ಪೋಷಕರಿಂದ ಬೇರಾಗಲು ಗಂಡನನ್ನು ಒತ್ತಾಯಿಸುವುದು ಹಾಗೂ ಹೇಡಿ, ನಿರುದ್ಯೋಗಿ ಎನ್ನುವುದು ಕ್ರೌರ್ಯ: ಕಲ್ಕತ್ತಾ ಹೈಕೋರ್ಟ್

ಮದುವೆಯ ನಂತರವೂ ಭಾರತೀಯ ಕುಟುಂಬದಲ್ಲಿ ಮಗ ತನ್ನ ಹೆತ್ತವರೊಂದಿಗೆ ವಾಸಿಸುವುದು ಸಾಮಾನ್ಯ ಅಭ್ಯಾಸ ಎಂದ ನ್ಯಾಯಾಲಯ.
Calcutta High Court
Calcutta High Court
Published on

ಪತಿಯನ್ನು ತನ್ನ ಹೆತ್ತವರಿಂದ ಬೇರ್ಪಡುವಂತೆ ಒತ್ತಾಯಿಸಿದರೆ, ಜೊತೆಗೆ ಅವನನ್ನು 'ಹೇಡಿ ಮತ್ತು ನಿರುದ್ಯೋಗಿ' ಎಂದು ಕರೆದು ಮಾನಸಿಕ ಕ್ರೌರ್ಯ ಎಸಗಿದ್ದಕ್ಕಾಗಿ ಪತಿಗೆ ಪತ್ನಿಯಿಂದ ವಿಚ್ಛೇದನ ಪಡೆಯಲು ಅನುಮತಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಭಾರತೀಯ ಕುಟುಂಬದಲ್ಲಿ ಮಗನಾದವನು ಮದುವೆಯ ನಂತರವೂ ತನ್ನ ಹೆತ್ತವರೊಂದಿಗೆ ವಾಸಿಸುವುದು ಸಾಮಾನ್ಯ ರೂಢಿಯಾಗಿದೆ . ಪತ್ನಿಯು ಪತಿಯನ್ನು ಹೆತ್ತವರಿಂದ ಬೇರ್ಪಡಿಸುವ ಯತ್ನಕ್ಕೆ ಸ್ವಲ್ಪ ಸಮರ್ಥನೀಯ ಕಾರಣ ಇರಬೇಕು ಎಂದು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.

"ಭಾರತೀಯ ಸಂಸ್ಕೃತಿಯು ಮಗನು ತನ್ನ ಹೆತ್ತವರನ್ನು ನೋಡಿಕೊಳ್ಳುವುದನ್ನು ಪವಿತ್ರ ಕರ್ತವ್ಯ ಎನ್ನುವ ಪರಿಕಲ್ಪನೆಯನ್ನು ಪೋಷಿಸುತ್ತದೆ. ಸಮಾಜದ ಈ ರೀತಿಯ ಸಾಮಾನ್ಯ ರೂಢಿ ಮತ್ತು ಪದ್ದತಿಯಿಂದ ಹೆಂಡತಿಯು ಪತಿಯನ್ನು ವಿಚಲಿತಗೊಳಿಸಲು ಯತ್ನಿಸಿದರೆ ಅದಕ್ಕೆ ಆಕೆ ಸಮರ್ಥನೀಯ ಕಾರಣ ನೀಡಬೇಕು. ಪತ್ನಿಯ ಕಾರಣಕ್ಕೆ ಪತಿ ತನ್ನ ಪೋಷಕರಿಂದ ಬೇರ್ಪಡುವುದು ಸಾಮಾನ್ಯ ಅಭ್ಯಾಸವಲ್ಲ” ಎಂದು ಪೀಠ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಕ್ಷುಲ್ಲಕ ಕೌಟುಂಬಿಕ ಸಮಸ್ಯೆಗಳು ಮತ್ತು ಹಣಕಾಸಿನ ಅವಶ್ಯಕತೆಗಳ ಸಮಸ್ಯೆಗೆ ಸಂಬಂಧಿಸಿದ ಅಹಂನ ಘರ್ಷಣೆಯ ಉದಾಹರಣೆ ಹೊರತುಪಡಿಸಿ ಪತ್ನಿ ಪತಿಯನ್ನು ಪ್ರತ್ಯೇಕವಾಗಿರುವಂತೆ ಹೇಳುವ ಯಾವುದೇ ಸಮರ್ಥನೀಯ ಕಾರಣಗಳಿಲ್ಲ. ತನ್ನ ಶಾಂತಿಯುತ ವೈವಾಹಿಕ ಜೀವನಕ್ಕಾಗಿ ಮಾತ್ರ ಪತಿ ತನ್ನ ಪೋಷಕರ ಮನೆಯಿಂದ ಬಾಡಿಗೆಗೆ ತೆರಳಿದ್ದಾನೆ ಎಂಬ ಅಂಶಗಳನ್ನು ಪೀಠ ಗಮನಿಸಿತು.  

"ಹೀಗಾಗಿ, ಮೇಲ್ಮನವಿದಾರರು ಅತ್ತೆ ಮಾವಂದಿರಿಂದ ದೂರವಾಗಿ ಪ್ರತ್ಯೇಕವಾಗಿ ಗಂಡನೊಂದಿಗೆ ವಾಸಿಸುವುದಕ್ಕೆ ಸಮರ್ಥನೀಯ ಕಾರಣಗಳಿಲ್ಲ, ಏಕೆಂದರೆ ಅದು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಪತಿಯು ಪತ್ನಿಯ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಯಾವ ಮಗನೂ ಬೇರ್ಪಡಲು ಬಯಸುವುದಿಲ್ಲ. ತನ್ನ ಪೋಷಕರು ಮತ್ತು ಕುಟುಂಬ ಸದಸ್ಯರಿಂದ ಪತಿಯನ್ನು ಬೇರ್ಪಡಿಸಲು ಪತ್ನಿ ಮಾಡುವ ನಿರಂತರ ಯತ್ನ ಪತಿಗೆ ಹಿಂಸೆಯಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪಾಶಿಮ್ ಮಿಡ್ನಾಪುರದ ಕೌಟುಂಬಿಕ ನ್ಯಾಯಾಲಯ 2009ರ ಮೇ 25ರಂದು ಕ್ರೌರ್ಯದ ಆಧಾರದ ಮೇಲೆ ಪತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೀಠದಲ್ಲಿ ನಡೆಯಿತು. ಕೌಟುಂಬಿಕ ನ್ಯಾಯಾಲಯವು ಜುಲೈ 2, 2001ರಂದು ದಂಪತಿಗಳ ವಿವಾಹವನ್ನು ಕೊನೆಗೊಳಿಸಿತ್ತು.

ಇದೀಗ ಹೈಕೋರ್ಟ್‌ ಕೂಡ ಪತ್ನಿಯ ಮನವಿಯನ್ನು ವಜಾಗೊಳಿಸಿದ್ದು ವಿಚ್ಛೇದನ ಆದೇಶ ನೀಡಲು ನಿರಾಕರಿಸುವುದು ಎರಡೂ ಕಡೆಯವರಿಗೆ ಹಾನಿಕಾರಕವಾಗುತ್ತದೆ ಎಂದು ತಿಳಿಸಿದೆ.

Kannada Bar & Bench
kannada.barandbench.com