[ಉಚಿತ ಕೊಡುಗೆ] ಮಾಧ್ಯಮ ಚರ್ಚೆಯಲ್ಲಿ ನ್ಯಾಯಾಲಯದ ಬಗ್ಗೆ ಡಿಎಂಕೆ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಅಸಮಾಧಾನ

ಡಿಎಂಕೆ ತಾನು ಮಾತ್ರವೇ ಬುದ್ದಿವಂತ ಪಕ್ಷಕಾರನೆಂದು ಭಾವಿಸಬೇಕಿಲ್ಲ ಎಂದಿರುವ ನ್ಯಾಯಾಲಯ, ಡಿಎಂಕೆ ಪ್ರತಿನಿಧಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.
Supreme Court
Supreme Court

ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಜನರಿಗೆ ಉಚಿತ ಕೊಡುಗೆ ನೀಡುವುದರ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಡಿಎಂಕೆ ಪಕ್ಷದ ಪ್ರತಿನಿಧಿಯು ಮಾಧ್ಯಮ ಚರ್ಚೆಯೊಂದರಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನಕ್ಕೆ ಅವರನ್ನು ಹೊಣೆಗಾರರನ್ನಾಗಿಸಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ನಡೆಸಿತು.

ಪ್ರಕರಣದ ವಿಚಾರಣೆ ವೇಳೆ ಡಿಎಂಕೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ವಿಲ್ಸನ್‌ ಅವರು ವಾದ ಮಂಡಿಸಲು ಮುಂದಾದರು. ಆಗ ಸಿಜೆಐ ರಮಣ ಅವರು “ವಿಲ್ಸನ್‌ ಅವರೇ ನೀವು ಪ್ರತಿನಿಧಿಸುವ ಪಕ್ಷದ (ಡಿಎಂಕೆ) ಕುರಿತು ನನಗೆ ಸಾಕಷ್ಟು ಹೇಳುವುದಿದೆ. ನೀವು ಮಾತ್ರವೇ ಬುದ್ದಿವಂತ ಪಕ್ಷಕಾರರು ಎಂದು ತಿಳಿದುಕೊಳ್ಳಬೇಡಿ. ನಾವು ಏನೂ ಹೇಳುತ್ತಿಲ್ಲ ಎಂದ ಮಾತ್ರಕ್ಕೆ ಏನೆಲ್ಲಾ ಹೇಳಲಾಗುತ್ತಿದೆ ಎಂಬುದರೆಡೆಗೆ ನಾವು ನಿರ್ಲಕ್ಷದಿಂದಿದ್ದೇವೆ ಎಂದು ಭಾವಿಸಬೇಡಿ” ಎಂದರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್‌ ಅವರು “ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ತಮಿಳುನಾಡಿನ ಹಣಕಾಸು ಸಚಿವರು ಸುಪ್ರೀಂ ಕೋರ್ಟ್‌ ಕುರಿತು ನೀಡಿದ ಹೇಳಿಕೆಯು ಸರಿಯಲ್ಲ” ಎಂದರು.

"ಗ್ರಾಮೀಣ ಪ್ರದೇಶದಲ್ಲಿ ಪಶು ಮತ್ತು ಮೇಕೆಗಳು ಬದುಕಿಗೆ ಆಧಾರ. ಹೆಣ್ಣು ಮಕ್ಕಳು ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಅವರಿಗೆ ಕೆಲವು ಕಡೆ ಬೈಸಿಕಲ್‌ ನೀಡಲಾಗುತ್ತದೆ. ಯಾವುದು ಉಚಿತ ಕೊಡುಗೆ ಮತ್ತು ಯಾವುದು ಕಲ್ಯಾಣ ಕಾರ್ಯಕ್ರಮ ಎಂಬುದನ್ನು ನಾವು ಪರಿಶೀಲಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಬಡತನದಲ್ಲಿ ಸಿಲುಕಿರುವ ವ್ಯಕ್ತಿಗೆ ಇಂಥ ಕಿಟ್‌ಗಳು ಅತ್ಯಂತ ಅಗತ್ಯ. ಇದನ್ನೆಲ್ಲಾ ನ್ಯಾಯಾಲಯದ ಕೊಠಡಿಯಲ್ಲಿ ಚರ್ಚಿಸಲಾಗದು. ಅಂಥ ಜನರ ತಿಳಿವಳಿಕೆ ಮತ್ತು ಬುದ್ದಿವಂತಿಕೆಯನ್ನು ನೋಡಿ ಕಲಿಯಬೇಕಿದೆ” ಎಂದು ಸಿಜೆಐ ಹೇಳಿದರು.

Also Read
ರಾಜಕೀಯ ಪಕ್ಷಗಳ ಉಚಿತ ಕೊಡುಗೆಯಿಂದ ಆರ್ಥಿಕ ಅನಾಹುತ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ

ಆರ್ಥಿಕ ನೀತಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಗಳಿಗೆ ಸಾಂವಿಧಾನಿಕ ಆಧಾರವಿಲ್ಲ ಎಂದು ಸುದ್ದಿ ವಾಹಿನಿಯ ಚರ್ಚೆಯೊಂದರಲ್ಲಿ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತಿಯಾಗರಾಜನ್ ಅವರು ಹೇಳಿದ್ದರು. “ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವುದು ಪ್ರಹಸನವಷ್ಟೆ. ಚುನಾಯಿತ ಪ್ರತಿನಿಧಿಗಳು ಹೇಗೆ ಜನರಿಗೆ ಹಣ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ತನ್ನ ಕೆಲಸ ಎಂದು ಭಾವಿಸಲು ಸುಪ್ರೀಂ ಕೋರ್ಟ್‌ ಅದ್ಯಾವ ನೂತನ ಸಾಂವಿಧಾನಿಕ ತಿದ್ದುಪಡಿಯನ್ನು ಆಧರಿಸಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ತಿಯಾಗರಾಜನ್‌ ಟಿವಿ ಚರ್ಚೆಯೊಂದರ ವೇಳೆ ವ್ಯಂಗ್ಯವಾಡಿದ್ದರು.

Related Stories

No stories found.
Kannada Bar & Bench
kannada.barandbench.com