ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಖರೀದಿದಾರರಿಗೆ ಮೋಸ ಎಸಗಿ ₹ 50 ಕೋಟಿಗೂ ಹೆಚ್ಚಿನ ಮೊತ್ತದ ಹಣ ದುರ್ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ, ‘ಮಾಂಗಲ್ಯ ಕನ್ಸ್‌ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ‘ ನಿರ್ದೇಶಕರಾದ ಅಜ್ಗರ್ ಅಹಮದ್ ಮತ್ತು ಸಂಜಯ ಸೂರ್ಯನಾರಾಯಣ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಮಧ್ಯಂತರ ತಡೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಆಧರಿಸಿ ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಗೆ ತಡೆ ನೀಡಬೇಕು ಎಂದು ಕೋರಿ ಅಜ್ಗರ್ ಅಹಮದ್ ಮತ್ತು ಸಂಜಯ ಸೂರ್ಯನಾರಾಯಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್ ಸುನಿಲ್ ಕುಮಾರ್ ಅವರು ಉದ್ದೇಶಿತ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) 2024ರ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ಪೀಠವು ಅರ್ಜಿದಾರರ ವಿರುದ್ಧದ ದೂರುಗಳಿಗೆ ಮಧ್ಯಂತರ ತಡೆ ನೀಡಿ, ಪ್ರತಿವಾದಿ ಪ್ರಾಸಿಕ್ಯೂಷನ್ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮಾಂಗಲ್ಯ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು 2019ರಲ್ಲಿ ಪ್ರಾರಂಭಿಸಿದ್ದರು. ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೇ ನಂಬರ್ 15/2ರಲ್ಲಿ ‘ಮಾಂಗಲ್ಯ ಪಾರ್ಕ್ ಅವೆನ್ಯೂ‘ ಎಂಬ 14 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಲು ಖರೀದಿದಾರರಿಂದ ಒಟ್ಟು ₹ 50 ಕೋಟಿಗೂ ಹೆಚ್ಚಿನ ಮೊತ್ತವನ್ನು ಪಡೆದಿರುತ್ತಾರೆ. ಅಪಾರ್ಟ್‌ಮೆಂಟ್ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದ್ದು, ಖರೀದಿದಾರರಿಗೆ ಸಮಯಕ್ಕೆ ಸರಿಯಾಗಿ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ಗಳಿಗೆ ಕ್ರಯ ಪತ್ರ ಮಾಡಿಸಿಕೊಟ್ಟಿರುವುದಿಲ್ಲ. ಒಂದೇ ಫ್ಲ್ಯಾಟ್ ಅನ್ನು ಮೂವರಿಗೆ ಖರೀದಿ ಒಪ್ಪಂದ ಪತ್ರ ಮಾಡಿಕೊಟ್ಟಿರುವ ಸಾಕಷ್ಟು ಪ್ರಕರಣಗಳಿವೆ ಎಂದು ದೂರಲಾಗಿತ್ತು. ಅಂತೆಯೇ, ಫ್ಲ್ಯಾಟ್ ಖರೀದಿದಾರರಿಂದ ಪಡೆದ ಹಣವನ್ನು ರೇರಾ ಕಾಯಿದೆಯ ಅನುಸಾರ ಮಾಂಗಲ್ಯ ಪಾರ್ಕ್ ಅವೆನ್ಯೂ ಅಪಾರ್ಟ್‌ಮೆಂಟ್ ಕಟ್ಟಡ ಕಾಮಗಾರಿಗೆ ಬಳಸದೆ ಬೇರೆಡೆ ಅಕ್ರಮವಾಗಿ ಹೂಡಿಕೆ ಮಾಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಅಂಜನಾಪುರದಲ್ಲಿ, ‘ಮಾಂಗಲ್ಯ ಸಿಗ್ನೇಚರ್‘ ಹೆಸರಿನ 12 ಅಂತಸ್ತಿನ 138 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್ ಅನ್ನು ನಿರ್ಮಿಸಿದ್ದು, ಇವುಗಳಲ್ಲಿ ಕೆಲವು ಫ್ಲ್ಯಾಟ್‌ಗಳನ್ನು ಖರೀದಿದಾರರಿಗೆ ಕ್ರಯ ಪತ್ರ ಮಾಡಿಕೊಟ್ಟಿರುತ್ತಾರೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ 18 ತಿಂಗಳಲ್ಲಿ ಹಣ ದ್ವಿಗುಣಪಡಿಸಿ ವಾಪಸು ನೀಡುತ್ತೇವೆ ಮತ್ತು ಅವರಿಗೆ ಫ್ಲ್ಯಾಟ್‌ಗಳನ್ನು ಖರೀದಿ ಮಾಡಲು ನಾವೇ ಬ್ಯಾಂಕುಗಳಿಂದ ಸಾಲ ಕೊಡಿಸಿ ಸಾಲದ ಬಡ್ಡಿಯನ್ನು ಬ್ಯಾಂಕುಗಳಿಗೆ ನಾವೇ ಪಾವತಿ ಮಾಡುತ್ತೇವೆ ಎಂದು ಉದ್ದೇಶ ಪೂರ್ವಕವಾಗಿ ವಂಚನೆ ಮಾಡಿದ್ದಾರೆ ಎಂದು ದೊಡ್ಡಕಲ್ಲಸಂದ್ರ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.
ಈ ದೂರುಗಳನ್ನು ಆಧರಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 406 (ನಂಬಿಕೆ ದ್ರೋಹ), 420 (ವಂಚನೆ), ಪೋಂಜಿ ಸ್ಕೀಂಗಳನ್ನು (ನಿವೇಶನದಾರರಿಗೆ ಮೋಸ ಎಸಗುವ ಯೋಜನೆ) ಸೃಷ್ಟಿಸಿದ ಅಪರಾಧ, ಕೆಪಿಐಡಿ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯಿದೆ–2004) ಅಪರಾಧ ಹಾಗೂ ಅನಿಯಂತ್ರಿತ ಹೂಡಿಕೆ ಯೋಜನೆ ನಿಷೇಧ ಕಾಯಿದೆ–2019ರ (ಬಡ್ಸ್ ಕಾಯಿದೆ) ಅಡಿಯಲ್ಲಿನ ವಿವಿಧ ಸೆಕ್ಷನ್‌ಗಳ ಅನ್ವಯ ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.