ಶಓಮಿ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ

ಭಾರತದ ಹೊರಗೆ ಇರುವ ಕಂಪೆನಿಗಳಿಗೆ ರಾಯಧನ ಅಥವಾ ಇತರ ಯಾವುದೇ ರೂಪದಲ್ಲಿ ಶುಲ್ಕ ಪಾವತಿ ಮಾಡಲು ಶಓಮಿಗೆ ಮಧ್ಯಂತರ ಆದೇಶವು ಯಾವುದೇ ಹಕ್ಕನ್ನು ಕಲ್ಪಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Karnataka High Court, Xiaomi
Karnataka High Court, Xiaomi
Published on

ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿಯ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಕೇಂದ್ರ ಹಣಕಾಸು ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಐವರು ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಿದೆ (ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ ವರ್ಸಸ್‌ ಭಾರತ ಸರ್ಕಾರ).

ಜಾರಿ ನಿರ್ದೇಶನಾಲಯದ ಆದೇಶ ಪ್ರಶ್ನಿಸಿ ಶಓಮಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.

“ಜಾರಿ ನಿರ್ದೇಶನಾಲಯವು ಆಕ್ಷೇಪಾರ್ಹವಾದ ಆದೇಶದ ಮೂಲಕ ನಿರ್ಬಂಧಿಸಲ್ಪಟ್ಟಿರುವ ಬ್ಯಾಂಕ್‌ ಖಾತೆಯ ಮೂಲಕ ದೈನಂದಿನ ಖರ್ಚು-ವೆಚ್ಚಗಳಿಗೆ ಹಣ ಬಳಕೆ ಮಾಡಬಹುದಾಗಿದೆ” ಎಂಬ ಷರತ್ತು ವಿಧಿಸಿರುವ ನ್ಯಾಯಾಲಯವು ಮುಂದಿನ ಆದೇಶದವರೆಗೆ ಜಾರಿ ನಿರ್ದೇಶನಾಲಯದ ಆಕ್ಷೇಪಿತ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಹೇಳಿದೆ.

“ಪ್ರತಿವಾದಿಗಳನ್ನು ಆಲಿಸಿದ ಬಳಿಕ ಭಾರತದ ಹೊರಗಿರುವ ವಿದೇಶಿ ಕಂಪೆನಿಗಳಿಗೆ ಹಣ ಪಾವತಿಸಲು ಅನುಮತಿಸುವ ಮಧ್ಯಂತರ ಕೋರಿಕೆಯನ್ನು ಪರಿಗಣಿಸಲಾಗುವುದು. ಮಧ್ಯಂತರ ಆದೇಶದ ತೆರವು/ಮಾರ್ಪಾಡು ಕೋರುವ ಸ್ವಾತಂತ್ರ್ಯವನ್ನು ಪ್ರತಿವಾದಿಗಳಿಗೆ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ಕಂಪೆನಿಯ ಆಸ್ತಿ ವಶಕ್ಕೆ ಪಡೆಯುವುದಕ್ಕೆ ತಡೆ ವಿಧಿಸಿ ಆದೇಶಿಸಿದೆ.

ಭಾರತದ ಹೊರಗೆ ಇರುವ ಕಂಪೆನಿಗಳಿಗೆ ರಾಯಧನ ಅಥವಾ ಇತರ ಯಾವುದೇ ರೂಪದಲ್ಲಿ ಶುಲ್ಕ ಪಾವತಿ ಮಾಡಲು ಶಓಮಿಗೆ ಯಾವುದೇ ಹಕ್ಕನ್ನು ಮಧ್ಯಂತರ ಆದೇಶವು ಕಲ್ಪಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಶಓಮಿ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಎಸ್‌ ಗಣೇಶ್‌ ಮತ್ತು ಸಜನ್ ಪೂವಯ್ಯ ಅವರು “ಭಾರತದ ಹೊರಗಿರುವ ಮೂರು ವಿದೇಶಿ ತಂತ್ರಜ್ಞಾನ ಕಂಪೆನಿಗಳಿಗೆ ರಾಯಧನ ಪಾವತಿಸಿರುವುದು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಸೆಕ್ಷನ್‌ 4ರ ಉಲ್ಲಂಘನೆ ಎನಿಸಿಕೊಳ್ಳುವುದಿಲ್ಲ. ಆದಾಯ ತೆರಿಗೆ ಇಲಾಖೆಯು ಇದನ್ನು ಕಾನೂನಾತ್ಮಕ ಎಂದು ಪರಿಗಣಿಸಿದ್ದು, ಕಡಿತ ಎಂದು ಪರಿಗಣಿಸಿದೆ” ಎಂದು ವಾದಿಸಿದರು.

“ತಂತ್ರಜ್ಞಾನ ರಾಯಧನ ಪಾವತಿಯನ್ನು 2015-16ರಿಂದ ಇಲ್ಲಿಯವರೆಗೆ ನೋಂದಾಯಿತ ಡೀಲರ್‌ಗಳ ಮೂಲಕ ಕಂಪೆನಿಯು ಪಾವತಿಸಿದ್ದು, ಶಓಮಿ ಭಾರತದ ಹೊರಗೆ ವಿದೇಶಿ ವಿನಿಮಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ, ಫೇಮಾದ ಸೆಕ್ಷನ್‌ 37ಎ ಅಡಿ ಜಾರಿ ನಿರ್ದೇಶನಾಲಯವು ಮಾಡಿರುವ ಆದೇಶವು ನಿಲ್ಲುವುದಿಲ್ಲ” ಎಂದು ಹೇಳಿದರು.

Also Read
ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವವರೆಗೂ ಕ್ರಮ ಕೈಗೊಳ್ಳದಿರುವುದು ಉತ್ತರ ಪ್ರದೇಶ ಸರ್ಕಾರದ ಚಾಳಿ: ಸುಪ್ರೀಂ ಕೋರ್ಟ್‌

“ಜಾರಿ ನಿರ್ದೇಶನಾಲಯವು ಕಂಪೆನಿಯ ಖಾತೆಯನ್ನು ನಿರ್ಬಂಧಿಸಿರುವುದರಿಂದ ವ್ಯವಹಾರಕ್ಕೆ ತೊಡಕಾಗಿದೆ. ಇದರಿಂದ ಉದ್ಯೋಗಿಗಳಿಗೆ ವೇತನ ಮತ್ತು ಸಂಬಳ ಪಾವತಿಸಲು ಅಡ್ಡಿಯಾಗಿದೆ. ಸಿಬ್ಬಂದಿ ಕೊರತೆಯಿಂದ ಮೇಲ್ಮನವಿ ನ್ಯಾಯ ಮಂಡಳಿಯು ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಬೇಕಾಯಿತು” ಎಂದು ಶಓಮಿ ಪರ ವಕೀಲರು ಪೀಠದ ಗಮನಸೆಳೆದರು.

ಹಿರಿಯ ವಕೀಲರಾದ ಎಸ್‌ ಗಣೇಶ್‌ ಮತ್ತು ಸಜನ್ ಪೂವಯ್ಯ ಅವರು ಶಓಮಿಯನ್ನು ಪ್ರತಿನಿಧಿಸಿದ್ದರು. ಆದಿತ್ಯ ವಿಕ್ರಮ್‌ ಭಟ್‌ ನೇತೃತ್ವದ ಎಝಡ್‌ಬಿ ಮತ್ತು ಪಾರ್ಟ್‌ನರ್ಸ್‌ ವಕೀಲರು ಇವರಿಗೆ ಮಾಹಿತಿ ನೀಡಿದರು. ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com