ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ ಸರ್ಕಾರ

ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಜೂನ್‌ 4ರಂದು ಸಲ್ಲಿಸಿರುವ ತನಿಖಾ ವರದಿಯನ್ನು ಪರಿಶೀಲಿಸಲಾಗಿದೆ. ತನಿಖಾ ವರದಿಯ ಪ್ರತಿಯೊಂದನ್ನು ಅರ್ಜಿದಾರರಿಗೂ ನೀಡಬೇಕು ಎಂದು ಹೇಳಿ ವಿಚಾರಣೆಯನ್ನು ಜುಲೈ 20ಕ್ಕೆ ವಿಚಾರಣೆ ಮುಂದೂಡಿದ ಪೀಠ.
Karnataka High Court
Karnataka High Court
Published on

ಚಿತ್ರದುರ್ಗದ ಜಾನಕಲ್‌ ಮೀಸಲು ಅರಣ್ಯ ಪ್ರದೇಶದ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಸಾರಿಗೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರು ಸಲ್ಲಿಸಿರುವ ತನಿಖಾ ವರದಿಯನ್ನು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿನ ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದನ್ನು ತಿಳಿಯಲು ಪ್ರತಿವಾದಿಗಳ ಜಂಟಿ ಸರ್ವೆಗೆ ಆದೇಶಿಸಬೇಕು ಎಂದು ವಾಣಿ ವಿಲಾಸ್‌ ಸಿಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಪವನ್‌ ರಾಮಸ್ವಾಮಿ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ನಡೆಸಿತು.

ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಜೂನ್‌ 4ರಂದು ಸಲ್ಲಿಸಿರುವ ತನಿಖಾ ವರದಿಯನ್ನು ಪರಿಶೀಲಿಸಲಾಗಿದೆ. ತನಿಖಾ ವರದಿಯ ಪ್ರತಿಯೊಂದನ್ನು ಅರ್ಜಿದಾರರಿಗೂ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆ ಜುಲೈ 20ಕ್ಕೆ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಪೀಠವು ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರನ್ನು ಕುರಿತು ವಾಣಿ ವಿಲಾಸ್‌ ಸಿಮೆಂಟ್ಸ್‌ಗೆ ನೀಡಿರುವ ಭೂಮಿ ಅರಣ್ಯ ಭೂಮಿ ಎಂದು ವರದಿಯಲ್ಲಿ ಹೇಳಲಾಗಿದೆ ಎಂದರು.

ಇದಕ್ಕೆ ಹುಯಿಲಗೋಳ ಅವರು ಎಷ್ಟು ಅರಣ್ಯ ಭೂಮಿ ನಮಗೆ ಭೋಗ್ಯಕ್ಕೆ ನೀಡಿರುವ ಭೂಮಿಯಲ್ಲಿ ಸೇರಿದೆ ಎಂಬುದು ತಿಳಿದರೆ ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಿ ನಾವು ಅನುಮತಿ ಕೋರುತ್ತೇವೆ ಎಂದರು. ಇದಕ್ಕೆ ಪೀಠವು ಅರ್ಜಿದಾರರಿಗೂ ತನಿಖಾ ವರದಿ ನೀಡಲು ಸರ್ಕಾರಕ್ಕೆ ಸೂಚಿಸಿತು.

ಕಳೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಅರಣ್ಯ ಅಥವಾ ಬೇರಾವುದೇ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರ ಕುರಿತು ತನಿಖೆ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಸಾರಿಗೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿತ್ತು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿನ ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ರಾಜೇಂದ್ರ ಕಟಾರಿಯಾ ಅವರು ಜೂನ್‌ ಮೊದಲ ವಾರದಲ್ಲಿ ಮೊದಲಿಗೆ ವರದಿ ಸಲ್ಲಿಸಬೇಕು. ಆ ಬಳಿಕ, ರಾಜ್ಯದ ವಿವಿಧೆಡೆ ಅರಣ್ಯ ಅಥವಾ ಬೇರಾವುದೇ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರ ಕುರಿತು ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿತ್ತು.

Also Read
ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು ಪ್ರಕರಣ: ತನಿಖಾಧಿಕಾರಿಯಾಗಿ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ನೇಮಕ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 10, 12, 13, 14, 15, 17/2, 18 ಮತ್ತು 19 ರಲ್ಲಿನ 525 ಎಕರೆ ಭೂಮಿಯನ್ನು 2002ರ ಫೆಬ್ರವರಿ 4ರಂದು ವಾಣಿ ವಿಲಾಸ್‌ ಸಿಮೆಂಟ್ಸ್‌ಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿತ್ತು. 2010ರ ಜನವರಿ 30ರಂದು ಚಿತ್ರದುರ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಜಾನಕಲ್‌ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡಲಿದ್ದು, ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿ ಅನುಮತಿ ಪಡೆಯುವವರೆವಿಗೂ ಗಣಿಗಾರಿಕೆ ನಡೆಸಬಾರದು ಎಂದು ಆದೇಶ ಮಾಡಿರುವುದರ ಕುರಿತು ಮೊದಲಿಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಪೀಠ ಆದೇಶ ಮಾಡಿತ್ತು.

ಮೀಸಲು ಅರಣ್ಯ ಭೂಮಿ ಎಂದು ಗೊತ್ತಿದ್ದರೂ ಅದನ್ನು ಗಣಿಗಾರಿಕೆ ನಡೆಸಲು ಗುತ್ತಿಗೆ (ಲೀಸ್‌) ನೀಡುವ ಮೂಲಕ ಪ್ರಮಾದ ಎಸಗಲಾಗಿದೆ. ಹೀಗಿದ್ದೂ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲವೇಕೆ? ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸುತ್ತೇವೆ. ರಾಜ್ಯ ಸರ್ಕಾರವು ಅಧಿಕಾರಿಗಳ ಪರವಾಗಿದೆಯೋ ಅಥವಾ ಅರ್ಜಿದಾರರ ಪರವಾಗಿದೆಯೋ? ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ. ಯಾರಿಗೆ ಹೇಗೆ ಸಂಬಂಧವಿದೆ? ಅರಣ್ಯ ಭೂಮಿಯನ್ನು ಹೇಗೆ ಗುತ್ತಿಗೆಗೆ ಪಡೆಯಲಾಗಿದೆ? ಇದರ ಹಿಂದೆ ಯಾರೆಲ್ಲರ ಪ್ರಭಾವ ಇರಬಹುದು, ಮತ್ತೂ ಏನೇನೋ ಇರಬಹುದು. ಕೆಲವು ದೊಡ್ಡವರು ಸಹ ಇದರಲ್ಲಿ ಭಾಗಿಯಾಗಿರಬಹುದು ಎಂಬುದನ್ನು ತಿಳಿಯಬೇಕಿದೆ ಎಂದು ಪೀಠ ಹೇಳಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Kannada Bar & Bench
kannada.barandbench.com