ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ: ಮಾಜಿ ಸಂಸದ ಆದಿಕೇಶವುಲು ಪುತ್ರ ಶ್ರೀನಿವಾಸ್‌ರಿಂದ ಜಾಮೀನು ಕೋರಿಕೆ

ರಘುನಾಥರ ಹಲವು ದಾಖಲೆ, ರಶೀದಿಗಳನ್ನು ಶ್ರೀನಿವಾಸ್‌ ತಿರುಚಿ ಅವುಗಳಿಗೆ ತಾವೇ ಸಹಿ ಮಾಡಿದ್ದು, ಅದರ ಫಲಾನುಭವಿಯೂ ಅವರೇ ಆಗಿದ್ದಾರೆ. ಇತರೆ ಆರೋಪಿಗಳ ಜೊತೆ ಶ್ರೀನಿವಾಸ್‌ ಪಿತೂರಿ ನಡೆಸಿ, ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.  
D K Srinivas & HC
D K Srinivas & HC
Published on

ಆತ್ಮಹತ್ಯೆಗೊಳಗಾಗಿದ್ದಾರೆ ಎನ್ನಲಾದ ಉದ್ಯಮಿ ಕೆ ರಘುನಾಥ್‌ ಅವರ ನಕಲಿ ಸಹಿ ಮಾಡಿ, ಆಸ್ತಿ ಕಬಳಿಸಿರುವ ಆರೋಪದಲ್ಲಿ ಬಂಧಿತರಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಅಧ್ಯಕ್ಷ ಡಿ ಕೆ ಆದಿಕೇಶವುಲು ನಾಯ್ಡು ಪುತ್ರ ಡಿ ಎ ಶ್ರೀನಿವಾಸ್‌ ಅವರ ಜಾಮೀನು ಅರ್ಜಿಯ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ರಘುನಾಥ್‌ ನಕಲಿ ಸಹಿ ಮಾಡಿ, ಅವರ ಆಸ್ತಿ ಕಬಳಿಸಿದ ಆರೋಪದ ಸಂಬಂಧಿತ ಪ್ರಕರಣದಲ್ಲಿ ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಸಿಬಿಐ ಪರವಾಗಿ ವಕೀಲ ಪಿ ಪ್ರಸನ್ನ ಕುಮಾರ್‌ ಅವರಿಗೆ ನೋಟಿಸ್‌ ಪಡೆಯಲು ನಿರ್ದೇಶಿಸಲಾಗಿದೆ. ಅಂತೆಯೇ ಸಂತ್ರಸ್ತೆಯಾಗಿರುವ ಮೂಲ ದೂರುದಾರೆ ರಘುನಾಥ್‌ ಪತ್ನಿ ಎಂ ಮಂಜುಳಾ ಅವರ ಮಧ್ಯಪ್ರವೇಶಿಕೆಗೂ ನ್ಯಾಯಾಲಯ ಅನುಮತಿಸಿದೆ.

Also Read
ರಘುನಾಥ್‌ ಆತ್ಮಹತ್ಯೆ: ಮಾಜಿ ಸಂಸದ ಆದಿಕೇಶವಲು ಪುತ್ರ ಶ್ರೀನಿವಾಸ್‌, ಪುತ್ರಿ ಕಲ್ಪಜಾ ಏಳು ದಿನ ಸಿಬಿಐ ಕಸ್ಟಡಿಗೆ

ಪ್ರಕರಣದ ಹಿನ್ನೆಲೆ: ರಘುನಾಥ್‌ ಅವರ ಹಲವಾರು ದಾಖಲೆ ಮತ್ತು ರಶೀದಿಗಳನ್ನು ಶ್ರೀನಿವಾಸ್‌ ತಿರುಚಿ ಅವುಗಳಿಗೆ ತಾವೇ ಸಹಿ ಮಾಡಿದ್ದು, ಅದರ ಫಲಾನುಭವಿಯೂ ಅವರೇ ಆಗಿದ್ದಾರೆ. ಇತರೆ ಆರೋಪಿಗಳ ಜೊತೆ ಶ್ರೀನಿವಾಸ್‌ ಪಿತೂರಿ ನಡೆಸಿ, ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಿಬಿಐ ಅರೋಪಿಸಿದೆ.

ಆ ದಾಖಲೆಗಳಲ್ಲಿ ನಕಲಿ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಶ್ರೀನಿವಾಸ್‌ ಬಳಕೆ ಮಾಡಿದ್ದಾರೆ. ಆ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಅವರೇ ಸೃಷ್ಟಿಸಿದ್ದಾರೆ. ಒಟ್ಟಾರೆ ಅವರು 60 ದಾಖಲೆ ಸೃಷ್ಟಿಸಿದ್ದು, ಈ ಪೈಕಿ 46ರಲ್ಲಿ ಅವರ ಸಹಿ ಇದೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120ಬಿ, 465, 467, 468, 471, 255, 256, 257, 258, 259 ಮತ್ತು 260 ಅಡಿ ಸಿಬಿಐ ಪ್ರಕರಣ ದಾಖಲಿಸಿದೆ.

Kannada Bar & Bench
kannada.barandbench.com