ಹೈಕೋರ್ಟ್‌, ಸಚಿವರ ಮನೆಗಳ ರಸ್ತೆಯಲ್ಲಿ ಗುಂಡಿ ಮುಚ್ಚಿದರೆ ಸಾಲದು: ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

ಸಾಮಾನ್ಯ ಜನರು ವಾಸಿಸುವ ಪ್ರದೇಶಗಳ ಮೂಲಕ ಹಾದುಹೋಗುವ ನಗರದ ರಸ್ತೆಗಳ ಕೆಟ್ಟ ಸ್ಥಿತಿಯನ್ನು ಬಿಬಿಎಂಪಿ ಮರೆಯಬಾರದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
Acting Chief Justice Satish Chandra Sharma and Justice Sachin Shankar Magadum
Acting Chief Justice Satish Chandra Sharma and Justice Sachin Shankar Magadum

ಸಾಮಾನ್ಯ ಜನರು ವಾಸಿಸುವ ಪ್ರದೇಶಗಳ ಮೂಲಕ ಹಾದುಹೋಗುವ ನಗರದ ರಸ್ತೆಗಳ ಕೆಟ್ಟ ಸ್ಥಿತಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮರೆಯಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ವಿಜಯನ್‌ ಮೆನನ್‌ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್‌ ಅಥವಾ ಸಚಿವರ ಮನೆಗಳ ರಸ್ತೆಯಲ್ಲಿ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ಸೀಮಿತವಾಗಬಾರದು ಎಂದು ಪೀಠ ಹೇಳಿದೆ. “ಪಾಲಿಕೆ ಬಳಸುತ್ತಿರುವ ಮಸೂರವು (ಲೆನ್ಸ್‌) ಪಾರದರ್ಶಕವಾಗಿಲ್ಲ. ಈ ಮಸೂರದಲ್ಲಿ ನೀವು ಏಳು ಸಚಿವರ ನಿವಾಸಕ್ಕೆ ತೆರಳುವ ಕುಮಾರ ಕೃಪಾ ರಸ್ತೆ, ಹೈಕೋರ್ಟ್‌ ತಲುಪಲು ಇರುವ ರಸ್ತೆಗಳಲ್ಲಿ ಮಾತ್ರ ಗುಂಡಿಗಳನ್ನು ನೋಡುತ್ತಿದ್ದೀರಿ. ಆದರೆ, ನಿಮ್ಮ ಮಸೂರವು ಸಾಮಾನ್ಯ ಜನರು ನೆಲೆಸಿರುವ ಪ್ರದೇಶದಲ್ಲಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ನೋಡುತ್ತಿಲ್ಲ” ಎಂದು ಪೀಠ ಹೇಳಿದೆ.

ಗುಂಡಿಗಳನ್ನು ಮುಚ್ಚಿದ ನಂತರ, ಭರ್ತಿ ಮಾಡಿದ ಎರಡರಿಂದ ಮೂರು ತಿಂಗಳಲ್ಲಿ ಅಲ್ಲಿಯೇ ಗುಂಡಿಗಳು ನಿರ್ಮಾಣವಾಗುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದಕ್ಕೆ ಪೀಠವು ಗುಂಡಿಗಳನ್ನು ರಿಪೇರಿ ಮಾಡುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ಬಿಬಿಎಂಪಿಗೆ ನಿರ್ದೇಶಿಸಿತು.

“ಗುಂಡಿ ಮುಚ್ಚಿದ ಸ್ಥಳದಲ್ಲೇ ಎರಡು-ಮೂರು ತಿಂಗಳ ಬಳಿಕ ಮತ್ತೆ ಗುಂಡಿಯಾಗುತ್ತಿದೆ ಎಂದು ತಿಳಿದು ಬಂದಿದ್ದು, ಗುಂಡಿ ಮುಚ್ಚುವಾಗ ಬಿಬಿಎಂಪಿಯು ಗುಣಮಟ್ಟ ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಕೆ ಎನ್‌ ಪುಟ್ಟೇಗೌಡ ಅವರು “ರಸ್ತೆಯಲ್ಲಿ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದು ದಿನನಿತ್ಯ ಗುಂಡಿಗಳನ್ನು ಮುಚ್ಚುತ್ತಿದೆ. ವ್ಯಾಪಕ ಮಳೆಯಿಂದಾಗಿ ಕೆಲವು ಸಂದರ್ಭದಲ್ಲಿ ಕೆಲಸಕ್ಕೆ ಅಡಚಣೆಯಾಗುತ್ತಿದೆ” ಎಂದರು. ಕೆಲಸಕ್ಕೆ ಸಂಬಂಧಿಸಿದಂತೆ ಚಿತ್ರಗಳನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

Also Read
ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯ ಮಾಡುವುದರಿಂದ ಗಂಭೀರ ಸಮಸ್ಯೆಗೆ ನಾಂದಿ: ಹೈಕೋರ್ಟ್‌ ಕಳವಳ

ಬಿಬಿಎಂಪಿ ಅಳವಡಿಸಿಕೊಂಡಿರುವ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ. ವಿವಿಧ ಬಡಾವಣೆಗಳಲ್ಲಿ ಸಾಮಾನ್ಯ ಜನರು ನೆಲೆಸಿರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಪ್ರಯತ್ನವನ್ನು ಬಿಬಿಎಂಪಿ ಮಾಡುತ್ತಿಲ್ಲ ಎಂದು ನ್ಯಾಯಾಲಯ ಹೇಳಿತು. ಅಲ್ಲದೇ, ಹೈಕೋರ್ಟ್‌, ಸಚಿವರ ಮನೆಗಳ ರಸ್ತೆಯಲ್ಲಿ ಗುಂಡಿ ಮುಚ್ಚಿದರೆ ಸಾಲದು ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ನವೆಂಬರ್‌ 11ಕ್ಕೆ ಮುಂದೂಡಿದೆ.

ನಗರದಲ್ಲಿರುವ ಕೆಟ್ಟ ರಸ್ತೆಗಳ ಬಗ್ಗೆ ನಿವಾಸಿಗಳು ಎತ್ತಿದ್ದ ಅಹವಾಲುಗಳ ದಾಖಲೆಯ ವರದಿಯನ್ನು ಹಿಂದೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ನ್ಯಾಯಾಲಯಕ್ಕೆ ಸಲ್ಲಿಸಿತ್ತು. ರಸ್ತೆ ಮತ್ತು ಪಾದಚಾರಿ ಮಾರ್ಗಗಳ ರಿಪೇರಿಗೆ ಸಂಬಂಧಿಸಿದಂತೆ ತಾತ್ಸಾರದ ನಿಲುವು ಕೈಗೊಂಡಿದ್ದ ಬಿಬಿಎಂಪಿಯನ್ನು ಕಳೆದ ಮಾರ್ಚ್‌ನಲ್ಲಿ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

Related Stories

No stories found.
Kannada Bar & Bench
kannada.barandbench.com