ಪಶ್ಚಿಮ ಬಂಗಾಳ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಅಶೋಕ್ ಕುಮಾರ್ ದೇಬ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಿಜೆಐ ಅವರಿಗೆ ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪತ್ರವನ್ನು ಬರೆದಿದ್ದಾರೆ ಎಂದು ಪರಿಷತ್ತಿನ ನಾಲ್ವರು ಸದಸ್ಯರು ಆರೋಪಿಸಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ.
ಪರಿಷತ್ತಿನ ಅಧ್ಯಕ್ಷರಾದ ಅಶೋಕ್ ಕುಮಾರ್ ದೇಬ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು. ತಮ್ಮಷ್ಟಕ್ಕೆ ತಾವೇ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ವಿರುದ್ಧ ಪತ್ರವನ್ನು ಬರೆದಿದ್ದಾರೆ ಎಂದು ಪರಿಷತ್ತಿನ ನಾಲ್ವರು ಸದಸ್ಯರಾದ ಕೈಲಾಶ್ ತಮೊಲ್, ಸಮೀರ್ ಪೌಲ್, ರಬೀಂದ್ರನಾಥ್ ಭಟ್ಟಾಚಾರ್ಯ ಮತ್ತು ಮಿಹಿರ್ ದಾಸ್ ಸಿಜೆಐ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. ದೇಬ್ ಅವರು ತಮ್ಮ ಪತ್ರದಲ್ಲಿನ ವಿಷಯದ ಬಗ್ಗೆ ಪರಿಷತ್ತಿನ ಕಾರ್ಯಸೂಚಿಯಡಿ ಚರ್ಚಿಸಿಲ್ಲ. ಈ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಈ ನಾಲ್ವರು ಸದಸ್ಯರು ಪತ್ರದಲ್ಲಿ ಅವರು ಹೇಳಿದ್ದಾರೆ.
ಈ ನಾಲ್ವರು ಸದಸ್ಯರು ಸಿಜೆಐ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ, “ಪಶ್ಚಿಮ ಬಂಗಾಳದ ವಕೀಲರ ಪರಿಷತ್ತಿನ ಕಚೇರಿಯನ್ನು, ಅದರ ಲೆಟರ್‌ಹೆಡ್‌ಗಳು, ಮೊಹರುಗಳು ಮತ್ತು ಲಾಂಛನಗಳನ್ನು ಯಾವುದೇ ಅಧಿಕಾರವಿಲ್ಲದೆ ಬಳಸಿಕೊಳ್ಳುವ ಮೂಲಕ ಅಧ್ಯಕ್ಷರು ತಮ್ಮಿಷ್ಟ ಬಂದಂತೆ ನಡೆದುಕೊಂಡಿದ್ದಾರೆ; ಪಶ್ಚಿಮ ಬಂಗಾಳದ ವಕೀಲರ ಪರಿಷತ್ತಿನ ಚುನಾಯಿತ ಸದಸ್ಯರೊಡನೆ ಅವರು ಪತ್ರ ಬರೆಯುವುದಕ್ಕೂ ಮುನ್ನ ಚರ್ಚಿಸಿಲ್ಲ,” ಎಂದಿದ್ದಾರೆ.
ಮುಂದುವರೆದು, ದೇಬ್ ಅವರು ಕಳುಹಿಸಿರುವ ಪತ್ರದಲ್ಲಿನ ವಿಷಯವು ಮಾನಹಾನಿಕರವಾಗಿದ್ದು, ಕಡು ನಿಂದನೀಯವಾಗಿದೆ, ಸತ್ಯಾಂಶಗಳಿಂದ ದೂರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರೂ ಅಗಿರುವ ಅಶೋಕ್ ಕುಮಾರ್ ದೇಬ್ ಅವರು ಜೂನ್.25ರಂದು ಸಿಜೆಐ ರಮಣ ಅವರಿಗೆ ಪತ್ರವನ್ನು ಬರೆದಿದ್ದು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ರಾಜೇಶ್ ಬಿಂದಾಲ್ ಅವರನ್ನು ಕೂಡಲೇ ಅವರ ಸ್ಥಾನದಿಂದ ತೆರವುಗೊಳಿಸುವಂತೆ ಕಟುವಾಗಿ ಕೇಳಿದ್ದರು.