ತನ್ನ ಮೂರು ಎಂಜಿನ್‌ಗಳ ಹಾರಾಟ ನಿಲ್ಲಿಸುವಂತೆ ಆಗಸ್ಟ್ 14ರಂದು ನ್ಯಾಯಾಲಯ ಮಾಡಿರುವ ಆದೇಶವನ್ನು ಜಾರಿಗೊಳಿಸಿದರೆ ಪ್ರಸ್ತುತ ಇರುವ 21 ವಿಮಾನಗಳ ಸಂಖ್ಯೆಯು 19ಕ್ಕೆ ಇಳಿಕೆಯಾಗಲಿದೆ ಎಂದು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಮಿತವ್ಯಯಕಾರಿ ವೈಮಾನಿಕ ಸಂಸ್ಥೆಯಾದ ಸ್ಪೈಸ್ ಜೆಟ್ ಏರ್‌ಲೈನ್ಸ್ ತಿಳಿಸಿದೆ.
ಫ್ರಾನ್ಸ್‌ನ ಇಬ್ಬರು ಗುತ್ತಿಗೆದಾರರಿಂದ ಪಡೆದಿರುವ ವಿಮಾನಗಳಿಗೆ ಬಾಡಿಗೆ ಭೋಗ್ಯ ಹಣ ಪಾವತಿಸಲು ವಿಫಲವಾಗಿರುವುದರಿಂದ ಮೂರು ಎಂಜಿನ್‌ಗಳ ಹಾರಾಟ ನಿಲ್ಲಿಸುವಂತೆ ಸ್ಪೈಸ್‌ಜೆಟ್‌ಗೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಆಗಸ್ಟ್ 14ರಂದು ಆದೇಶಿಸಿದ್ದರು.
ಇದನ್ನು ಸ್ಪೈಸ್‌ಜೆಟ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದೆ. ಸ್ಪೈಸ್‌ಜೆಟ್ ಪರವಾಗಿ ಹಾಜರಾದ ಹಿರಿಯ ವಕೀಲ ಅಮಿತ್ ಸಿಬಲ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠದ ಮುಂದೆ ಪ್ರಕರಣದ ವಿಚಾರಣೆ ಕೋರಿದರು.
ಸಿಬಲ್ ಅವರು “ನಮ್ಮ ಬಳಿ 21 ವಿಮಾನಗಳಿವೆ. ಇಂದಿನಿಂದಲೇ ವಿಮಾನ ಹಾರಾಟ ನಿಲ್ಲಿಸಬೇಕಿದೆ. ಪ್ರತಿ ವಿಮಾನಕ್ಕೆ ಎರಡು ಎಂಜಿನ್ ಹೊಂದಿರಲಿದ್ದು, ಆದೇಶಪಾಲಿಸಿದರೆ ಎರಡು ವಿಮಾನಗಳ ಹಾರಾ ನಿಲ್ಲಿಸಬೇಕಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಈಗಾಗಲೇ ಜನರು ವಿಮಾನಗಳ ಟಿಕೆಟ್ ಕಾಯ್ದಿರಿಸಿರುವುದು, ಮುಂತಾದ ಅನೇಕ ಸಮಸ್ಯೆಗಳಿವೆ” ಎಂದರು.
ಇದಕ್ಕೆ ನಿರಾಕರಿಸಿದ ನ್ಯಾಯಾಲಯವು ಆಗಸ್ಟ್ 20ರಂದು ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದಿತು. “ಹಲವು ನ್ಯಾಯಮೂರ್ತಿಗಳು ಇಂದು ರಜೆಯ ಮೇಲಿದ್ದಾರೆ. ಈ ಅರ್ಜಿಯು ಮಂಗಳವಾರ ವಿಚಾರಣೆಗೆ ಬರಲಿದೆ” ಎಂದು ನ್ಯಾಯಾಲಯ ಹೇಳಿತು.
ಆಗಸ್ಟ್ 16ರ ವೇಳೆಗೆ ಮೂರು ಎಂಜಿನ್ ಕಾರ್ಯಾಚರಣೆ ನಿಲ್ಲಿಸಿ ಅವುಗಳನ್ನು 15 ದಿನಗಳ ಒಳಗೆ ಗುತ್ತಿಗೆದಾರರಿಗೆ ಮರಳಿಸಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿತ್ತು.
ಟೀಮ್ ಫ್ರಾನ್ಸ್ 01 ಎಸ್‌ಎಎಸ್ ಮತ್ತು ಸನ್‌ಬರ್ಡ್ ಫ್ರಾನ್ಸ್ 02 ಎಸ್‌ಎಎಸ್ ತಮಗೆ ಸ್ಪೈಸ್‌ಜೆಟ್ ಕೋಟ್ಯಂತರ ಡಾಲರ್ ಬಾಕಿ ಪಾವತಿಸಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇಲಿನ ಆದೇಶ ಮಾಡಿತ್ತು. ಸ್ಪೈಸ್‌ಜೆಟ್ ಸುಸ್ತಿದಾರ ಸಂಸ್ಥೆಯಾಗಿದ್ದು, ಅವರಿಗೆ ಎಂಜಿನ್ ಬಳಕೆ ಮುಂದುವರಿಸಲು ಯಾವುದೇ ಕಾನೂನಾತ್ಮಕ ಮತ್ತು ಗುತ್ತಿಗೆ ಹಕ್ಕು ಇಲ್ಲ ಎಂದಿತ್ತು.