ಐದು ವರ್ಷದ ಎಲ್‌ಎಲ್‌ಬಿ ಆಫ್‌ಲೈನ್‌ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಬಗ್ಗೆ ಮಾಹಿತಿ ಕೇಳಿದ ಹೈಕೋರ್ಟ್

ಐದು ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳು ಸಲ್ಲಿಸಿರುವ ತಿದ್ದುಪಡಿ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೆಎಸ್‌ಎಲ್‌ಯು ಕೋರಿದೆ. ಇದಕ್ಕೆ ಅನುಮತಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಡಿ.20ಕ್ಕೆ ಮುಂದೂಡಿದೆ.
KSLU and Karnataka High Court
KSLU and Karnataka High Court
Published on

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಆಫ್‌ಲೈನ್‌ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂಬುದರ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಶುಕ್ರವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಹೈಕೋರ್ಟ್‌ ನಿರ್ದೇಶಿಸಿದೆ.

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸುವ ಸಂಬಂಧ ಕೆಎಸ್‌ಎಲ್‌ಯು ಡಿಸೆಂಬರ್‌ 1ರಂದು ಹೊರಡಿಸಿದ್ದ ಸುತ್ತೋಲೆ ವಜಾ ಮಾಡುವಂತೆ ಕೋರಿ ಕೆ ಪಿ ಪ್ರಭುದೇವ್‌ ಮತ್ತಿತರರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಡಿಸೆಂಬರ್‌ 15ರಿಂದ ಆರಂಭವಾಗಿರುವ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂಬುದರ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲು ಕೆಎಸ್‌ಎಲ್‌ಯುಗೆ ನಿರ್ದೇಶಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ವಕೀಲ ಎಂ ಪಿ ಶ್ರೀಕಾಂತ್‌ ಅವರು “ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಹೀಗಿರುವಾಗ ಶೇ. 90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು ಎಂದು ವಿಶ್ವವಿದ್ಯಾಲಯ ಹೇಳುವುದು ಸರಿಯಲ್ಲ” ಎಂದರು.

ಡಿಸೆಂಬರ್‌ 14ರಂದು ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಆಫ್‌ಲೈನ್‌ ಪರೀಕ್ಷೆಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ನ ಧಾರವಾಡ ಪೀಠವು ವಜಾ ಮಾಡಿದ್ದನ್ನು ಇಲ್ಲಿ ನೆನಯಬಹುದಾಗಿದೆ. ಇದೇ ಪರಿಹಾರವನ್ನು ಕೋರಿ ಅರ್ಜಿದಾರರು ಮನವಿಯಲ್ಲಿ ತಿದ್ದುಪಡಿ ಮಾಡಿ ಸಲ್ಲಿಸಿದ್ದರು.

ಭಾರತೀಯ ವಕೀಲರ ಪರಿಷತ್‌ ಅನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್‌ ಪ್ರಭು ಅವರು “ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನಡೆಸಿದರೆ ಮಾತ್ರ ವಿದ್ಯಾರ್ಥಿಗಳ ಪದವಿಯನ್ನು ಪರಿಗಣಿಸಲಾಗುವುದು” ಎಂದರು.

Also Read
ಕೆಎಸ್‌ಎಲ್‌ಯು ಪರೀಕ್ಷೆ ರದ್ದುಗೊಳಿಸಿ ಆದೇಶಿಸಿದ ಹೈಕೋರ್ಟ್‌; ಮೂರು ವರ್ಷದ ಎಲ್ಎಲ್‌ಬಿ ಪದವಿ ವಿದ್ಯಾರ್ಥಿಗಳು ನಿರಾಳ

ಕೆಎಸ್‌ಎಲ್‌ಯು ಪರ ವಕೀಲರು “ವಿದ್ಯಾರ್ಥಿಗಳಿಗೆ ಆನ್‌ಲೈನ್‌ ವ್ಯವಸ್ಥೆಯ ಅವಕಾಶವಿದ್ದು, ತರಗತಿಗಳನ್ನೂ ನಡೆಸಲಾಗಿದೆ. ಈಗಾಗಲೇ ಪರೀಕ್ಷೆ ಆರಂಭವಾಗಿದ್ದು, ಶೇ. 90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ ಮಧ್ಯಪ್ರವೇಶಿಸಬಾರದು” ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರು “ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಧಾರವಾಡ ಪೀಠವು ಅಧಿಸೂಚನೆಯನ್ನು ವಜಾ ಮಾಡಿದೆ. ಐದು ಮತ್ತು ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪೀಠವು ಯಾವುದೇ ವ್ಯತ್ಯಾಸ ಗುರುತಿಸಿಲ್ಲ. ಇದು ಎಲ್ಲರಿಗೂ ಅನ್ವಯಿಸುತ್ತದೆ” ಎಂದರು.

ಐದು ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳು ಸಲ್ಲಿಸಿರುವ ತಿದ್ದುಪಡಿ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೆಎಸ್‌ಎಲ್‌ಯು ಕೋರಿದೆ. ಇದಕ್ಕೆ ಅನುಮತಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 20ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com