ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐವರು ಮುಸ್ಲಿಂ ಪುರುಷರನ್ನು ಪೊಲೀಸರು ಸಾರ್ವಜನಿಕವಾಗಿ ಥಳಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಗುಜರಾತ್ ಹೈಕೋರ್ಟ್‌ಗೆ ತಿಳಿಸಲು ರಾಜ್ಯ ಸರ್ಕಾರ ಸೋಮವಾರ ಹಿಂಜರಿದಿದೆ [ಜಾಹಿರ್ಮಿಯಾ ರೆಹಮುಮಿಯಾ ಮಾಲೆಕ್ ಮತ್ತು ಗುಜರಾತ್ ಸರ್ಕಾರದ ನಡುವಣ ಪ್ರಕರಣ].
ಹೀಗಾಗಿ ಘಟನೆ ನಡೆದಿರುವುದನ್ನು ರಾಜ್ಯ ಸರ್ಕಾರ ಒಪ್ಪಿದೆಯೇ ಎಂಬುದನ್ನು ಸ್ಪಷ್ಟವಾಗಿ ದಾಖಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಿಥೇಶ್ ಅಮೀನ್ ಅವರಿಗೆ ನ್ಯಾಯಮೂರ್ತಿಗಳಾದ ಎ ಎಸ್ ಸುಪೇಹಿಯಾ ಮತ್ತು ಎಂ ಆರ್ ಮೆಂಗ್ಡೆ ಅವರಿದ್ದ ಪೀಠ ಸೂಚಿಸಿತು.
“ಪ್ರಕರಣವನ್ನು ಭಾವೋದ್ರೇಕದ ನೆಲೆಯಲ್ಲಿ ತೀರ್ಮಾನಿಸುವುದಿಲ್ಲ ಎಂದು ಕಳೆದ ವಿಚಾರಣೆಯಲ್ಲಿ ನಾವು ಸ್ಪಷ್ಟಪಡಿಸಿದ್ದೇವೆ. ಥಳಿತದ ಘಟನೆ ನಡೆದಿದೆಯೇ ಇಲ್ಲವೇ ಎಂಬುದನ್ನಷ್ಟೇ ಸರ್ಕಾರ ಹೇಳಬೇಕು ಎಂದು ನಾವು ಬಯಸುತ್ತೇವೆ. ಒಂದೋ ಇದು ಅಧಿಕಾರಿಯ ಕೆಲಸ ಎಂದು ಸರ್ಕಾರ ಹೇಳಬೇಕು. ಅವರು ಹಾಗೆ ಮಾಡದಿದ್ದರೆ ಪರಿಸ್ಥಿತಿ ಬೇರೆ ಮಟ್ಟಕ್ಕೆ ಹೋಗುತ್ತಿತ್ತು ಎನ್ನಬೇಕು. ಇಲ್ಲವೇ, ಅಂತಹ ಘಟನೆ ನಡೆದೇ ಇಲ್ಲ ಎಂದು ಸರ್ಕಾರ ಹೇಳಿ ದಾಖಲಿಸಲಾದ ಪುರಾವೆಗಳನ್ನು ಪರಿಗಣಿಸದಂತೆ ಕೋರಬಹುದು” ಎಂದು ನ್ಯಾಯಾಲಯ ಪಬ್ಲಿಕ್ ಪ್ರಾಸಿಕ್ಯೂಟರ್ ಅಮೀನ್ ಅವರಿಗೆ ತಿಳಿಸಿತು.
ಆದರೆ ಅಮೀನ್ ಅವರು ಸ್ಪಷ್ಟ ಹೇಳಿಕೆ ನೀಡಲು ನಿರಾಕರಿಸಿದರು. ಪ್ರಕರಣದ ಕೆಲವು ಆರೋಪಿಗಳ ಹೇಳಿಕೆಗಳನ್ನು ಆಧರಿಸಿ, ಅಮೀನ್ ಅವರು ʼಸ್ಥಳೀಯ ಹಿಂದೂಗಳನ್ನು ಭಯಭೀತಗೊಳಿಸಲು ಮತ್ತು ನವರಾತ್ರಿ ಹಬ್ಬದ ಸಮಯದಲ್ಲಿ ಗ್ರಾಮದಲ್ಲಿ ಗರ್ಬಾ ನೃತ್ಯ ನಡೆಸದಂತೆ ತಡೆಯಲು ಮುಸ್ಲಿಂ ಸಮುದಾಯದವರು ಸಂಚು ರೂಪಿಸಿದ್ದರುʼ ಎಂದು ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನೀಡಿರುವ ಹೇಳಿಕೆಗೂ ಘಟನೆ ನಡೆದ ಸಮಯಕ್ಕೂ ಇರುವ ವ್ಯತ್ಯಾಸವನ್ನು ಅವರು ಪ್ರಸ್ತಾಪಿಸಿದರು. ಅಲ್ಲದೆ ತಪ್ಪಿತಸ್ಥ ಪೊಲೀಸರ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.
ಆಗ ನ್ಯಾಯಾಲಯ “ಸಮಯದ ವ್ಯತ್ಯಾಸ ಬಿಡಿ. ವ್ಯಕ್ತಿಗಳನ್ನು ಥಳಿಸಬಹುದೇ? ಕಂಬವೊಂದಕ್ಕೆ ಕಟ್ಟಿ ಲಾಠಿಗಳಿಂದ ಸಾರ್ವಜನಿಕವಾಗಿ ಥಳಿಸಬಹುದು ಎಂಬ ಕಾನೂನು ಎಲ್ಲಿದೆ ಎಂಬುದನ್ನು ತೋರಿಸುವಿರೇ?” ಎಂದು ಪ್ರಶ್ನಿಸಿತು.
ಈ ಹಂತದಲ್ಲಿ ಅಮೀನ್ ಅವರು ʼಇಲ್ಲ, ಅವರು ಸುಳ್ಳಿನಿಂದ ಕೂಡಿದ ಮನವಿ ಮಾಡಿದ್ದಾರೆ ಎಂದಷ್ಟೇ ನಾನು ಹೇಳಬಹುದು” ಎಂದು ನುಡಿದರು. ಗರ್ಬಾ ನೃತ್ಯ ಸಮಾರಂಭದಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಎದುರಿಸುತ್ತಿರುವ ಅರ್ಜಿದಾರರು ಮಾಡಿದ್ದ ವಾಟ್ಸಾಪ್ ಸಂದೇಶಗಳನ್ನು ಪ್ರಾಸಿಕ್ಯೂಟರ್ ಓದಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಬಯಸಿದ್ದರು ಎಂದು ಇದೇ ವೇಳೆ ಅವರು ತಿಳಿಸಿದರು.
ವಾದ ಒಪ್ಪದ ನ್ಯಾಯಾಲಯ “ಪೊಲೀಸರು ಖಂಡಿತವಾಗಿಯೂ ಪರಿಸ್ಥಿತಿ ನಿಯಂತ್ರಿಸಬೇಕು. ಆದರೆ ಆ ಬಳಿಕ ಏನಾಯಿತು ಎಂಬುದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಆರೋಪಿಗಳನ್ನು ಬಂಧಿಸುವ ಮೂಲಕ ಪರಿಸ್ಥಿತಿ ನಿಭಾಯಿಸಲು ಹೊರಟದ್ದನ್ನು ತಾನು ಅನುಮಾನಿಸುತ್ತಿಲ್ಲ. ಪ್ರಶ್ನೆ ಏನೆಂದರೆ ಅಕ್ಟೋಬರ್ 3 ರಂದು ನಡೆದ ವಾಗ್ವಾದದ ನಂತರ ಅವರನ್ನು ಬಂಧಿಸಿ ಬಳಿಕ ಈ ಘಟನೆ (ಥಳಿತದ ಕೃತ್ಯ) ನಡೆಯಿತೇ ಎಂಬುದಾಗಿದೆ” ಎಂದಿತು.
ಅವರನ್ನು ರಾತ್ರಿ ವೇಳೆ ವಶಕ್ಕೆ ಮಾತ್ರವೇ ಪಡೆಯಲಾಗಿತ್ತು. ಬಂಧನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಮೀನ್ ತಿಳಿಸಿದರು. “ಅವರನ್ನು ವಶಕ್ಕೆ ಪಡೆದ ಪ್ರಶ್ನೆ ಉದ್ಭವಿಸುವುದಾದರೂ ಹೇಗೆ? ನಾನು ವಾಟ್ಸಾಪ್ ಸಂದೇಶಗಳನ್ನು ನ್ಯಾಯಾಲಯದಲ್ಲಿ ಓದಿದ್ದೇನೆ. ಒಂದು ವೇಳೆ ತಾವು ಪೊಲೀಸ್ ವಶದಲ್ಲಿದ್ದರೆ ವಾಟ್ಸಾಪ್‌ನಲ್ಲಿ ಆರೋಪಿಗಳು ಹೇಗೆ ಪರಸ್ಪರ ಸಂಭಾಷಿಸುತ್ತಿದ್ದರು ಎಂಬುದನ್ನು ಆರೋಪಿಗಳು ವಿವರಿಸಬೇಕಾಗುತ್ತದೆ" ಎಂದರು.
ಇದನ್ನು ಆಲಿಸಿದ ನ್ಯಾಯಾಲಯ ಹಾಗಿದ್ದರೆ ಸರ್ಕಾರ ಘಟನೆಯನ್ನು ನಿರಾಕರಿಸಬೇಕು ಎಂದು ಹೇಳಿತು. ಆದರೆ ತನ್ನ ಹೇಳಿಕೆ ದಾಖಲಿಸಿಕೊಳ್ಳದಂತೆ ಅಮೀನ್ ಅವರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರಿಂದ ಆದೇಶದಲ್ಲಿ ಅವರ ಹೇಳಿಕೆ ದಾಖಲಿಸುವುದನ್ನು ಪೀಠ ನಿಲ್ಲಿಸಿತು. ಜುಲೈ 6ರಂದು ವಿಚಾರಣೆ ಮುಂದುವರೆಯಲಿದೆ.