ಸಂಸ್ಕೃತ ಜಾತ್ಯತೀತ ಭಾಷೆ, ದೇಶದೆಲ್ಲೆಡೆ ಅದನ್ನು ಸಂಪರ್ಕ ನುಡಿಯಾಗಿ ಬಳಸಬಹುದು: ನಿವೃತ್ತ ಸಿಜೆಐ ಎಸ್‌ ಎ ಬೊಬ್ಡೆ

ಸಂಸ್ಕೃತದ ಶೇ 60ರಿಂದ 70 ಪದಗಳು ಕನ್ನಡ, ಒಡಿಯಾ, ಅಸ್ಸಾಮಿ, ಉರ್ದು ಮತ್ತಿತರ ಭಾಷೆಗಳಲ್ಲಿವೆ ಎಂದಿರುವ ಅವರು, ಜನರ ಮೇಲೆ ಭಾಷೆಗಳನ್ನು ಹೇರಬಾರದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
Former CJI SA Bobde
Former CJI SA Bobde

ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದು ಇಂಗ್ಲಿಷ್‌ ಭಾಷೆ ಮಾಡುವ ಕೆಲಸವನ್ನೇ ನಿಖರವಾಗಿ ಮಾಡಬಹುದಾಗಿದ್ದು ಅದು ಭಾರತದ ವಿವಿಧ ರಾಜ್ಯ ಹಾಗೂ ಸಂಸ್ಕೃತಿಗಳ ಸಂಪರ್ಕ ನುಡಿಯಾಗಿದೆ ಎಂದಿದ್ದಾರೆ.

ನಾಗಪುರದ ರೇಶಿಂಬಾಗ್‌ನ ಸ್ಮೃತಿ ಕೇಂದ್ರದಲ್ಲಿ ಸಂಸ್ಕೃತ ಭಾರತಿ ಶುಕ್ರವಾರ ಆಯೋಜಿಸಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಸಮ್ಮೇಳನದಲ್ಲಿ ಬೊಬ್ಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಮಜನ್ಮಭೂಮಿ ದೇಗುಲ ಟ್ರಸ್ಟ್‌ನ ಖಜಾಂಚಿ ಗೋವಿಂದ ದೇವ್‌ ಗಿರಿ ಮಹಾರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ನ್ಯಾ. ಬೊಬ್ಡೆ ಭಾಷಣದ ಪ್ರಮುಖಾಂಶಗಳು

  • ಬ್ರಿಟಿಷರ ಆಳ್ವಿಕೆಯಲ್ಲಿ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಮತ್ತು ಭಾರತದಲ್ಲಿನ ಏಕೈಕ ಅಧಿಕೃತ ಭಾಷೆಯಾಗಿ ಘೋಷಿಸದಿದ್ದರೆ ನಮಗೆ ಈ ಪರಿಕಲ್ಪನೆ ಬರುತ್ತಿರಲಿಲ್ಲ ಏಕೆಂದರೆ ಇಂಗ್ಲಿಷ್‌ ಮಾಡಬಲ್ಲ ಕೆಲಸವನ್ನು ಸಂಸ್ಖೃತ ನಿಖರವಾಗಿ ಮಾಡಬಹುದು ಅರ್ಥಾತ್‌ ಅದು ದೇಶದ ಉದ್ದಗಲಕ್ಕೆ ಸಂಪರ್ಕ ಭಾಷೆಯಾಗಿ ಕಾರ್ಯನಿರ್ವಹಿಸಬಲ್ಲದು.

  • ಇಂಗ್ಲಿಷ್ ಅನ್ನು ಯಾವುದೇ ಧರ್ಮದೊಂದಿಗೆ ಜೋಡಿಸದೆ ಸರಳ ಭಾಷೆಯಾಗಿ ಪರಿಚಯಿಸಿದ್ದರಿಂದ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲು ಅಥವಾ ಮಾತನಾಡಲು ಸಾಧ್ಯವಾಗಿದೆ.

  • ಕೆಲವು ನಾಸಾ ವಿಜ್ಞಾನಿಗಳು, ಸಂಸ್ಕೃತವನ್ನು ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸಂದೇಶ ಕಳುಹಿಸಲು ಬಳಸಬಹುದು ಎಂದಿದ್ದಾರೆ. ಬ್ರಿಟಿಷರ ಕಾಲಕ್ಕಿಂತ ಭಿನ್ನವಾಗಿ  ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಸಾಧನಗಳಿಂದಾಗಿ ಇಂದು ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸುಲಭ ಸಾಧ್ಯವಾಗಿದೆ.

  • ಭಾರತದಲ್ಲಿ ಸಂಸ್ಕೃತ ಅಧಿಕೃತ ಭಾಷೆಯಾಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್‌ ಅಂಬೇಡ್ಕರ್‌ ಮೊದಲಿಗರು.

  • ಪ್ರಸ್ತುತ, ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಆಡಳಿತ ಮತ್ತು ನ್ಯಾಯಾಲಯಗಳಲ್ಲಿ  ಅಧಿಕೃತ ಭಾಷೆಯಾಗಿ ಬಳಸಲಾಗುತ್ತಿದೆ. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ನೀಡುವಂತೆ ಪ್ರತಿಯೊಬ್ಬ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರಗಳು ಬರುತ್ತವೆ. 

  • ಹಿಂದಿಯಲ್ಲಿ ಏನನ್ನಾದರೂ ಪರಿಚಯಸುವ ಮೂಲಕ ಹಿಂದಿಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗುವುದಾದರೆ ಸಂಸ್ಕೃತವನ್ನು ಹಾಗೆ ಏಕೆ ಮಾಡಬಾರದು? ಉತ್ತಮ ಕಾರಣಕ್ಕೆ ಅದನ್ನು ಜಾರಿಗೆ ತರಲು ಇನ್ನೂ ಅವಕಾಶವಿದೆ.

  • ಆದರೆ ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಸಂಸ್ಕೃತ ರಾಜ್ಯ ಭಾಷೆಯಾಗಬೇಕು ಜಾತ್ಯತೀತ ಭಾಷೆಯಾಗಬೇಕು ಎಂದು ನಾನಿಲ್ಲಿ ಹೇಳುತ್ತಿದ್ದೇನೆ. ಏಕೆಂದರೆ ನನಗಿರುವ ಸೀಮಿತ ಜ್ಞಾನದಲ್ಲಿ ಸಂಸ್ಕೃತದ ಶೇ 60ರಿಂದ 70 ಪದಗಳು ಕನ್ನಡ, ಒಡಿಯಾ, ಅಸ್ಸಾಮಿ, ಉರ್ದು ಮತ್ತಿತರ ಭಾಷೆಗಳಲ್ಲಿವೆ.  

  • ಸಂಸ್ಕೃತ ಅದೆಷ್ಟು ಕಾರ್ಯಸಾಧುವಾದ ಜಾತ್ಯತೀತ ಭಾಷೆಯಾಗಿದೆ ಎಂದರೆ ಅದನ್ನು ಕಂಪ್ಯೂಟರ್‌ನಲ್ಲಿ ಬಳಸಬಹುದಾಗಿದ್ದು ಇಲ್ಲಿ ಧರ್ಮದ, ಪಕ್ಷಪಾತದ ಪ್ರಶ್ನೆ ಎದುರಾಗುವುದಿಲ್ಲ.

  •  ಆದರೆ, ಜನರ ಮೇಲೆ ಭಾಷೆ ಹೇರಬಾರದು.

Related Stories

No stories found.
Kannada Bar & Bench
kannada.barandbench.com