[ಒಂದು ರಾಷ್ಟ್ರ ಒಂದು ಚುನಾವಣೆ] ನಿವೃತ್ತ ಸಿಜೆಐಗಳ ಸಹಮತ; ಮೂರು ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ಆಕ್ಷೇಪ

ಏಕಕಾಲದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಸೆಪ್ಟೆಂಬರ್ 18ರಂದು ಅಂಗೀಕರಿಸಿತ್ತು.
[L-R] Justice Dipak Misra, Justice Ranjan Gogoi, Justice Sharad Arvind Bobde and Justice UU Lalit
[L-R] Justice Dipak Misra, Justice Ranjan Gogoi, Justice Sharad Arvind Bobde and Justice UU Lalit
Published on

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಭಾರತದ ನಿವೃತ್ತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಿಂದ  ಸಂಪರ್ಕಿಸಲ್ಪಟ್ಟಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಈ ಬಗೆಯ ಚುನಾವಣೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ನಿವೃತ್ತ ಸಿಜೆಐಗಳಾದ ದೀಪಕ್ ಮಿಶ್ರಾ , ರಂಜನ್ ಗೊಗೋಯ್ , ಶರದ್ ಅರವಿಂದ್ ಬೊಬ್ಡೆ ಹಾಗೂ ಯು ಯು ಲಲಿತ್   ಲಿಖಿತ ಪ್ರತಿಕ್ರಿಯೆ ಸಲ್ಲಿಸಿ  ಒಂದು ರಾಷ್ಟ್ರ ಒಂದು ಚುನಾವಣೆಗೆ ಬೆಂಬಲ ವ್ಯಕ್ತಪಡಿಸಿದ್ದರು.

Also Read
ಒಂದು ರಾಷ್ಟ್ರ ಒಂದು ಚುನಾವಣೆ: ಹಸಿರು ನಿಶಾನೆ ತೋರಿದ ರಾಮನಾಥ್‌ ಕೋವಿಂದ್ ನೇತೃತ್ವದ ಸಮಿತಿ

ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಮತ್ತು ಸಾರ್ವತ್ರಿಕ ಚುನಾವಣೆ ನಡೆದ  100 ದಿನದೊಳಗೆ ಪಂಚಾಯತ್‌ ಚುನಾವಣೆಗೆ ಅನುವು ಮಾಡಿಕೊಡುವ ನಿವೃತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಸೆಪ್ಟೆಂಬರ್ 18 ರಂದು ಅಂಗೀಕರಿಸಿತ್ತು.

ಶಿಫಾರಸು ವರದಿಯಲ್ಲಿ ತಿಳಿಸಿರುವಂತೆ ಫೆಬ್ರವರಿ 28ರಂದು ಬರೆದಿರುವ ಪತ್ರದಲ್ಲಿ ಈ ರೀತಿಯ ಚುನಾವಣೆ ಸಂವಿಧಾನದ ಮೂಲರಚನಾ ಸಿದ್ಧಾಂತ ಅಥವಾ ಒಕ್ಕೂಟ ವ್ಯವಸ್ಥೆ ಇಲ್ಲವೇ ಪ್ರಜಾಪ್ರಭುತ್ವದ ವಿರೋಧಿ ಎಂಬ ಆರೋಪಗಳು ಆಧಾರ ರಹಿತ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ.  ಒಂದು ರಾಷ್ಟ್ರ ಒಂದು ಚುನಾವಣೆಗಾಗಿ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿದ್ದು ಈ ಕುರಿತಂತೆ ಜನಜಾಗೃತಿ ಅಭಿಯಾನದಂತಹ ಅನುಷ್ಠಾನ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ನ್ಯಾ. ಗೊಗೊಯ್‌ ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ಕೋವಿಂದ್‌ ಅವರನ್ನು ಭೇಟಿಯಾಗಿದ್ದ ನ್ಯಾ. ಬೊಬ್ಡೆ ಅವರು ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾದ ಕಳವಳಗಳು ತಪ್ಪು ಎಂದಿದ್ದರು. ಇದೇ ವೇಳೆ ಚುನಾವಣಾ ಪ್ರಕ್ರಿಯೆ ಸುಧಾರಿಸಲು, ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯಲು ಹಾಗೂ ಸಾರ್ವಜನಿಕ ವೆಚ್ಚ  ಕಡಿಮೆ ಮಾಡಲು ಏಕಕಾಲಕ್ಕೆ ನಡೆಸುವ ಚುನಾವಣೆ ಸಹಕಾರಿ ಎಂದು ನ್ಯಾ. ಯು ಯು ಲಲಿತ್‌ ಪ್ರತಿಪಾದಿಸಿದ್ದರು.

Also Read
ನೀಟ್, ಒಂದು ರಾಷ್ಟ್ರ ಒಂದು ಚುನಾವಣೆ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ
[L-R] Former CJs of High Court -Justice Ajit Prakash Shah, Justice Girish Chandra Gupta, Justice Sanjib Banerjee
[L-R] Former CJs of High Court -Justice Ajit Prakash Shah, Justice Girish Chandra Gupta, Justice Sanjib Banerjee

ಶಿಫಾರಸು ಸಮಿತಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಅವರನ್ನು ಸಂಪರ್ಕಿಸಿದಾಗ ಅವರು ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದ್ದರು.

ವರದಿಯ ಪ್ರಕಾರ, ಸಮಾಲೋಚನೆ ನಡೆಸಿದ ವಿವಿಧ ಹೈಕೋರ್ಟ್ಗಳ ಹನ್ನೆರಡು ನಿವೃತ್ತ ನ್ಯಾಯಮೂರ್ತಿಗಳಲ್ಲಿ ಒಂಬತ್ತು ಮಂದಿ ಒಂದು ಚುನಾವಣೆ ಕಲ್ಪನೆಯನ್ನು ಬೆಂಬಲಿಸಿದರೆ, ಮೂವರು ಕಳವಳ ಮತ್ತು ಆಕ್ಷೇಪಣೆ ವ್ಯಕ್ತಪಡಿಸಿದ್ದರು.  ಆಕ್ಷೇಪ ವ್ಯಕ್ತಪಡಿಸಿದ್ದವರ ಹೆಸರುಗಳು ಇಂತಿವೆ: ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ ಪಿ ಶಾ ; ಕಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗಿರೀಶ್ ಚಂದ್ರ ಗುಪ್ತಾ ಹಾಗೂ ಮದ್ರಾಸ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ.

Also Read
ವಿಎಚ್‌ಪಿ ಆಯೋಜಿಸಿದ್ದ ನ್ಯಾಯಮೂರ್ತಿಗಳ ಸಭೆಯನ್ನು ಟ್ವೀಟ್‌ ಮಾಡಿದ್ದು ಕಾನೂನು ಸಚಿವಾಲಯದ ಪ್ರಮಾದ: ವಿಎಚ್‌ಪಿ

ಇಂತಹ ಚುನಾವಣೆ ವಿರೂಪವಾದ ಮತದಾನದ ಮಾದರಿಗಳಿಗೆ ನಾಂದಿ ಹಾಡಿ ಪ್ರಜಾಸತ್ತಾತ್ಮಕತೆಗೆ ಧಕ್ಕೆ ತರಬಹುದು ಎಂದು ನ್ಯಾ. ಶಾ ಕಳವಳ ವ್ಯಕ್ತಪಡಿಸಿದರೆ ಏಕಕಾಲದ ಚುನಾವಣೆಯ ಪರಿಕಲ್ಪನೆಯು ಪ್ರಜಾಪ್ರಭುತ್ವದ ತತ್ವಗಳಿಗೆ ಅನುಕೂಲಕರವಾಗಿಲ್ಲ ಎಂದು ನ್ಯಾ. ಗುಪ್ತಾ ಹೇಳಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕ ಮತ್ತು ಪ್ರಾದೇಶಿಕ ಸಂಗತಿಗಳಿಗೆ ಧಕ್ಕೆ ತರುತ್ತದೆ ಎಂದು ನ್ಯಾ. ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದರು.

Also Read
ಒಂದು ರಾಷ್ಟ್ರ ಒಂದು ಚುನಾವಣೆ: ಕೇಂದ್ರ ರಚಿಸಿರುವ ಉನ್ನತ ಮಟ್ಟದ ಸಮಿತಿಯಲ್ಲಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ

ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸಿದ ನಿವೃತ್ತ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು:

ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೊರ್ಲಾ ರೋಹಿಣಿ

ಅಲಾಹಾಬಾದ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿಲೀಪ್ ಬಾಬಾಸಾಹೇಬ್ ಭೋಸಲೆ

ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್

ರಾಜಸ್ಥಾನ ಮತ್ತು ಬಾಂಬೆ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದಜೋಗ್

ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್

ಅಲಹಾಬಾದ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜಯ್ ಯಾದವ್

ಕಲ್ಕತ್ತಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ

ಮದ್ರಾಸ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂಎನ್ ಭಂಡಾರಿ

ಬಾಂಬೆ ಹೈಕೋರ್ಟ್‌ನಿವೃತ್ತ ನ್ಯಾಯಮೂರ್ತಿ ಆರ್‌ ಡಿ ಧನುಕಾ

Also Read
ಬಿಜೆಪಿ ಪ್ರಣಾಳಿಕೆಯಲ್ಲಿ ಸಿಎಎ, ಏಕರೂಪ ನಾಗರಿಕ ಸಂಹಿತೆ, ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯ ಸಂಕಲ್ಪ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ  ನಡೆಸುವುದಕ್ಕೆ 2019 ರಲ್ಲಿ, ಭಾರತದ ಕಾನೂನು ಆಯೋಗ ಒತ್ತು ನೀಡಿತ್ತು. ತಾನು ಅಧಿಕಾರಕ್ಕೆ ಬಂದರೆ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.

ಕೇಂದ್ರ ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದವರಲ್ಲಿ ಶೇ 81ರಷ್ಟು ಮಂದಿ ಏಕಕಾಲದಲ್ಲಿ ಚುನಾವಣೆ ಜಾರಿಗೊಳಿಸಬೇಕೆಂಬ ಕಲ್ಪನೆಯ ಪರವಾಗಿದ್ದಾರೆ ಎಂದು ಈ ವರ್ಷದ ಜನವರಿಯಲ್ಲಿ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಪತ್ರಿಕಾ ಪ್ರಕಟಣೆ ಹೇಳಿತ್ತು .

Kannada Bar & Bench
kannada.barandbench.com