ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ಘೋಷಿಸುವ ವಿಚಾರವು ಸಂಕೀರ್ಣವಾಗಿರುವುದರಿಂದ ಅದನ್ನು ಮೂವರು ನ್ಯಾಯಮೂರ್ತಿಗಳ ನೇತೃತ್ವದ ಪೀಠ ಆಲಿಸುವ ಅಗತ್ಯವಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಬ್ರಮಣಿಯಮ್ ಬಾಲಾಜಿ ವರ್ಸಸ್ ತಮಿಳುನಾಡು ಸರ್ಕಾರದ ನಡುವಿನ 2013ರ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸುವ ಅಗತ್ಯವಿದೆ ಎಂದು ಸಿಜೆಐ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ ಟಿ ರವಿಕುಮಾರ್ ಅವರ ನೇತೃತ್ವದ ಪೀಠ ಹೇಳಿದೆ.
“ಸಿಜೆಐ ನಿರ್ಧರಿಸಿದ ತ್ರಿಸದಸ್ಯ ಪೀಠದ ಮುಂದೆ ಪ್ರಕರಣ ಪಟ್ಟಿ ಮಾಡಲು ನಾವು ನಿರ್ದೇಶಿಸುತ್ತೇವೆ. ಇದು ಸಂಕೀರ್ಣ ಪ್ರಕರಣವಾಗಿರುವುದರಿಂದ ಸುಬ್ರಮಣಿಯಮ್ ಬಾಲಾಜಿ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ” ಎಂದು ನ್ಯಾಯಾಲಯ ಹೇಳಿದೆ.
ಸುಬ್ರಮಣಿಯಮ್ ಬಾಲಾಜಿ ತೀರ್ಪನ್ನು ಮರುಪರಿಶೀಲಿಸಬೇಕೆ ಎನ್ನುವುದೂ ಸೇರಿದಂತೆ ನ್ಯಾಯಾಂಗ ಮಧ್ಯಪ್ರವೇಶದ ವ್ಯಾಪ್ತಿ ಮತ್ತು ಸಾಧ್ಯತೆಯ ಬಗ್ಗೆ, ಜಾರಿಗೊಳಿಸಬಹುದಾದ ಆದೇಶವನ್ನು ನ್ಯಾಯಾಲಯ ಮಾಡಬಹುದುದೇ, ಸಮಿತಿಯು ಸಮೀಕರಣ ಹೇಗಿರಬೇಕು, ಸುಬ್ರಮಣಿಯಮ್ ಬಾಲಾಜಿ ವರ್ಸಸ್ ತಮಿಳುನಾಡು ಸರ್ಕಾರದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂಬ ಹಲವು ಪ್ರಶ್ನೆಗಳನ್ನು ಹಲವು ಪಕ್ಷಕಾರರು ಎತ್ತಿದ್ದಾರೆ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ. ಈ ಪ್ರಶ್ನೆಗಳನ್ನು ತ್ರಿಸದಸ್ಯ ಪೀಠವು ಪರಿಶೀಲಿಸಬೇಕಿದೆ.
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ನಿಯಂತ್ರಿಸುವುದು ಮತ್ತು ಅವರನ್ನು ಹೊಣೆಗಾರರನ್ನಾಗಿಸಲು ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.