ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೂನ್‌ 2ರವರೆಗೆ ಗೇಮ್ಸ್‌ಕ್ರಾಫ್ಟ್‌ನ ಮೂವರು ನಿರ್ದೇಶಕರು ನ್ಯಾಯಾಂಗ ಬಂಧನಕ್ಕೆ

ಆರೋಪಿಗಳು ಜಾಮೀನು ಕೋರಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಜಾರಿ ನಿರ್ದೇಶನಾಲಯ ಇನ್ನಷ್ಟೇ ಆಕ್ಷೇಪಣೆ ಸಲ್ಲಿಸಬೇಕಿದೆ. ಹೀಗಾಗಿ, ಮೇ 21ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೂನ್‌ 2ರವರೆಗೆ ಗೇಮ್ಸ್‌ಕ್ರಾಫ್ಟ್‌ನ ಮೂವರು ನಿರ್ದೇಶಕರು ನ್ಯಾಯಾಂಗ ಬಂಧನಕ್ಕೆ
Published on

ಆನ್‌ಲೈನ್ ನೈಜ ಹಣ ಗೇಮಿಂಗ್ ವೇದಿಕೆಗಳನ್ನು ತಿರುಚಿದ ಆರೋಪದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್‌ಕ್ರಾಫ್ಟ್ ಕಂಪನಿಯ ಮೂವರು ನಿರ್ದೇಶಕರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಂಗಳವಾರ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ವಿಕಾಸ್‌ ತನೇಜಾ, ಪೃಥ್ವಿರಾಜ್‌ ಸಿಂಗ್‌ ಮತ್ತು ದೀಪಕ್‌ ಸಿಂಗ್‌ ಅಹ್ಲಾವತ್‌ ಅವರ ಕಸ್ಟಡಿ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳು ಆರೋಪಿಗಳನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಚಂದ್ರಶೇಖರ್‌ ರೆಡ್ಡಿ ಅವರ ಮುಂದೆ ಹಾಜರುಪಡಿಸಿದರು.

M Chandrashekar Reddy, Principal City Civil and Sessions Judge
M Chandrashekar Reddy, Principal City Civil and Sessions Judge

ಆರೋಪಿಗಳನ್ನು ಜಾರಿ ನಿರ್ದೇಶನಾಲಯವು ಕಸ್ಟಡಿಗೆ ಕೋರದೇ ಇದ್ದುದರಿಂದ ನ್ಯಾಯಾಲಯವು ಜೂನ್‌ 2ರವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು. ಈ ಹಿಂದೆ ಎರಡು ಬಾರಿ ಆರೋಪಿಗಳನ್ನು ನ್ಯಾಯಾಲಯವು ಇ ಡಿ ಕಸ್ಟಡಿಗೆ ನೀಡಿತ್ತು.

ಆರೋಪಿಗಳು ಜಾಮೀನು ಕೋರಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಜಾರಿ ನಿರ್ದೇಶನಾಲಯ ಇನ್ನಷ್ಟೇ ಆಕ್ಷೇಪಣೆ ಸಲ್ಲಿಸಬೇಕಿದೆ. ಹೀಗಾಗಿ, ಮೇ 21ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ಈ ಮಧ್ಯೆ, ಬಂಧನ ಅಕ್ರಮ ಎಂದು ಘೋಷಿಸುವಂತೆ ತನೇಜಾ, ದೀಪಕ್‌ ಮತ್ತು ಪೃಥ್ವಿರಾಜ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನಡೆಸಿದ್ದು, ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

ಪ್ರಸಕ್ತ ವರ್ಷ ತೆಲಂಗಾಣದ ಮೂರು ಕಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧರಿಸಿ ಇ ಡಿ ಯು ಆರೋಪಿಗಳನ್ನು ಮೇ 7 ಮತ್ತು 8ರಂದು ಬಂಧಿಸಿದೆ.

ನೈಜ ಹಣ ಗೇಮಿಂಗ್‌ ವೇದಿಕೆಗಳ ಮೂಲಕ ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು ನೈಜ ಆಟಗಾರರಿಗೆ ವಂಚಿಸಿದೆ. ಸೇವಾ ಷರತ್ತುಗಳನ್ನು ಉಲ್ಲಂಘಿಸಿ ಆರೋಪಿಗಳು ಅಕ್ರಮವಾಗಿ ನೈಜ ಆಟಗಾರರ ಖಾತೆಗಳು ಮತ್ತು ವಾಲೆಟ್‌ಗಳನ್ನು ನಿರ್ಬಂಧಿಸಿ ಅವರಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಗೇಮ್ಸ್‌ಕ್ರಾಫ್ಟ್‌ನ ಮೂವರು ನಿರ್ದೇಶಕರ ಇ ಡಿ ಕಸ್ಟಡಿ ಮೇ 19ರವರೆಗೆ ವಿಸ್ತರಣೆ

ಗೇಮ್ಸ್‌ಕ್ರಾಫ್ಟ್‌ನ ಇತರೆ ಸಂಸ್ಥಾಪಕರು ಮತ್ತು ನಿರ್ದೇಶಕರ ಜೊತೆಗೂಡಿ ದೀಪಕ್‌ ಸಿಂಗ್‌ ಅವರು ಮಾಜಿ ಪ್ರಧಾನ ವಿತ್ತ ಅಧಿಕಾರಿ ರಮೇಶ್‌ ಪ್ರಭು ಜೊತೆ ಸೇರಿ ₹250 ಕೋಟಿ ಹಣವನ್ನು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ ಹಾಗೂ ಮುಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಇ ಡಿ ಆರೋಪಿಸಿದೆ.

ಉದ್ಯಮದ ವೆಚ್ಚ ಎಂದು ನಕಲಿ ಮತ್ತು ಷೆಲ್‌ ಕಂಪನಿಗಳಿಗೆ ಹಣ ಕಳುಹಿಸಿ, ಅದನ್ನು ಆನಂತರ ಅಕ್ರಮ ಚಟುವಟಿಕೆ ಮತ್ತು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ ಡಿ ಆರೋಪಿಸಿದೆ.

Kannada Bar & Bench
kannada.barandbench.com