[ಫ್ರಾಂಕ್ಲಿನ್ ಟೆಂಪಲ್ಟನ್ ಪ್ರಕರಣ] ಹೂಡಿಕೆದಾರರಿಗೆ ರೂ. 9,122 ಕೋಟಿ ಹಣ ನೀಡುವಂತೆ ಸೂಚಿಸಿದ ಸುಪ್ರೀಂಕೋರ್ಟ್

ಹೂಡಿಕೆದಾರರಿಗೆ ಇನ್ನು ಇಪ್ಪತ್ತು ದಿನಗಳಲ್ಲಿ ಹಣ ನೀಡಬೇಕು ಎಂದು ನ್ಯಾಯಾಲಯ ಗಡುವು ವಿಧಿಸಿದೆ.
Franklin Templeton
Franklin Templeton

ಆರು ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಯೋಜನೆಗಳ ಹೂಡಿಕೆದಾರರಿಗೆ (ಯೂನಿಟ್‌ ಹೋಲ್ಡರ್ಸ್‌) ಸಾಲ ಯೋಜನೆಯಲ್ಲಿನ ಅವರ ನಿಧಿಯ ಮೇಲಿನ ಬಡ್ಡಿಯ ಅನುಪಾತಕ್ಕೆ ಅನುಗುಣವಾಗಿ ರೂ. 9,122 ಕೋಟಿ‌ ಮೊತ್ತವನ್ನು ವಿತರಿಸಬೇಕು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಎಲ್ಲಾ ಕಕ್ಷೀದಾರರ ಸಮ್ಮತಿ ಮೇರೆಗೆ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮ್ಯೂಚುಯಲ್ ಫಂಡ್‌ ಮೂಲಕ ಹಣ ವಿತರಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿತು.

Also Read
ಫ್ರಾಂಕ್ಲಿನ್‌ ಟೆಂಪಲ್ಟನ್‌ ಸಾಲ ಯೋಜನೆ ರದ್ದತಿ: ಯೂನಿಟ್‌ ಹೋಲ್ಡರ್‌ಗಳ‌ ಒಪ್ಪಿಗೆ ಪಡೆಯಬೇಕೆಂದ ಕರ್ನಾಟಕ ಹೈಕೋರ್ಟ್‌

ಎಸ್‌ಬಿಐ ಮ್ಯೂಚುಯಲ್ ಫಂಡ್‌ಜೊತೆಗೆ ಸಂಪೂರ್ಣ ಸಹಕರಿಸಲು ಮತ್ತು ಸಾಲ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೀಡಲು ಫ್ರಾಂಕ್ಲಿನ್ ಟೆಂಪಲ್ಟನ್ ಟ್ರಸ್ಟ್‌ಸರ್ವೀಸಸ್ ಲಿಮಿಟೆಡ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಪರ ವಕೀಲರು ಒಪ್ಪಿಕೊಂಡರು.

ಟೆಂಪಲ್ಪನ್‌ ಕಂಪೆನಿ ಇಂದಿನಿಂದ (ಫೆ ೨) ಇಪ್ಪತ್ತು ದಿನಗಳ ಒಳಗೆ ಹೂಡಿಕೆದಾರರಿಗೆ ಹಣ ನೀಡಬೇಕಿದೆ. ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಎದುರಾದರೆ ತಕ್ಷಣ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಕಕ್ಷೀದಾರರಿಗೆ ಸ್ವಾತಂತ್ರ್ಯ ನೀಡಿದೆ.

Also Read
ಟೆಂಪಲ್ಟನ್‌ ಪ್ರಕರಣ: ಕರ್ನಾಟಕ ಹೈಕೋರ್ಟ್‌ ʼಜಾಲ ಕಲಾಪʼದ ಮೂಲಕ ನಡೆಸಿದ ಅತಿ ಸುದೀರ್ಘ ವಿಚಾರಣೆ?

ಪ್ರಕರಣದ ಹಿನ್ನೆಲೆ

ಭಾರತದ ಒಂಬತ್ತನೇ ಅತಿದೊಡ್ಡ ಹೂಡಿಕೆ ಸಂಸ್ಥೆಯಾದ ಫ್ರಾಂಕ್ಲಿನ್ ಟೆಂಪಲ್ಟನ್ ಸುಮಾರು ರೂ 28,000 ಕೋಟಿ ಮೊತ್ತದ ಫ್ರಾಂಕ್ಲಿನ್‌ ಇಂಡಿಯಾದ ಆರು ಹೂಡಿಕೆ ಯೋಜನೆಗಳಾದ ಅಲ್ಪಾವಧಿ ನಿಧಿ, ಡೈನಾಮಿಕ್‌ ಸಂಚಯ ನಿಧಿ, ಕ್ರೆಡಿಟ್‌ ರಿಸ್ಕ್‌ ಫಂಡ್‌, ಅಲ್ಪಾವಧಿ ಆದಾಯ ಯೋಜನೆ, ಅತಿಚಿಕ್ಕ ಬಾಂಡ್‌ ನಿಧಿಯನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ದೇಶದ ವಿವಿಧೆಡೆಯ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು. ಈ ಪ್ರಕರಣಗಳ ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್‌ ಸೂಚಿಸಿತ್ತು.

ಫ್ರಾಂಕ್ಲಿನ್ ಟೆಂಪಲ್ಟನ್ ನ ಆರು ಸಾಲ ಯೋಜನೆಗಳನ್ನು ಮುಕ್ತಾಯಗೊಳಿಸುವ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದ ಹೈಕೋರ್ಟ್‌ ಹೂಡಿಕೆದಾರರ ಒಪ್ಪಿಗೆ ಪಡೆಯುವಂತೆ ಸೂಚಿಸಿತ್ತು. ಅಲ್ಲದೆ ಸಾಲ ಯೋಜನೆಗಳನ್ನು ಮುಕ್ತಾಯಗೊಳಿಸಲು ಹೊರಡಿಸಿದ ನೋಟಿಸ್‌ಗಳ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಫ್ರಾಂಕ್ಲಿನ್ ಟೆಂಪಲ್ಟನ್‌ಗೆ ನಿರ್ದೇಶನ ನೀಡಲಾಯಿತು. ಈ ಹಿಂದಿನ ವಿಚಾರಣೆ ವೇಳೆ ಸಾಲ ಯೋಜನೆ ಸ್ಥಗಿತಗೊಳಿಸುವ ಸಂಬಂಧ ಇ-ಮತದಾನ ಪ್ರಕ್ರಿಯೆ ನಡೆಯಲಿದ್ದು ಅದರ ಮೇಲ್ವಿಚಾರಣೆಗೆ ವೀಕ್ಷಕರನ್ನು ನೇಮಿಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸುಪ್ರೀಂಕೋರ್ಟ್‌ ತಿಳಿಸಿತ್ತು.

Kannada Bar & Bench
kannada.barandbench.com