ನಕಲಿ ದಾಖಲೆ, ವಂಚನೆ ಪ್ರಕರಣ: ರಜನೀಕಾಂತ್‌ ಪತ್ನಿ ಲತಾಗೆ ಜಾಮೀನು ಮಂಜೂರು ಮಾಡಿದ ಬೆಂಗಳೂರಿನ ನ್ಯಾಯಾಲಯ

ತಮಿಳಿನ ಕೊಚಾಡಿಯನ್‌ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ಗೆ ₹14.9 ಕೋಟಿಗೆ ಎರಡು ಕಂಪೆನಿಗಳ ನಡುವೆ ಒಪ್ಪಂದವಾಗಿತ್ತು. ಇದರಲ್ಲಿ ₹8.70 ಕೋಟಿಯನ್ನು ಲತಾ ಅವರು ಪಾವತಿಸಿದ್ದು, ಬಾಕಿ ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಈ ಪ್ರಕರಣ ದಾಖಲಾಗಿದೆ.
Latha Rajinikanth
Latha Rajinikanth

ಕೊಚಾಡಿಯನ್ ಸಿನಿಮಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ, ಸುಳ್ಳು ಹೇಳಿಕೆ, ವಂಚನೆ ಮತ್ತಿತರರ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ತಮಿಳು ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರ ಪತ್ನಿ ಲತಾ ಅವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್‌ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದ ಲತಾ ರಜನೀಕಾಂತ್‌ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆನಂದ್‌ ಎಸ್‌. ಕರಿಯಮ್ಮನವರ್‌ ಅವರು ಪುರಸ್ಕರಿಸಿದ್ದಾರೆ.

ಲತಾ ಅವರು ಒಂದು ಲಕ್ಷ ವೈಯಕ್ತಿಕ ಬಾಂಡ್‌, 25 ಸಾವಿರ ರೂಪಾಯಿ ನಗದು ಸಲ್ಲಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತಾನು ಸೂಚಿಸಿದಾಗ ಕೋರ್ಟ್‌ಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕರಾದ ಎಂ ಮುನಿರಾಜು ಅವರು “ಲತಾ ರಜನೀಕಾಂತ್‌ ಅವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಅವರು ಪ್ರಕರಣದಲ್ಲಿ ಸಿಲುಕಿರುವುದರಿಂದ ಅವರ ಬೆಂಬಲಿರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಲತಾ ಅವರನ್ನು ಬೆಂಬಲಿಸುವವರು ಇಂಥ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನೀತಿ ಹೇಳುವವರು ತಪ್ಪು ಮಾಡಿದಾಗ ಅವರಿಗೆ ಕ್ಷಮೆ ತೋರದೇ ನಿರ್ದಾಕ್ಷಿಣ್ಯವಾಗಿ ಜಾಮೀನು ಅರ್ಜಿ ತಿರಸ್ಕರಿಸಬೇಕು” ಎಂದು ಕೋರಿದ್ದರು.

ಲತಾ ರಜನೀಕಾಂತ್‌ ಪರ ವಕೀಲರು “ಇದು ಸಂಪೂರ್ಣವಾಗಿ ಸಿವಿಲ್‌ ವಿವಾದವಾಗಿದ್ದು, ಇದರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಅನಗತ್ಯವಾಗಿ ಲತಾ ಅವರ ಹೆಸರಿಗೆ ಅಪಕೀರ್ತಿ ತರುವ ಉದ್ದೇಶದಿಂದ ಪ್ರಕರಣ ದಾಖಲಿಸಿ, ಕಿರುಕುಳ ಕೊಡುತ್ತಿದ್ದಾರೆ” ಎಂದು ವಾದಿಸಿದ್ದರು.

ಡಿಸೆಂಬರ್‌ 1ರಂದು ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಲತಾ ರಜನೀಕಾಂತ್‌ ಅವರಿಗೆ ಜನವರಿ 6ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಲತಾ ಅವರು ಜಾಮೀನು ಪಡೆದುಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಚೆನ್ನೈನ ಆಡ್‌ ಬ್ಯುರೊ ಅಡ್ವರ್ಟೈಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಅಬಿರ್‌ ಚಂದ್ ನಹರ್‌ ಅವರು ನೀಡಿರುವ ದೂರಿನ ಪ್ರಕಾರ ಆಡ್‌ ಬ್ಯೂರೊ ಅಡ್ವರ್ಟೈಸಿಂಗ್‌ ಕಂಪೆನಿಯಾಗಿದ್ದು, ಸಿನಿಮಾ ನಿರ್ಮಾಣದಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಮತ್ತು ಸಿನಿಮಾ ನಿರ್ಮಾಣ ಕೆಲಸ ಮಾಡುತ್ತದೆ. ತಮಿಳಿನ ಕೊಚಾಡಿಯನ್‌ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಅನ್ನು 14.9 ಕೋಟಿ ರೂಪಾಯಿಗೆ ಆಡ್‌ ಬ್ಯುರೊ ಕಂಪೆನಿಯು ಮೀಡಿಯಾ ಒನ್‌ ಗ್ಲೋಬಲ್‌ ಎಂಟರ್‌ಟೈನ್‌ಮೆಂಟ್‌ ಕಂಪೆನಿಯ ಜೊತೆಗೆ ನಡೆಸಿತ್ತು. ಇದಕ್ಕೆ ಲತಾ ರಜನೀಕಾಂತ್‌ ಅವರು ಖಾತರಿ ನೀಡಿದ್ದು, ಈ ಸಂಬಂಧ ಒಪ್ಪಂದ ಸಹ ಆಗಿತ್ತು.

Also Read
ಕೊಚಾಡಿಯನ್ ಆರ್ಥಿಕ ನಷ್ಟ ಪ್ರಕರಣ: ರಜನಿಕಾಂತ್‌ ಪತ್ನಿ ಲತಾ ವಿರುದ್ಧ ಫೋರ್ಜರಿ ಕೇಸ್ ಮುಂದುವರಿಸಲು ಹೈಕೋರ್ಟ್‌ ಆದೇಶ

ಸಿನಿಮಾ ಬಿಡುಗಡೆಯಾದ ಬಳಿಕ 8.70 ಕೋಟಿ ರೂಪಾಯಿಗಳನ್ನು ಲತಾ ಅವರು ಪಾವತಿಸಿದ್ದು, 6.20 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿತ್ತು. ಇದನ್ನು ಪಾವತಿಸಲು ಲತಾ ಅವರು ಇಚ್ಛಿಸಿದ ವಿಚಾರವು ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.

ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಬೆಂಗಳೂರು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಮಾಡಿ 2014ರ ಡಿಸೆಂಬರ್‌ 2ರಂದು ಆದೇಶಿಸಿತ್ತು. ಆದರೆ, ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿ ಇರದ ದಿ ಪಬ್ಲಿಷರ್ಸ್‌ ಮತ್ತು ಬ್ರಾಡಕಾಸ್ಟರ್ಸ್‌ ವೆಲ್‌ಫೇರ್‌ ಅಸೋಸಿಯೇಶನ್‌ ಇಂಡಿಯಾ ಪ್ರೆಸ್‌ ಕ್ಲಬ್‌ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿದ್ದು, ಅದನ್ನು ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದರು ಎನ್ನಲಾಗಿತ್ತು.

ಲತಾ ಅವರು ನ್ಯಾಯಾಲಯಕ್ಕೆ ವಂಚಿಸಿದ್ದು, ದೂರುದಾರ ಆಡ್‌ ಬ್ಯುರೊ ಕಂಪೆನಿಗೆ ವಂಚಿಸುವ ಉದ್ದೇಶದಿಂದ ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದು ಅಬಿರ್‌ ಚಂದ್‌ 2015ರ ಜೂನ್‌ 9ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಬೆಂಗಳೂರಿನ ಹಲಸೂರು‌ ಗೇಟ್‌ ಠಾಣೆಯ ಪೊಲೀಸರು ಲತಾ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 196 (ಸುಳ್ಳು ಸಾಕ್ಷ್ಯ), 199, 463 (ಸುಳ್ಳು ದಾಖಲೆ ಸೃಷ್ಟಿ), 420 (ವಂಚನೆ) ಮತ್ತು 34ರ ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com