ಮುಸ್ಲಿಂ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಥಳಿತ: ತಪ್ಪಿತಸ್ಥ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಗುಜರಾತ್ ಹೈಕೋರ್ಟ್

ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿದ ಮತ್ತು ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವುದಾಗಿ ತಿಳಿಸಿದ ತಪ್ಪಿತಸ್ಥ ಪೊಲೀಸರ ಮನವಿಯನ್ನು ಪೀಠ ಪುರಸ್ಕರಿಸಲಿಲ್ಲ.
Gujarat High Court
Gujarat High Court

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐವರು ಮುಸ್ಲಿಂ ಪುರುಷರಿಗೆ ಸಾರ್ವಜನಿಕವಾಗಿ ಥಳಿಸಿ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾದ ರಾಜ್ಯ ಪೊಲೀಸರನ್ನು ಗುಜರಾತ್‌ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿತು [ಜಾಹಿರ್ಮಿಯಾ ರೆಹಮುಮಿಯಾ ಮಾಲೆಕ್ ಮತ್ತು ಗುಜರಾತ್ ಸರ್ಕಾರದ ನಡುವಣ ಪ್ರಕರಣ].

ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿದ ಮತ್ತು ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವುದಾಗಿ ತಿಳಿಸಿದ ತಪ್ಪಿತಸ್ಥ ಪೊಲೀಸರ ಮನವಿಯಿಂದ ನ್ಯಾಯಮೂರ್ತಿಗಳಾದ ಎನ್‌ ವಿ ಅಂಜಾರಿಯಾ ಮತ್ತು ನಿರಾಲ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ತೃಪ್ತಗೊಳ್ಳಲಿಲ್ಲ.

“ಸದಾಕಾಲ ಎತ್ತಿಹಿಡಿಯಲ್ಪಟ್ಟಿರುವ ನ್ಯಾಯಾಲಯದ ಘನತೆಯನ್ನು ನೀವೇನೂ ಎತ್ತಿಹಿಡಿಯುವುದು ನಮಗೆ ಬೇಕಾಗಿಲ್ಲ. ಇದು ಅಪ್ರಸ್ತುತ ಮನವಿ. ನೀವು ಸಂವಿಧಾನದ 21 ನೇ ವಿಧಿಯ (ಘನತೆಯಿಂದ ಜೀವಿಸುವ ಹಕ್ಕು) ಘನತೆಯನ್ನು ಎತ್ತಿ ಹಿಡಿಯಬೇಕೆಂದು ನಾವು ಬಯಸುತ್ತೇವೆ” ಎಂದು ನ್ಯಾ. ಅಂಜಾರಿಯಾ ಅಸಮಾಧಾನ ಸೂಚಿಸಿದರು.

ಪ್ರಕರಣಕ್ಕೆ ಅಪ್ರಸ್ತುತವಾಗಿರುವುದರಿಂದ ಅಫಿಡವಿಟ್‌ ಮತ್ತು ಪೊಲೀಸರ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಕಡ್ಡಿಮುರಿದಂತೆ ಹೇಳಿತು.

Also Read
ಶಾಂತಿ ಕಾಪಾಡುವುದಕ್ಕಾಗಿ ಮುಸ್ಲಿಮರಿಗೆ ಸಾರ್ವಜನಿಕವಾಗಿ ಥಳಿತ: ಗುಜರಾತ್ ಹೈಕೋರ್ಟ್‌ನಲ್ಲಿ ಪೊಲೀಸರ ಸಮರ್ಥನೆ

ಆಗ ಪೊಲೀಸರು ಬೇಷರತ್‌ ಕ್ಷಮೆ ಯಾಚಿಸಿರುವುದಾಗಿ ಪೊಲೀಸರ ಪರ ವಕೀಲರು ಪೀಠಕ್ಕೆ ತಿಳಿಸಿದರು. ಆದರೆ ನ್ಯಾ. ಅಂಜಾರಿಯಾ ಅವರು ʼಯಾಕೆ? ಆರೋಪಿಗಳನ್ನು  (ಮುಸ್ಲಿಂ ಪುರುಷರು) ಹೊಡೆದಿದ್ದಕ್ಕಾಗಿಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

“ಒಂದು ಹಂತದಾಚೆಗಿನ ವಿಧೇಯತೆ ಅನುಮಾನಕ್ಕೆ ಕಾರಣವಾಗುತ್ತದೆ” ಎಂದು ಅವರು ಹೇಳಿದರು. ಜೊತೆಗೆ “ನ್ಯಾಯಾಲಯದ ಘನತೆಯನ್ನು ಏಕೆ ಎತ್ತಿಹಿಡಿಯುತ್ತೀರಿ. ನೀವು ಪ್ರಕರಣದಲ್ಲಿ ಮಾನವ ಹಕ್ಕುಗಳನ್ನು ಕಾಪಾಡಿ ಮತ್ತು ಗೌರವಿಸಿ. ಡಿಕೆ ಬಸು ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಗೌರವಿಸಿ. ನಮಗೆ ಬೇಕಾಗಿರುವುದು ಇಷ್ಟೇ" ಎಂದು ನ್ಯಾಯಮೂರ್ತಿಗಳು ಒತ್ತಿ ಹೇಳಿದರು.

ಹೊಸ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಪೊಲೀಸರು ಮತ್ತು ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ಸೂಚಿಸಿದ ಪೀಠವು ಮುಂದಿನ ವಿಚಾರಣೆಯನ್ನು ಮಾರ್ಚ್ 29ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com