ತನ್ನ ವಿರುದ್ಧ ದೇಶದ ವಿವಿಧೆಡೆ ಹೂಡಲಾಗಿರುವ ದ್ವೇಷ ಭಾಷಣ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಪಲಾಯನಗೊಂಡ ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯ್ಕ್‌ಗೆ ಹೇಗೆ ಅವಕಾಶ ನೀಡಲಾಯಿತು ಎಂದು ಮಹಾರಾಷ್ಟ್ರ ಸರ್ಕಾರ ಇಂದು ಪ್ರಶ್ನಿಸಿದೆ [ಜಾಕಿರ್ ಅಬ್ದುಲ್ ಕರೀಂ ನಾಯ್ಕ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಪಲಾಯನಗೊಂಡ ವ್ಯಕ್ತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗದು ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದಿಸಿದರು.
“ಪಲಾಯನಗೈದ ವ್ಯಕ್ತಿ ಎಂದು ಘೋಷಿತರಾದವರು ಸಂವಿಧಾನದ 32ನೇ ವಿಧಿಯಡಿ (ತನ್ನ ಮೂಲಭೂತ ಹಕ್ಕನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟನ್ನು ಸಂಪರ್ಕಿಸುವ ಹಕ್ಕು) ಅರ್ಜಿ ಸಲ್ಲಿಸಬಹುದೇ? ಅವರು ಅರ್ಜಿ ಹಿಂಪಡೆಯುತ್ತಾರೆ ಎಂದು ನನಗೆ ತಿಳಿದುಬಂದಿದೆ. ನಾವು ನಮ್ಮ ಪ್ರತಿವಾದವನ್ನು ಸಿದ್ಧಪಡಿಸಿಕೊಂಡಿದ್ದೇವೆ” ಎಂದರು.
ಈ ವಾದ ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ವಿಭಾಗೀಯ ಪೀಠ ಝಾಕೀರ್ ನಾಯ್ಕ್ ಅವರ ಅರ್ಜಿಯ ನಿರ್ವಹಣೆಗೆ ಆಕ್ಷೇಪ ವ್ಯಕ್ತಪಡಿಸುವ ಅಫಿಡವಿಟ್ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಇಂದು ಅನುಮತಿ ನೀಡಿತು.
ಇಂದು ನಾಯ್ಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ನಾಯ್ಕ್ ಅವರ ವಿರುದ್ಧದ 43 ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸುವಂತೆ ಕೋರಿದ್ದರು.
ಎಸ್‌ಜಿ ಅವರು ತಿಳಿಸಿದಂತೆ ಪ್ರಕರಣ ಹಿಂಪಡೆಯಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲು ನಾಯ್ಕ್ ಅವರು ಸ್ವತಂತ್ರರು ಎಂದು ಪೀಠ ನುಡಿಯಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 23 ರಂದು ನಡೆಯಲಿದೆ.
ನಾಯ್ಕ್ ಅವರು ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪದಡಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಹಲವು ವರ್ಷಗಳಿಂದ ಅವರ ವಿರುದ್ಧ ತನಿಖೆ ನಡೆಸುತ್ತಿವೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ (ಯುಎಪಿಎ) ನಿಬಂಧನೆಗಳ ಅಡಿಯಲ್ಲಿಯೂ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
2017ರಲ್ಲಿ, ಎನ್‌ಐಎ ವಿಶೇಷ ನ್ಯಾಯಾಲಯ ನಾಯ್ಕ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ನಾಯ್ಕ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರು ಮಲೇಷ್ಯಾದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದ್ದು ಪಲಾಯನಗೈದಿದ್ದಾರೆ ಎಂದು ಘೋಷಿಸಲಾಗಿದೆ.
ನಾಯ್ಕ್ ಅವರ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನವನ್ನು (ಐಆರ್‌ಎಫ್) ಕಾನೂನುಬಾಹಿರ ಸಂಘ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು 2022ರಲ್ಲಿ ಯುಎಪಿಎ ನ್ಯಾಯಮಂಡಳಿ ಎತ್ತಿಹಿಡಿದಿತ್ತು. ದೆಹಲಿ ಹೈಕೋರ್ಟ್ ಮೇ 2017ರಲ್ಲಿ ಐಆರ್‌ಎಫ್ ಮೇಲೆ ವಿಧಿಸಿದ್ದ ನಿಷೇಧ ರದ್ದುಗೊಳಿಸಲು ನಿರಾಕರಿಸಿತ್ತು.