ನ್ಯಾಯಾಂಗ ನೇಮಕಾತಿ: ಮುಂದುವರೆದ ಕೇಂದ್ರದ ವಿಳಂಬ ಧೋರಣೆ

ನೇಮಕಾತಿ ಪ್ರಕ್ರಿಯೆಯಲ್ಲಿ ಕೇಂದ್ರದ ವಿಳಂಬದ ಪರಿಣಾಮವಾಗಿ, ನ್ಯಾಯಮೂರ್ತಿ ಸಾರಂಗಿ ಅವರು ಕೇವಲ 16 ದಿನಗಳ ಕಾಲ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುವಂತಾಗಿದೆ.
Supreme Court
Supreme Court

ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಆರು ತಿಂಗಳ ನಂತರ ಒರಿಸ್ಸಾ ಹೈಕೋರ್ಟ್‌ ನ್ಯಾಯಮೂರ್ತಿ ಬಿ ಆರ್ ಸಾರಂಗಿ ಅವರನ್ನು ಜಾರ್ಖಂಡ್ ಹೈಕೋರ್ಟ್‌  ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.

ನೇಮಕಾತಿ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡಿದ ಪರಿಣಾಮವಾಗಿ, ನ್ಯಾಯಮೂರ್ತಿ ಸಾರಂಗಿ ಅವರು ಜುಲೈ 20ರಂದು ನಿವೃತ್ತರಾಗಲಿದ್ದು ಕೇವಲ 16 ದಿನಗಳ ಕಾಲ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತಾಗಿದೆ.

ನ್ಯಾಯಮೂರ್ತಿ ಎಸ್‌  ಕೆ ಮಿಶ್ರಾ ಅವರು ಡಿಸೆಂಬರ್ 29, 2023 ರಲ್ಲಿ ನಿವೃತ್ತರಾದಾಗಿನಿಂದ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿತ್ತು.  ಅಂದಿನಿಂದ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ತಾವು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾದ ದಿನವೇ ನ್ಯಾಯಮೂರ್ತಿ ಚಂದ್ರಶೇಖರ್ ತಮ್ಮನ್ನು ಹೈಕೋರ್ಟ್‌ನಿಂದ ವರ್ಗಾವಣೆ ಮಾಡುವಂತೆ ಕೋರಿದ್ದರು, ಇದನ್ನು ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದಿಸಿತು. ಆದರೆ ಅವರ ವರ್ಗಾವಣೆಯಾಗಿದ್ದು ನಿನ್ನೆಯಷ್ಟೇ.

Also Read
“ನಾವು ನಿಮಗೆ 10 ದಿನ ನೀಡುತ್ತಿದ್ದೇವೆ:” ನ್ಯಾಯಾಂಗ ನೇಮಕಾತಿ ಪೂರ್ಣಗೊಳಿಸಲು ಕೇಂದ್ರಕ್ಕೆ ಗಡುವು ನೀಡಿದ ಸುಪ್ರೀಂ

ಜಾರ್ಖಂಡ್‌ ಮಾತ್ರವಲ್ಲದೆ ವಿವಿಧ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಶೀಲ್ ನಾಗು ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿತ್ತು. ಅವರ ನೇಮಕಾತಿಗೆ ಇನ್ನೂ ಅಂಗೀಕಾರ ದೊರೆತಿಲ್ಲ. ಅಲ್ಲಿ ಕಳೆದ ಎಂಟು ತಿಂಗಳಿನಿಂದ ಪೂರ್ಣಾವಧಿ ಮುಖ್ಯ ನ್ಯಾಯಮೂರ್ತಿಗಳಿಲ್ಲ.

 ಇದರ ಜೊತೆಗೆ, ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್‌ಗಳಲ್ಲಿಯೂ ಕಾಯಂ ಮುಖ್ಯ ನ್ಯಾಯಮೂರ್ತಿಗಳಿಲ್ಲ; ಆ ಹುದ್ದೆಗಳ ಭರ್ತಿಗೆ ಕೊಲಿಜಿಯಂ ಇನ್ನೂ  ಶಿಫಾರಸು ಮಾಡಿಲ್ಲ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್  122 ನ್ಯಾಯಾಂಗ ನೇಮಕಾತಿಗಳು ಇನ್ನೂ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದಿದ್ದರು.

Also Read
ಪಿಎಸ್‌ಐ ನೇಮಕಾತಿ ಹಗರಣ: ಅಮೃತ್‌ ಪೌಲ್‌ರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

122 ಪ್ರಸ್ತಾವನೆಗಳ ಪೈಕಿ 87 ಶಿಫಾರಸುಗಳನ್ನು ಕೊಲಿಜಿಯಂಗೆ ರವಾನಿಸಲಾಗಿದ್ದು, 45 ಪ್ರಸ್ತಾವನೆಗಳಲ್ಲಿ ಕೊಲಿಜಿಯಂ ತನ್ನ ಅಭಿಪ್ರಾಯ ಸೂಚಿಸಿದೆ. 42 ಹೆಸರುಗಳು ಇನ್ನೂ ಕೊಲಿಜಿಯಂನಲ್ಲಿ ಬಾಕಿ ಉಳಿದಿವೆ. ಮೂಲತಃ, ಡಿಸೆಂಬರ್ 2023ರಿಂದ ಅನ್ವಯವಾಗುವಂತೆ ಒಟ್ಟು 80 ಪ್ರಸ್ತಾವನೆಗಳು ಕೇಂದ್ರದಲ್ಲಿ ಬಾಕಿ ಉಳಿದಿವೆ.

ಕೇಂದ್ರ ಸರ್ಕಾರ ಒಪ್ಪಿದ ಹೆಸರಗಳನ್ನು ಕೊಲಿಜಿಯಂ ಅನುಮೋದಿಸಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳ ನೇಮಕಾತಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ನವೆಂಬರ್ 2023ರಲ್ಲಿ, ಸುಪ್ರೀಂ ಕೋರ್ಟ್ ಹೇಳಿತ್ತು.

ಕೊಲಿಜಿಯಂ ನ್ಯಾಯಮೂರ್ತಿಗಳ ಹೆಸರನ್ನು ಸ್ವೀಕರಿಸದಿದ್ದರೆ, ಅದು ಅಲ್ಲಿಗೆ ಮುಕ್ತಾಯಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ  ಆಗ ಹೇಳಿತ್ತು.

ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ವರ್ಗಾವಣೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಕೂಡ ಸುಪ್ರೀಂ ಕೋರ್ಟ್ ಎತ್ತಿ ತೋರಿಸಿದೆ.

Kannada Bar & Bench
kannada.barandbench.com