ಚಾಮರಾಜಪೇಟೆಯ ಈದ್ಗಾದಲ್ಲಿ ಗಣೇಶೋತ್ಸವ: ನಿರ್ಧಾರ ಕೈಗೊಳ್ಳಲು ಬೆಂಗಳೂರು ಡಿಸಿಗೆ ಹೈಕೋರ್ಟ್‌ ಮೌಖಿಕ ಸೂಚನೆ

“ನಿಮ್ಮ ಉದ್ದೇಶ ಒಳ್ಳೆಯದಾಗಿರಬಹುದು, ಆದರೆ, ತಡವಾಗಿ ನೀವು ನ್ಯಾಯಾಲಯಕ್ಕೆ ಬಂದಿದ್ದೀರಿ. ಅಷ್ಟಕ್ಕೂ ಖಾಸಗಿ ವ್ಯಕ್ತಿಗಳಿಗೆ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಬೇರೆ-ಬೇರೆ ದಿನ ಇರಲ್ಲ” ಎಂದ ನ್ಯಾಯಾಲಯ.
Karnataka High Court
Karnataka High Court
Published on

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಮನವಿ ಬಗ್ಗೆ ಏನಾದರೊಂದು ತೀರ್ಮಾನ ಕೈಗೊಳ್ಳಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಕಲಾಪ ಆರಂಭವಾಗುತ್ತಿದ್ದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪರವಾಗಿ ಹಾಜರಾದ ವಕೀಲ ಶ್ರೀಧರಪ್ರಭು ಅವರು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಪೀಠವು ಗಣೇಶ ಚತುರ್ಥಿ ಎರಡು ದಿನಗಳ ಹಿಂದೆ ಮುಗಿದಿದೆ. ಸೆಪ್ಟೆಂಬರ್‌ 18ರಂದು ಹಬ್ಬ ಇದೆ ಎಂದು ಬಹಳ ಹಿಂದೆಯೇ ದಿನ ನಿಗದಿಯಾಗಿತ್ತು. ಈ ವಿಚಾರ ನಿಮಗೆ ಗೊತ್ತಿರಲಿಲ್ಲ ಎಂದು ಹೇಳುವಂತಿಲ್ಲ. ಅಧಿಕ ಮಾಸದ ಕಾರಣಕ್ಕೆ ಕೆಲವು ಕಡೆ ಸೆಪ್ಟೆಂಬರ್‌ 19ಕ್ಕೆ ಹಬ್ಬ ಆಚರಿಸಲಾಗಿದೆ. ಏನೇ ಇರಲಿ ಹಬ್ಬ ಮುಗಿದ ಎರಡು ದಿನಗಳ ನಂತರ ವಿಳಂಬವಾಗಿ ನ್ಯಾಯಾಲಯಕ್ಕೆ ಯಾಕೆ ಬಂದಿದ್ದೀರಿ, ಮುಂಚಿತವಾಗಿ ಬಂದಿದ್ದರೆ ಏನಾದರೊಂದು ಪರಿಹಾರ ಸೂಚಿಸಬಹುದಿತ್ತು ಎಂದು ಒಕ್ಕೂಟದ ಪರ ವಕೀಲರನ್ನು ಪ್ರಶ್ನಿಸಿತು.

ಅದಕ್ಕೆ ಪ್ರಭು ಅವರು “ನಾವು ಆಚರಿಸುತ್ತಿರುವುದು ಸಾರ್ವಜನಿಕ ಗಣೇಶ ಉತ್ಸವ. ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುವುದು ನಮ್ಮ ಉದ್ದೇಶ. ಕನ್ನಡ ರಾಜ್ಯೋತ್ಸವ ನವೆಂಬರ್ 1ಕ್ಕೆ ಇರುತ್ತದೆ. ಆದರೆ, ತಿಂಗಳಿಡೀ ಆಚರಿಸಲಾಗುತ್ತದೆ. ಅದೇ ರೀತಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೆಪ್ಟೆಂಬರ್‌ 22ರಿಂದ 24ರವರೆಗೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ನಿರ್ಧರಿಸಿದೆ” ಎಂದು ಪೀಠಕ್ಕೆ ವಿವರಿಸಿದರು.

ಆಗ ನ್ಯಾಯಾಲಯವು “ನಿಮ್ಮ ಉದ್ದೇಶ ಒಳ್ಳೆಯದಾಗಿರಬಹುದು, ಆದರೆ, ತಡವಾಗಿ ನೀವು ನ್ಯಾಯಾಲಯಕ್ಕೆ ಬಂದಿದ್ದೀರಿ. ಅಷ್ಟಕ್ಕೂ ಖಾಸಗಿ ವ್ಯಕ್ತಿಗಳಿಗೆ, ಸಾರ್ವಜನಿಕ ಸಂಘಟನೆಗಳಿಗೆ ಗಣೇಶ ಪ್ರತಿಷ್ಠಾಪನೆಗೆ ದಿನ ಬೇರೆ-ಬೇರೆ ಇರುವುದಿಲ್ಲ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸಂಪ್ರದಾಯ ನಮ್ಮ ದೇಶದಲ್ಲಿ ಸುಮಾರು 80 ವರ್ಷಗಳಿಗೆ ನಡೆದುಕೊಂಡು ಬಂದಿರುವುದು ಗಮನಾರ್ಹ” ಎಂದು ಪೀಠ ಹೇಳಿತು.

“ಕೊನೆಗೆ ಇದಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೀರಾ” ಎಂದು ಪೀಠ ವಕೀಲರನ್ನು ಪ್ರಶ್ನಿಸಿತು. “ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೆಪ್ಟೆಂಬರ್‌ 13ರಂದು ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ” ಎಂದು ವಕೀಲರು ತಿಳಿಸಿದರು. ಇದಕ್ಕೆ ಪೀಠವು “ನಿಮ್ಮ ಮನವಿಯನ್ನು ಸರ್ಕಾರಿ ವಕೀಲರಿಗೆ ಕೊಡಿ. ಅವರು, ನಗರ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಏನಾದರೊಂದು ತೀರ್ಮಾನವನ್ನು ನಿಮಗೆ ತಿಳಿಸುತ್ತಾರೆ” ಎಂದು ಒಕ್ಕೂಟದ ಪರ ವಕೀಲರಿಗೆ ಪೀಠ ಮೌಖಿಕವಾಗಿ ಹೇಳಿತು.

Also Read
ಈದ್ಗಾ ಗಣೇಶೋತ್ಸವ: ಇತರೆ ಹಬ್ಬಗಳ ಆಚರಿಸಿದರೆ ಅಂಜುಮನ್‌ ಹಕ್ಕಿಗೆ ಹಾನಿಯಾಗಲಿದೆಯೇ ಎಂಬ ಪ್ರಶ್ನೆ ಹೈಕೋರ್ಟ್‌ ಮುಂದೆ

ಅರ್ಜಿಯಲ್ಲಿ ಏನಿದೆ?: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ದಸರಾ, ಶಿವರಾತ್ರಿ, ಗಣೇಶ ಉತ್ಸವ, ಕನ್ನಡ ರಾಜ್ಯೋತ್ಸವ, ಕ್ರೀಡೆಗಳನ್ನು ಆಯೋಜಿಸುವ ಸಂಬಂಧ 2006ರ ಸೆಪ್ಟೆಂಬರ್‌ 19ರಂದು ಅಂದಿನ ಸಚಿವರು, ಶಾಸಕರು ಪಾಲಿಕೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರ ಸಮಕ್ಷಮ ಚಾಮರಾಜಪೇಟೆ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೇ 2022ರ ಆಗಸ್ಟ್‌ 25ರಂದು ಈ ಮೈದಾನದಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಸರ್ಕಾರ ಮತ್ತು ಬಿಬಿಎಂಪಿಗೆ ಅವಕಾಶ ನೀಡಿದ್ದ ಹೈಕೋರ್ಟ್, ಆಟದ ಮೈದಾನ ಮತ್ತು ಮುಸ್ಲಿಂ ಸಮುದಾಯಕ್ಕೆ ವರ್ಷದಲ್ಲಿ ಎರಡು ಬಾರಿ (ರಂಜಾನ್ ಮತ್ತು ಬಕ್ರೀದ್) ಹಬ್ಬದ ಪ್ರಾರ್ಥನೆಗೆ ಅವಕಾಶ ಮುಂದುವರಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಮಾರ್ಪಡಿಸಿದ್ದ ಹೈಕೋರ್ಟ್, ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗೆಗಳನ್ನು ಆಚರಿಸಲು ಅನುಮತಿ ನೀಡಿತ್ತು.

ಇದನ್ನು ಪ್ರಶ್ನಿಸಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿತ್ತು. ಈಗ ಸೆಪ್ಟೆಂಬರ್‌ 22ರಿಂದ 24ರವರೆಗೆ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೆಪ್ಟೆಂಬರ್‌ 13ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ, ಒಕ್ಕೂಟದ ಮನವಿಯಂತೆ ನಿಗದಿತ ದಿನಾಂಕದಂದು ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com