

ರಾಜಸ್ಥಾನದಲ್ಲಿ ದಾಖಲಾಗಿದ್ದ ₹30 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ರಾಝ್ʼ, 'ಗುಲಾಮ್ʼ ಖ್ಯಾತಿಯ ಚಿತ್ರ ನಿರ್ಮಾಪಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ [ಶ್ವೇತಾಂಬರಿ ವಿ ಭಟ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ರಾಜಸ್ಥಾನ ಹೈಕೋರ್ಟ್ ಜಾಮೀನು ನಿರಾಕರಿಸಿದ ನಿರ್ಧಾರದ ವಿರುದ್ಧ ದಂಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಿಜೆಐ ಸೂರ್ಯಕಾಂತ್ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿ ಎಂ ಪಂಚೋಲಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಈ ಹಿಂದೆ ನ್ಯಾಯಾಲಯ ಶ್ವೇತಾಂಬರಿ ಭಟ್ ಅವರಿಗೆ ತಾತ್ಕಾಲಿಕ ಜಾಮೀನು ನೀಡಿತ್ತು. ಭಟ್ ದಂಪತಿ ತನಿಖೆಗೆ ಸಹಕರಿಸಲು ಸಿದ್ಧರಾಗಿದ್ದಾರೆ ಎಂದು ಗಮನಿಸಿದ ಅದು ಇದೀಗ ಹೈಕೋರ್ಟ್ ಆದೇಶ ರದ್ದುಪಡಿಸಿ ಜಾಮೀನು ನೀಡಿದೆ. ಪ್ರಕರಣವು ಕ್ರಿಮಿನಲ್ ಸ್ವರೂಪಕ್ಕಿಂತಲೂ ವ್ಯಾವಹಾರಿಕ ವಿವಾದದಂತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮಧ್ಯಸ್ಥಿಕೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಲಹೆ ನೀಡಿತು. ಪ್ರಮಾಣಿಕವಾಗಿ ವರ್ತಿಸಿ ಸ್ನೇಹಪೂರ್ವಕ ಪರಿಹಾರ ದೊರಕಿಸಿಕೊಳ್ಳುವಂತೆ ಕಕ್ಷಿದಾರರಿಗೆ ಕಿವಿಮಾತು ಹೇಳಿತು.
ಇದೇ ವೇಳೆ ಪ್ರಕರಣದಲ್ಲಿ ತಾನು ಈ ಹಿಂದೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆಗಳಿಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಪ್ರಭಾವ ಬೀರುವ ಯತ್ನಗಳು ನಡೆದರೆ ಪ್ರಕರಣವನ್ನು ರಾಜಸ್ಥಾನದಿಂದ ಮುಂಬೈಗೆ ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿತು. ನ್ಯಾಯಾಲಯದ ತೀರ್ಮಾನ ಪ್ರಶ್ನಿಸುವಂತಹ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಕಿವಿ ಹಿಂಡಿತು.
ಭಟ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ದವೆ, ದೂರುದಾರರ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ಅಡ್ವೊಕೇಟ್ ಆನ್ ರೆಕಾರ್ಡ್ ನಿತಿನ್ ಸಲೂಜಾ ವಾದ ಮಂಡಿಸಿದರು. ರಾಜಸ್ಥಾನ ಸರ್ಕಾರವನ್ನು ವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಿವ ಮಂಗಲ್ ಪ್ರತಿನಿಧಿಸಿದ್ದರು. ಕಳೆದ ವಿಚಾರಣೆಯಲ್ಲಿ ಭಟ್ ದಂಪತಿಗಳ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದ್ದರು. ಇಂದು ಅವರ ಪರವಾಗಿ ದವೆ ತಮ್ಮ ವಾದಗಳನ್ನು ಮುಂದಿಟ್ಟರು.
ಹಿನ್ನೆಲೆ
ಚಿತ್ರ ನಿರ್ಮಾಣಕ್ಕಾಗಿ ದೂರುದಾರರಾದ ಡಾ. ಅಜಯ್ ಮುರ್ಡಿಯಾ ಅವರಿಂದ ಪಡೆದ ಹಣವನ್ನು ನಿರ್ಮಾಪಕ ಮತ್ತು ಅವರ ಪತ್ನಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ ಎಂದು ವರದಿಯಾಗಿತ್ತು. ಡಾ. ಅಜಯ್ ಮುರ್ಡಿಯಾ ಅವರು ಇಂದಿರಾ ಕಂಪೆನಿ ಸಮೂಹ ಸಂಸ್ಥೆಯನ್ನು ನಡೆಸುತ್ತಾರೆ. ಸಂತಾನೋತ್ಪತ್ತಿ ಚಿಕಿತ್ಸಾ ಸಂಸ್ಥೆ ಇಂದಿರಾ ಐವಿಎಫ್ ಹಾಗೂ ಮನರಂಜನಾ ಸಂಸ್ಥೆ ಇಂದಿರಾ ಎಂಟರ್‌ಟೇನ್ಮೆಂಟ್ ಇದರ ಅಂಗಸಂಸ್ಥೆಗಳು.
ವರದಿಗಳ ಪ್ರಕಾರ, ವಿಕ್ರಂ ಭಟ್ ಮತ್ತು ಅವರ ಪತ್ನಿಯನ್ನು ಡಿಸೆಂಬರ್ 2025ರಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ವರ್ಷದ ಜನವರಿ 31ರಂದು ರಾಜಸ್ಥಾನ ಹೈಕೋರ್ಟ್‌ನ ಜೋಧ್‌ಪುರ ಪೀಠ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.