದು ಮುಖ್ಯ ನಿವಾಸದ ಕಟ್ಟಡದಲ್ಲಿ ಅಲ್ಲ. ಬಳಕೆಯಲ್ಲಿಲ್ಲದ ಗೃಹೋಪಯೋಗಿ ವಸ್ತುಗಳನ್ನು ಇಡಲಾಗುತ್ತಿದ್ದ ಮನೆಯ ಆವರಣದಲ್ಲಿರುವ ಔಟ್‌ಹೌಸ್‌ನಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 14 ರ ಸಂಜೆ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ದೊರೆತಿದೆ ಎಂಬ ಆರೋಪ ಕೇಳಿ ಬಂದಿತ್ತು.

Also Read
ನ್ಯಾ. ಯಶವಂತ್ ವರ್ಮಾ ವರ್ಗಾವಣೆಗೂ ನಗದು ದೊರೆತ ಪ್ರಕರಣದ ತನಿಖೆಗೂ ಸಂಬಂಧವಿಲ್ಲ: ಸುಪ್ರೀಂ ಕೋರ್ಟ್ ಪ್ರಕಟಣೆ

ಆಗ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಮರು ವರ್ಗಾವಣೆ ಮಾಡಲು ನಿರ್ಧರಿಸಿತ್ತು. 

ಆರೋಪಗಳ ಬಗ್ಗೆ ಸಿಜೆಐ ಆಂತರಿಕ ತನಿಖೆ ಕೂಡ ಪ್ರಾರಂಭಿಸಿದರು, ಅದರ ಪ್ರಕಾರ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ನ್ಯಾ. ವರ್ಮಾ ಅವರಿಂದ ವಿವರಣೆ ಕೇಳಿದ್ದರು.

ನ್ಯಾ. ವರ್ಮಾ ಅವರ ಪ್ರತಿಕ್ರಿಯೆಯ ಪ್ರಮುಖಾಂಶಗಳು

  • ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಜೊತೆಗೆ ದೊರೆತಿದೆ ಎನ್ನಲಾದ ನಗದು ನಮಗೆ ಸೇರಿದ್ದು ಎಂಬ ವಾದವನ್ನು ಬಲವಾಗಿ ಖಂಡಿಸುತ್ತೇನೆ.

  • ಆ ನಗದು ನಮ್ಮ ಬಳಿ ಇದೆ ಅಥವಾ ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣ ಅಸಂಬದ್ಧವಾದುದು.

  • ಸಿಬ್ಬಂದಿ ವಸತಿ ಗೃಹದ ಬಳಿ ಅಥವಾ ಮುಕ್ತವಾಗಿ ಪ್ರವೇಶಿಸಬಹುದಾದ ಸ್ಟೋರ್‌ ರೂಂನಲ್ಲಿ ಹಣ ಸಂಗ್ರಹಿಸಿಡಲಾಗಿದೆ ಎಂಬ ಆರೋಪ ನಂಬಲರ್ಹವಾದುದಲ್ಲ.

  • ಔಟ್‌ ಹೌಸ್‌ ನನ್ನ ಮನೆಯಿಂದ ಸಂಪೂರ್ಣ ಬೇರೆ ಇರುವ ಕೋಣೆ. ಜೊತೆಗೆ ಔಟ್‌ ಹೌಸ್‌ ಮತ್ತು ನನ್ನ ವಾಸಸ್ಥಳವನ್ನು ಪ್ರತ್ಯೇಕಿಸುವ ಕಾಂಪೌಂಡ್‌ ಇದೆ.

  • ಮಾಧ್ಯಮಗಳು ದೋಷಾರೋಪ ಮಾಡುವ ಮುನ್ನ ಸ್ವಲ್ಪ ತನಿಖೆ ನಡೆಸಬೇಕಿತ್ತು ಎಂಬುದು ನನ್ನ ಬಯಕೆ.

  • ಸ್ಥಳದಲ್ಲಿ ಹಾಜರಿದ್ದ ಯಾರಿಗೂ ನಗದು ಪತ್ತೆಯಾಗಿಲ್ಲ.

  • ಘಟನೆ ನಡೆದ ತಕ್ಷಣ ಆ ಸ್ಥಳದಲ್ಲಿ ವೀಡಿಯೊ ತೆಗೆಯಲಾಗಿದೆ ಎಂದು ಒಪ್ಪದೆಯೇ ಊಹಿಸಿಕೊಂಡರೂ, ಅದರಲ್ಲಿರುವ ಯಾವುದನ್ನೂ ವಶಪಡಿಸಿಕೊಂಡಿಲ್ಲ ಅಥವಾ ಜಪ್ತಿ ಮಾಡಿಲ್ಲ ಎಂದು ತೋರುತ್ತದೆ.

  • ಪತ್ತೆಯಾದ ಅಥವಾ ಮುಟ್ಟುಗೋಲು ಹಾಕಿಕೊಂಡ ಸುಟ್ಟು ಹೋದ ನೋಟನ್ನು ಯಾರೂ ಪ್ರದರ್ಶಿಸಿಲ್ಲ.

  • ಪೊಲೀಸ್ ಆಯುಕ್ತರು ಹಂಚಿಕೊಂಡ ವೀಡಿಯೊವನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಏಕೆಂದರೆ ಅದರಲ್ಲಿ ಚಿತ್ರಿಸಲಾದ ವೀಡಿಯೊ ತಾವು ನೋಡಿದ ಜಾಗದಂತೆ ಕಂಡುಬರುತ್ತಿಲ್ಲ.

  • ಬೆಂಕಿ ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಮೊದಲ ವ್ಯಕ್ತಿಗಳಲ್ಲಿ ರಿಜಿಸ್ಟ್ರಾರ್ ಹಾಗೂ ಕಾರ್ಯದರ್ಶಿ ಇದ್ದು ಅವರ ವರದಿಯಲ್ಲಿ ಸ್ಥಳದಲ್ಲಿ ನಗದು ದೊರೆತ ಬಗ್ಗೆ ಉಲ್ಲೇಖವಿಲ್ಲ.

  • ದೆಹಲಿ ಹೈಕೋರ್ಟ್‌ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪಿಪಿಎಸ್‌ ನಾನು ಮತ್ತು ನನ್ನ ಪೊಲೀಸ್‌ ಅಧಿಕಾರಿ ದಹನಗೊಂಡ ಕೊಠಡಿ ಪರಿಶೀಲಿಸಿದಾಗ ಯಾವುದೇ ನೋಟು ಪತ್ತೆಯಾಗಿಲ್ಲ. ನನಗೆ ನೀಡಲಾದ ವರದಿಯಿಂದಲೂ ಇದು ದೃಢೀಕೃತವಾಗಿದೆ.

  • ತಪಾಸಣೆ ಬಳಿಕ ದೆಹಲಿ ಹೈಕೋರ್ಟ್‌ ಸೂಚನೆಯಂತೆ ದಹನಗೊಂಡ ಕೊಠಡಿಯನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ.

  • ನನ್ನ ಮಗಳು, ಪೊಲೀಸ್ ಆಯುಕ್ತರು ಅಥವಾ ಮನೆಯ ಸಿಬ್ಬಂದಿಗೆ ಈ ಸುಟ್ಟುಹೋದ ನೋಟುಗಳ ಚೀಲಗಳನ್ನು ತೋರಿಸಲಾಗಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ.

  • ಮನೆಯ ಸ್ಟೋರ್‌ ರೂಮಿನಲ್ಲಿ ಹಣ ಇಡಲಾಗುತ್ತದೆ ಎಂಬ ಆರೋಪ ಸಮ್ಮತವಾದದು ಎಂಬ ಬಗ್ಗೆ ನನಗೆ ಅಚ್ಚರಿ ಇದೆ.

  • ಇದು ನನ್ನ ಮೇಲೆ ಸುಳ್ಳು ಆರೋಪ ಹೊರಿಸಲು ಮತ್ತು ಅಪಪ್ರಚಾರ ಮಾಡಲು ನಡೆಸಲಾದ ಪಿತೂರಿ ಎಂಬುದು ಸ್ಪಷ್ಟ.

  • ಇದು ಇತ್ತೀಚಿನ ದಿನಗಳಲ್ಲಿ ನಡೆಯುತ್ತ ಬಂದಿರುವ ಘಟನೆಗಳ ಭಾಗ.

  • ಡಿಸೆಂಬರ್ 2024ರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪಿತೂರಿಯ ಸುಳಿವು ನೀಡುತ್ತಿವೆ.

  • ಸುಟ್ಟ ರೂಪದಲ್ಲಿ ಕರೆನ್ಸಿ ನೋಡಿರುವುದಾಗಿ ನಮ್ಮ ಮನೆಯಲ್ಲಿ ಇರುವವರು ಮಾಹಿತಿ ನೀಡಿಲ್ಲ.

  • ಅಲ್ಲದೆ ಪೊಲೀಸರು ಕೂಡ ನಗದು ದೊರೆತ ಬಗ್ಗೆಯಾಗಲೀ ಅದನ್ನು ಅವರು ವಶಪಡಿಸಿಕೊಂಡ ಬಗ್ಗೆಯಾಗಲಿ ತಮಗೆ ತಿಳಿಸಿಲ್ಲ.

  • ನಾನು ಮತ್ತು ನನ್ನ ಕುಟುಂಬ ನಡೆಸುವ ಹಣದ ವಹಿವಾಟುಗಳಿಗೆ ದಾಖಲೆ ಇರುತ್ತದೆ.

  • ಈ ಘಟನೆ ನ್ಯಾಯಮೂರ್ತಿಯಾಗಿ ತಾನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರೂಪಿಸಿಕೊಂಡಿರುವ  ವರ್ಚಸ್ಸಿಗೆ ತೀವ್ರ ಧಕ್ಕೆ ತಂದಿದೆ.

  • ಆದ್ದರಿಂದ ನ್ಯಾಯಮೂರ್ತಿಯಾಗಿ ನನ್ನ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ನನ್ನ ಕೋರಿಕೆ.

Kannada Bar & Bench
kannada.barandbench.com