ಬೆದರಿಕೆ ಹಿನ್ನೆಲೆ: ಕುಕಿ ಸಮುದಾಯದ ಪ್ರಾಧ್ಯಾಪಕರ ಪರ ವಾದ ಮಂಡಿಸುವುದರಿಂದ ಹಿಂದೆ ಸರಿದ ಮಣಿಪುರದ ನಾಲ್ವರು ವಕೀಲರು

ವಕೀಲ ಎಸ್ ಚಿತ್ತರಂಜನ್ ಅವರು ಈ ಬಗ್ಗೆ ಮಣಿಪುರ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, 'ವೈಯಕ್ತಿಕ ತೊಂದರೆಗಳಿಂದ' ತಾನು ಮತ್ತು ತನ್ನ ಸಹೋದ್ಯೋಗಿಗಳು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
Kham Khan Suan Hausing, Manipur HC
Kham Khan Suan Hausing, Manipur HC

ಮೈತೇಯಿ ಸಮುದಾಯದ ಸದಸ್ಯರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕುಕಿ ಸಮುದಾಯದ ಪ್ರಾಧ್ಯಾಪಕ ಖಾಮ್ ಖಾನ್ ಸುವಾನ್ ಹೌಸಿಂಗ್ ಅವರ ಪರವಾಗಿ ಮಣಿಪುರ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸದಿರಲು ಇಂಫಾಲ ಮೂಲದ ನಾಲ್ವರು ವಕೀಲರು ನಿರ್ಧರಿಸಿದ್ದಾರೆ [ಖಾಮ್ ಖಾನ್ ಸುವಾನ್ ಹೌಸಿಂಗ್ ಮತ್ತು ಮಣಿಪುರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ವಕೀಲ ಎಸ್ ಚಿತ್ತರಂಜನ್ ಅವರು ಈ ಬಗ್ಗೆ ಮಣಿಪುರ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, 'ವೈಯಕ್ತಿಕ ತೊಂದರೆಗಳಿಂದ' ತಾನು ಮತ್ತುತನ್ನ ಸಹೋದ್ಯೋಗಿಗಳು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ  ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಅವರಿಗೆ ತಿಳಿಸಿದ್ದಾರೆ. ವಕೀಲರ ಹೇಳಿಕೆಗಳನ್ನು ಗಮನಿಸಿದ ನ್ಯಾಯಾಲಯ ಪ್ರಕರಣದಿಂದ ಹಿಂದೆ ಸರಿಯಲು ಅನುಮತಿ ನೀಡಿದೆ.

ಆದರೆ ಮಾಧ್ಯಮ ವರದಿಗಳ ಪ್ರಕಾರ ಮೈತೇಯಿ ಸಮುದಾಯದ ಸದಸ್ಯರು ಒಡ್ಡಿದ ಬೆದರಿಕೆಯಿಂದಾಗಿ ವಕೀಲರು ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

Also Read
ಎಸ್‌ಟಿ ಪಟ್ಟಿಗೆ ಮೈತೇಯಿ ಸಮುದಾಯ ಸೇರ್ಪಡೆ: ತೀರ್ಪು ನೀಡಿದ್ದ ಮಣಿಪುರ ಹೈಕೋರ್ಟ್‌ಗೆ ಸುಪ್ರೀಂ ತೀವ್ರ ತರಾಟೆ

ಮೈತೇಯಿ ಸಮುದಾಯವನ್ನು ಎತ್ತಿಕಟ್ಟುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವ ಬಗ್ಗೆ ಶಿಕ್ಷಣ ತಜ್ಞರೂ ಆಗಿರುವ ಪ್ರೊ. ಹೌಸಿಂಗ್‌ ಧ್ವನಿ ಎತ್ತಿದ್ದರು. ಸುದ್ದಿ ತಾಣವೊಂದಕ್ಕಾಗಿ ಸಂದರ್ಶನ ನೀಡಿರುವುದನ್ನು ಪ್ರಶ್ನಿಸಿ ಮೈತೇಯಿ ಸಮುದಾಯದವರು ಹೌಸಿಂಗ್‌ ವಿರುದ್ಧ ಖಾಸಗಿ ಕ್ರಿಮಿನಲ್‌ ಮೊಕದ್ದಮೆ ಹೂಡಿದ್ದಾರೆ.

ಹೌಸಿಂಗ್‌ ಅವರನ್ನು ಹಿರಿಯ ವಕೀಲ ಆನಂದ್ ಗ್ರೋವರ್ ಪ್ರತಿನಿಧಿಸುತ್ತಿದ್ದರು. ಅವರಿಗೆ ವಕೀಲರಾದ ಎಸ್ ಚಿತ್ತರಂಜನ್, ವಿಕ್ಟರ್ ಚೋಂಗ್ಥಮ್, ಟಿ ಜಿಂಗೊ ಮತ್ತು ಎ ಪ್ರಿಯೋಕುಮಾರ್ ಶರ್ಮಾ ಸಹಾಯ ಮಾಡುತ್ತಿದ್ದರು. ಗುರುವಾರ ಇವರಿಗೆ ಬೆದರಿಕೆ ಒಡ್ಡಲಾಗಿದ್ದು ಮರುದಿನ ಅವರ ಕಚೇರಿಯೊಂದನ್ನು ಧ್ವಂಸಗೊಳಿಸಲಾಗಿತ್ತು.

Kannada Bar & Bench
kannada.barandbench.com