ಎ ಐ ಮಾಡುವ ಅನುವಾದ ಎಡವಟ್ಟುಗಳತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆರಳು

ʼಅನುಮತಿಸಲಾಗಿದೆʼ ಮತ್ತು ʼಮೇಲ್ಮನವಿ ಆಲಿಸಲು ಒಪ್ಪಲಾಗಿದೆʼ ಎನ್ನುವುದಕ್ಕೆ ʼಲೀವ್ ಗ್ರಾಂಟೆಡ್ʼ ಎಂಬ ಪದಗುಚ್ಛವನ್ನು ನ್ಯಾಯಾಲಯ ಬಳಸುತ್ತದೆ. ಆದರೆ, ಎ ಐ ಅನುವಾದವು ಅದನ್ನು ಪದಶಃ ಅರ್ಥೈಸಿ 'ರಜೆ ನೀಡಲಾಗಿದೆ' ಎಂದು ದಾಖಲಿಸಿತ್ತು.
Artificial Intelligence, Judiciary
Artificial Intelligence, Judiciary
Published on

ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಮೇಲೆ ಹೆಚ್ಚು ಅವಲಂಬನೆಯಿಂದ ಉಂಟಾಗುವ ಎಡವಟ್ಟುಗಳನ್ನು ಅದರಲ್ಲಿಯೂ ಕಾನೂನಾತ್ಮಕ ದಾಖಲೆಗಳ ಅನುವಾದದ ವಿಚಾರದಲ್ಲಿ ಉದ್ಭವಿಸುವ ಸಮಸ್ಯೆಗಳ ಬಗ್ಗೆ  ಸುಪ್ರೀಂ ಕೋರ್ಟ್‌ ಸೋಮವಾರ ಬೆರಳು ಮಾಡಿದೆ.

ಹಿಂದಿ ದಾಖಲೆಗಳ ಇಂಗ್ಲಿಷ್‌ ಭಾಷಾಂತರಕ್ಕಾಗಿ ಅಗತ್ಯವಿದ್ದ ತೀರ್ಪೊಂದನ್ನು ನೀಡಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ಈ ವಿಚಾರದ ಚರ್ಚೆಗೆ ಮುಂದಾಯಿತು.

Also Read
ಜಾಮೀನು ಪ್ರಕರಣ ನಿರ್ಧರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ 'ಚಾಟ್‌ ಜಿಪಿಟಿ' ತಂತ್ರಜ್ಞಾನ ಬಳಸಿದ ಪಂಜಾಬ್‌ ಹೈಕೋರ್ಟ್‌

ಕಾನೂನು ದಾಖಲೆಗಳ ಹಲವು ಭಾಷಾಂತರಗಳು ತಪ್ಪಾಗಿರುತ್ತವೆ. ವಕೀಲರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್‌ ಕಿವಿಮಾತು ಹೇಳಿದರು. ಈ ಕಾರ್ಯವನ್ನು ಎಐಗೇ ಬಿಟ್ಟುಬಿಟ್ಟರೆ ಅದು ತಮಾಷೆ ಎನ್ನುವಂತಹ ಎಡವಟ್ಟುಗಳಿಗೆ ಎಡೆ ಮಾಡಿಕೊಡಲಿದೆ ಎಂದು ಅವರು ನುಡಿದರು.

 "ಒಮ್ಮೆ ನಾನು ತೀರ್ಪನ್ನು ಭಾಷಾಂತರಿಸಲು ಎಐ ತಂತ್ರಜ್ಞಾನ ಬಳಸುತ್ತಿದ್ದೆ. ಲೀವ್‌ ಗ್ರಾಂಟೆಡ್‌ (ಅನುಮತಿ ನೀಡಲಾಗಿದೆ) ಎಂಬುದಕ್ಕೆ ರಜೆ ನೀಡಲಾಗಿದೆ ಎಂದು ಅನುವಾದಿಸಲಾಗಿತ್ತು” ಎಂದು ಅವರು ನೆನೆದರು.

Also Read
ಮುಖ ಚಹರೆ ಗುರುತಿಸುವಿಕೆ ತಂತ್ರಜ್ಞಾನವು ಗಂಡಾಂತರಕಾರಿ ಕೃತಕ ಬುದ್ಧಿಮತ್ತೆಗೆ ಪ್ರಮುಖ ನಿದರ್ಶನ: ಸಿಜೆಐ ಚಂದ್ರಚೂಡ್

ಕೆಲ ವೇಳೆ ಇದನ್ನು ರಜೆ ಸ್ವೀಕೃತಿ ಎಂದೂ ಅನುವಾದಿಸಲಾಗುತ್ತದೆ ಎಂಬುದಾಗಿ ನ್ಯಾಯಮೂರ್ತಿ ಗವಾಯಿ ಚಟಾಕಿ ಹಾರಿಸಿದರು.

ʼಅನುಮತಿ ನೀಡಲಾಗಿದೆʼ ಮತ್ತು ʼಮೇಲ್ಮನವಿ ಆಲಿಸಲು ಒಪ್ಪಲಾಗಿದೆʼ ಎಂಬುದನ್ನು ಹೇಳುವುದಕ್ಕಾಗಿ ʼಲೀವ್ ಗ್ರಾಂಟೆಡ್ʼ ಎಂಬ ಪದಗುಚ್ಛವನ್ನು ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ಬಳಸುತ್ತಿರುತ್ತದೆ. ಆದರೆ ಅನುವಾದ ಯಾಂತ್ರೀಕೃತವಾದಾಗ ʼರಜೆ ನೀಡಲಾಗಿದೆʼ ಎಂದು ತರ್ಜುಮೆಯಾಗಿ ಅನುವಾದ ಸಮಸ್ಯೆ ತಲೆದೋರುತ್ತದೆ.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಹತ್ವದ ಕೊಡುಗೆ ನೀಡುತ್ತ ಬಂದಿದೆ ಎಂಬುದು ಗಮನಾರ್ಹ.

Kannada Bar & Bench
kannada.barandbench.com