₹30 ಕೋಟಿ ವಂಚನೆ ಪ್ರಕರಣ: ಚಿತ್ರ ನಿರ್ಮಾಪಕ ವಿಕ್ರಂ ಭಟ್‌ ದಂಪತಿಗೆ ಮಧ್ಯಂತರ ಜಾಮೀನು

ಚಿತ್ರ ನಿರ್ಮಾಣಕ್ಕಾಗಿ ಇಂದಿರಾ ಕಂಪೆನಿ ಸಮೂಹ ಮುಖ್ಯಸ್ಥರಿಂದ ಪಡೆದ ಹಣವನ್ನು ನಿರ್ಮಾಪಕ ಮತ್ತು ಅವರ ಪತ್ನಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಲಾಗಿತ್ತು.
Vikram Bhatt, Supreme Court
Vikram Bhatt, Supreme Court
Published on

ರಾಜಸ್ಥಾನದಲ್ಲಿ ದಾಖಲಾಗಿದ್ದ ₹30 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ʼರಾಝ್‌ʼ, ʼಗುಲಾಮ್‌ʼ ಖ್ಯಾತಿಯ ಚಿತ್ರ ನಿರ್ಮಾಪಕ ವಿಕ್ರಂ ಭಟ್‌ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ [ಶ್ವೇತಾಂಬರಿ ವಿ ಭಟ್‌ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].

ರಾಜಸ್ಥಾನ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್‌ ಹಾಗೂ ನ್ಯಾಯಮೂರ್ತಿ ಜೊಯುಮಲ್ಯ ಬಾಗ್ಚಿ ಒಳಗೊಂಡ ಪೀಠ ಈ ಆದೇಶ ನೀಡಿತು.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

ಚಿತ್ರ ನಿರ್ಮಾಣಕ್ಕಾಗಿ ದೂರುದಾರರಾದ ಡಾ. ಅಜಯ್ ಮುರ್ಡಿಯಾ ಅವರಿಂದ ಪಡೆದ ಹಣವನ್ನು ನಿರ್ಮಾಪಕ ಮತ್ತು ಅವರ ಪತ್ನಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ ಎಂದು ವರದಿಯಾಗಿತ್ತು. ಡಾ. ಅಜಯ್ ಮುರ್ಡಿಯಾ ಅವರು ಇಂದಿರಾ ಕಂಪೆನಿ ಸಮೂಹ ಸಂಸ್ಥೆಯನ್ನು ನಡೆಸುತ್ತಾರೆ. ಸಂತಾನೋತ್ಪತ್ತಿ ಚಿಕಿತ್ಸಾ ಸಂಸ್ಥೆ ಇಂದಿರಾ ಐವಿಎಫ್‌ ಹಾಗೂ ಮನರಂಜನಾ ಸಂಸ್ಥೆ ಇಂದಿರಾ ಎಂಟರ್‌ಟೇನ್ಮೆಂಟ್‌ ಇದರ ಅಂಗಸಂಸ್ಥೆಗಳು.

ವರದಿಗಳ ಪ್ರಕಾರ, ವಿಕ್ರಂ ಭಟ್‌ ಮತ್ತು ಅವರ ಪತ್ನಿಯನ್ನು ಡಿಸೆಂಬರ್ 2025ರಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ವರ್ಷದ ಜನವರಿ 31ರಂದು ರಾಜಸ್ಥಾನ ಹೈಕೋರ್ಟ್‌ನ ಜೋಧ್‌ಪುರ ಪೀಠ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಭಟ್ ದಂಪತಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ “ವಿಕ್ರಂ, ಅವರ ಪತ್ನಿ, ನಿರ್ದೇಶಕರು ಹೀಗೆ ಎಲ್ಲರನ್ನೂ ಜೈಲಿಗೆ ಹಾಕಲು ಸಾಧ್ಯವೇ? ಇಲ್ಲಿ ಏನು ನಡೆಯುತ್ತಿದೆ?” ಎಂದು ಆಕ್ಷೇಪಿಸಿದರು.

Also Read
ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು, ತನಿಖಾಧಿಕಾರಿಗಳ ಸಭೆ ನಡೆಸಿ: ನ್ಯಾ. ಸಂದೇಶ್‌ ಸಲಹೆ

ಸರ್ಕಾರದ  ಪರ ವಕೀಲರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಇದು ಅಷ್ಟು ಸರಳ ವಿಷಯವಲ್ಲ. ₹30 ಕೋಟಿ ವಂಚನೆ ಪ್ರಕರಣ!” ಎಂದು ಅವರು ಹೇಳಿದರು. 

ಆದರೆ ನ್ಯಾಯಮೂರ್ತಿ ಜೊಯುಮಲ್ಯ ಬಾಗ್ಚಿ ಅವರು, ಹಣ ವಸೂಲಿಗೆ ಕ್ರಿಮಿನಲ್ ನ್ಯಾಯವ್ಯವಸ್ಥೆಯನ್ನು ಬಳಸಲು ಸಾಧ್ಯವಿಲ್ಲ ಎಂದರು.

ಬಳಿಕ ರಾಜಸ್ಥಾನ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌ ದಂಪತಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ದೂರುದಾರರನ್ನು ಸಹ ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಸೇರಿಸಲಾಗಿದ್ದು, ಅವರು ಪ್ರತಿಕ್ರಿಯಿಸಬಹುದು ಎಂದು ಅದು ಹೇಳಿತು. ಮುಂದಿನ ವಿಚಾರಣೆ ಫೆಬ್ರವರಿ 19ರಂದು ನಡೆಯಲಿದೆ.

Kannada Bar & Bench
kannada.barandbench.com