ಪತಂಜಲಿ, ಬಾಬಾ ರಾಮದೇವ್‌ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್

ಕೋವಿಡ್-19 ಲಸಿಕೆ ಅಭಿಯಾನ ಮತ್ತು ಆಧುನಿಕ ಔಷಧದ ವಿರುದ್ಧ ನಡೆದಿದೆ ಎನ್ನಲಾದ ಅಪಪ್ರಚಾರ ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿತ್ತು.
Baba Ramdev, Patanjali, Supreme Court
Baba Ramdev, Patanjali, Supreme Court
Published on

ಪತಂಜಲಿ ಆಯುರ್ವೇದ ಸಂಸ್ಥೆ, ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ದಾಖಲಿಸಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ಕೈಬಿಟ್ಟಿದೆ.

ಪುರಾವೆ ಆಧಾರಿತ ಔಷಧಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಪತಂಜಲಿ ಆಯುರ್ವೇದ ಮತ್ತದರ ಪ್ರವರ್ತಕರಾದ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ನಿಂದ ಕಠಿಣ ಕ್ರಮಗಳನ್ನು ಎದುರಿಸಿದ್ದರು. ಸುಪ್ರೀಂ ಕೋರ್ಟ್‌ನ ಇಂದಿನ ಆದೇಶದಿಂದಾಗಿ ಈ ಇಬ್ಬರೂ ನಿರಾಳಗೊಳ್ಳುವಂತಾಗಿದೆ.

Also Read
ಪತಂಜಲಿ ಪ್ರಕರಣ: ಐಎಂಎ ಅಧ್ಯಕ್ಷರು ಸ್ವಂತ ಹಣ ಬಳಸಿ ಪ್ರಮುಖ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ತಾಕೀತು

ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ  ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ  ಪೀಠ ಇಂದು ತೀರ್ಪು ಪ್ರಕಟಿಸಿ ನ್ಯಾಯಾಂಗ ನಿಂದನೆ ವಿಚಾರಣೆ ಮುಕ್ತಾಯಗೊಳಿಸಿತು.

ನ್ಯಾಯಾಲಯದ ಆದೇಶದ ಹೊರತಾಗಿಯೂ ಈ ಇಬ್ಬರು ಇಂತಹ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಗಳನ್ನು ಉಲ್ಲಂಘಿಸಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ನಂತರ ಪತಂಜಲಿ ಹಾಗೂ ಈ ಇಬ್ಬರು ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟ್‌ ಕ್ಷಮೆ ಯಾಚಿಸಿದ್ದರು. ನ್ಯಾಯಾಲಯದ ಅಣತಿಯಂತೆ ಪತ್ರಿಕೆಗಳಲ್ಲಿ ದೊಡ್ಡ ಗಾತ್ರದಲ್ಲಿ ಕ್ಷಮಾಪಣೆಯನ್ನೂ ಪ್ರಕಟಿಸಿದ್ದರು.

ಕೋವಿಡ್-19 ಲಸಿಕೆ ಅಭಿಯಾನ ಮತ್ತು ಆಧುನಿಕ ಔಷಧದ ವಿರುದ್ಧ  ನಡೆದಿದೆ ಎನ್ನಲಾದ ಅಪಪ್ರಚಾರ ಪ್ರಶ್ನಿಸಿ  ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿತ್ತು.

2023ರ ನವೆಂಬರ್‌ನಲ್ಲಿ ಪತಂಜಲಿ ಔಷಧಗಳು ರೋಗ ಗುಣಪಡಿಸಲಿವೆ ಎಂದು ನೀಡಿದ್ದ ಪ್ರತಿ ಜಾಹೀರಾತಿನ ಪ್ರತಿಯೊಂದು ಸುಳ್ಳಿನ ಮೇಲೂ ತಲಾ ₹1 ಕೋಟಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿತ್ತು. ಆದರೂ, ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಪತಂಜಲಿ ಜಾಹೀರಾತುಗಳ ವಿರುದ್ಧ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.

ಪತಂಜಲಿಯ ಲೋಪವಷ್ಟೇ ಅಲ್ಲದೆ, ಇತರರು ಕೂಡ ತಪ್ಪುದಾರಿಗೆಳೆಯುವ ಜಾಹೀರಾತು ನೀಡುತ್ತಿರುವುದು, ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪ್ರಚುರಪಡಿಸುವ ಖ್ಯಾತನಾಮರ ಹೊಣೆಗಾರಿಕೆ, ಆಧುನಿಕ ವೈದ್ಯಕೀಯ ಪದ್ದತಿಯ ಅನೈತಿಕ ವಿಧಾನಗಳ ಕುರಿತಂತೆಯೂ ಪ್ರಕರಣದ ವ್ಯಾಪ್ತಿ ಕಾಲಾನಂತರದಲ್ಲಿ ವಿಸ್ತರಿಸಿತ್ತು. ಖ್ಯಾತನಾಮರು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಚುರಪಡಿಸಿದರೆ ಅವರು ಕೂಡ ಸಮಾನ ಹೊಣೆಗಾರರಾಗುತ್ತಾರೆ ಎಂದು ನ್ಯಾಯಾಲಯ ಎಚ್ಚರಿಸಿತ್ತು.

ಪತಂಜಲಿ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ನಿಯಮ ಜಾರಿಗೊಳಿಸದ  ಮತ್ತು ದಿಕ್ಕು ತಪ್ಪಿಸುವ ಜಾಹೀರಾತಿನ ವಿರುದ್ಧ ಕ್ರಮಕೈಗೊಳ್ಳದಂತೆ ರಾಜ್ಯಗಳಿಗೆ ಸೂಚಿಸದ ಕೇಂದ್ರ ಸರ್ಕಾರ, ಹಾಗೂ ಸಂಸ್ಥೆ ವಿರುದ್ಧ ತೃಪ್ತಿಕರ ಕ್ರಮ ಕೈಗೊಳ್ಳದ ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದ್ದವು.

ಕುತೂಹಲದ ಸಂಗತಿ ಎಂದರೆ ಅರ್ಜಿ ಸಲ್ಲಿಸಿದ್ದ ಭಾರತೀಯ ವೈದ್ಯಕೀಯ ಸಂಘವನ್ನೂ ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಐಎಂಎ ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದಿದ್ದ ಪೀಠ ಅಲೋಪಥಿ ವೈದ್ಯರು ಅನಗತ್ಯ ಮತ್ತು ದುಬಾರಿ ಔಷಧಗಳನ್ನು ನೀಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ ಈ ಬಗ್ಗೆ ಮಾಧ್ಯಮಗಳೆದುರು ಆಕ್ಷೇಪಿಸಿದ್ದ ಐಎಂಎ ಅಧ್ಯಕ್ಷ ಡಾ. ಆರ್.ವಿ.ಅಶೋಕನ್ ಅವರು ಐಎಂಎಯನ್ನು ಸುಪ್ರೀಂ ಕೋರ್ಟ್ ಟೀಕಿಸಿರುವುದು ದುರದೃಷ್ಟಕರ. ಇದರಿಂದಾಗಿ ವೈದ್ಯರ ನೈತಿಕ ಸ್ಥೈರ್ಯ ಕುಸಿದಿದೆ ಎಂದಿದ್ದರು.

ಅಶೋಕನ್‌ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ ಅಶೋಕನ್ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಬೇಕು. ಹೀಗೆ ಅವರು ಕ್ಷಮೆಯಾಚಿಸಬೇಕಿರುವುದು ವೈಯಕ್ತಿಕ ನೆಲೆಯಲ್ಲೇ ವಿನಾ ಐಎಂಎ ಪರವಾಗಿ ಅಲ್ಲ ಎಂದು ತಾಕೀತು ಮಾಡಿತ್ತು.  

Also Read
ಪತಂಜಲಿ ಪ್ರಕರಣ: ಐಎಂಎ ಅಧ್ಯಕ್ಷರು ಸ್ವಂತ ಹಣ ಬಳಸಿ ಪ್ರಮುಖ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ತಾಕೀತು

ಅಲ್ಲದೆ ವೈದ್ಯಕೀಯ ಉತ್ಪನ್ನಗಳ ಕುರಿತಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಶ್ನಿಸಿ ಹೂಡಿರುವ ಅರ್ಜಿಗಳನ್ನು ಪ್ರಚುರಪಡಿಸಲು ಮತ್ತು ಅದರ ಪ್ರಗತಿಯ ಕುರಿತಾದ ಮಾಹಿತಿ ನೀಡಲು ಅನುವಾಗುವಂತೆ ಆಯುಷ್‌ ಸಚಿವಾಲಯ ತನ್ನ ಜಾಲತಾಣದಲ್ಲಿ ಕೇಂದ್ರೀಕೃತ ಡ್ಯಾಷ್‌ಬೋರ್ಡ್‌ ರೂಪಿಸಬೇಕು ಎಂದಿತ್ತು.

ಈ ನಡುವೆ ಪತಂಜಲಿ ಹಾದಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಎಲ್ಲಾ ಜಾಹೀರಾತುದಾರರು 'ಸ್ವಯಂ ಘೋಷಣೆ ಪ್ರಮಾಣಪತ್ರ' ಸಲ್ಲಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com