ಅಂತರ ಧರ್ಮೀಯ ಪ್ರೇಮ: ಯುವತಿಯ ಬಿಡುಗಡೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್‌

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಯುವತಿ ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ತಕ್ಷಣವೇ ಆಕೆಯನ್ನು ಬಿಡುಗಡೆ ಮಾಡುವಂತೆ ಮಹಿಳಾ ದಕ್ಷತಾ ಸಮಿತಿಗೆ ನಿರ್ದೇಶನ ನೀಡಿದ ಪೀಠ.
ಅಂತರ ಧರ್ಮೀಯ ಪ್ರೇಮ: ಯುವತಿಯ ಬಿಡುಗಡೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್‌
Published on

ವೈಯಕ್ತಿಕ ಸಂಬಂಧಗಳ ಕುರಿತಾದ ಇಬ್ಬರು ವ್ಯಕ್ತಿಗಳ ಸ್ವಾತಂತ್ರ್ಯವನ್ನು ಯಾರೊಬ್ಬರೂ ಮೊಟಕುಗೊಳಿಸಲಾಗದು ಎಂದಿರುವ ಕರ್ನಾಟಕ ಹೈಕೋರ್ಟ್‌ ಬೇರೊಂದು ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಪ್ರೇಮಿಸುತ್ತಿದ್ದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರನ್ನು ಬಂಧಮುಕ್ತಗೊಳಿಸುವಂತೆ ಆದೇಶಿಸಿದೆ.

ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ವ್ಯಕ್ತಿಯೊಬ್ಬರು ತಮ್ಮಿಚ್ಛೆಯ ಯಾವುದೇ ವ್ಯಕ್ತಿಯನ್ನು ವಿವಾಹವಾಗುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ಸುಜಾತಾ ಮತ್ತು ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ ತಿಳಿಸಿದೆ. ಇದೇ ವೇಳೆ ಯುವತಿಯ ಪ್ರೇಮಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಆಕೆಯನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.

Also Read
ʼಧರ್ಮಾತೀತವಾಗಿ ಇಷ್ಟದ ವ್ಯಕ್ತಿಯ ಜೊತೆ ಬದುಕುವುದು ಜೀವಿಸುವ ಹಕ್ಕಿನೊಳಗೇ ಅಂತರ್ಗತವಾಗಿದೆʼ: ಅಲಾಹಾಬಾದ್ ಹೈಕೋರ್ಟ್

ತಾನು ಪ್ರೇಮಿಸಿರುವ ಯುವತಿಯನ್ನು ಬಿಡುಗಡೆ ಮಾಡುವಂತೆ ಕೋರಿ ವಾಜೀದ್‌ ಖಾನ್‌ ಎಂಬುವವರು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಯುವತಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದಾಗ ಆಕೆ ವಿದ್ಯಾರಣ್ಯಪುರದ ಮಹಿಳಾ ದಕ್ಷತಾ ಸಮಿತಿಯ ವಶದಲ್ಲಿರುವುದಾಗಿ ತಿಳಿಸಿದರು. ಖಾನ್‌ ಅವರನ್ನು ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿ ತನ್ನ ಸ್ವಾತಂತ್ರ್ಯದ ಹಕ್ಕನ್ನು ತಮ್ಮ ಪೋಷಕರು ಉಲ್ಲಂಘಿಸುತ್ತಿದ್ದಾರೆ ಎಂದು ಆಕೆ ಹೇಳಿದ್ದರು.

ತನ್ನ ಸಹೋದ್ಯೋಗಿಯಾಗಿರುವ ಖಾನ್‌ ಅವರನ್ನು ಮದುವೆಯಾಗಲು ನಿರ್ಧರಿಸಿದ್ದೇನೆ. ಖಾನ್‌ ಅವರ ತಾಯಿಗೆ ಈ ಕುರಿತು ಯಾವುದೇ ಆಕ್ಷೇಪಣೆಗಳಿಲ್ಲವಾದರೂ ತನ್ನ ಪೋಷಕರು ಮದುವೆಯನ್ನು ವಿರೋಧಿಸುತ್ತಿದ್ದರು ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನ್ಯಾಯಪೀಠ, ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಯುವತಿ ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ತಕ್ಷಣವೇ ಆಕೆಯನ್ನು ಬಿಡುಗಡೆ ಮಾಡುವಂತೆ ಮಹಿಳಾ ದಕ್ಷತಾ ಸಮಿತಿಗೆ ನಿರ್ದೇಶನ ನೀಡಿತು.

“ಧರ್ಮಾತೀತವಾಗಿ ಇಷ್ಟದ ವ್ಯಕ್ತಿಯ ಜೊತೆ ಬದುಕುವುದು ಜೀವಿಸುವ ಹಕ್ಕಿನೊಳಗೇ ಅಂತರ್ಗತವಾಗಿದೆ” ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು. ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹೈಕೋರ್ಟ್‌ ಈ ರೀತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Also Read
ಸಲಿಂಗ ವಿವಾಹ ಪ್ರಕರಣ: ಕಾನೂನಿಗೆ ಲಿಂಗಭೇದ ಇಲ್ಲ ಎಂದ ದೆಹಲಿ ಹೈಕೋರ್ಟ್; ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್
Kannada Bar & Bench
kannada.barandbench.com