ಗೌರಿ ಹತ್ಯೆ ಪ್ರಕರಣ: ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಕದತಟ್ಟಿದ 11ನೇ ಆರೋಪಿ ಮೋಹನ್‌ ನಾಯಕ್

ಮೋಹನ್‌ ನಾಯಕ್‌ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಇದುವರೆಗೆ 65 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಲು ಇನ್ನೂ 2-3 ವರ್ಷ ಬೇಕಾಗುತ್ತದೆ. ಹೀಗಾಗಿ, ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿಕೆ.
Journalist Gowri Lankesh
Journalist Gowri Lankesh

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪಕ್ಕೆ ಗುರಿಯಾಗಿರುವ ಮೋಹನ್‌ ನಾಯಕ್‌ ಅಲಿಯಾಸ್‌ ಸಂಪಾಜೆ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಜೂನ್‌ 3ಕ್ಕೆ ಮುಂದೂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಂಪಾಜೆಯ ನಿವಾಸಿಯಾದ 11ನೇ ಆರೋಪಿಯಾಗಿರುವ ಎನ್‌ ಮೋಹನ್‌ ನಾಯಕ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರಳೀಧರ್‌ ಪೈ ಅವರು ಬುಧವಾರ ನಡೆಸಿದರು.

ಅರ್ಜಿದಾರರ ಪರವಾಗಿ ವಕೀಲ ಅಮರ್‌ ಕೊರಿಯಾ ಅವರು “ಅರ್ಜಿದಾರರ ವಿರುದ್ಧ ಯಾವುದೇ ಪ್ರಬಲ ಸಾಕ್ಷಿಗಳು ಇಲ್ಲ. ಪ್ರಕರಣದಲ್ಲಿ ಇದುವರೆಗೆ 65 ಸಾಕ್ಷಿಗಳ ವಿಚಾರಣೆಯನ್ನು ಮಾತ್ರ ನಡೆಸಲಾಗಿದೆ. ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಎರಡು-ಮೂರು ವರ್ಷಗಳು ಬೇಕಾಗುತ್ತದೆ. ಹೀಗಾಗಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು” ಎಂದು ಕೋರಿದರು.

ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್‌ ಬಾಲಕೃಷ್ಣನ್‌ ಅವರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. ಜೂನ್‌ 3ರಂದು ಪ್ರಾಸಿಕ್ಯೂಷನ್‌ ಪರವಾಗಿ ಬಾಲಕೃಷ್ಣನ್‌ ಅವರು ವಾದ ಮಂಡಿಸಲಿದ್ದಾರೆ. ಈಗಾಗಲೇ ಎರಡು ಬಾರಿ ವಿಚಾರಣಾಧೀನ ನ್ಯಾಯಾಲಯ ಮತ್ತು ಹೈಕೋರ್ಟ್‌ ಆರೋಪಿಗೆ ಜಾಮೀನು ನಿರಾಕರಿಸಿವೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕುಂಬಳಗೋಡಿನಲ್ಲಿ ಬಾಡಿಗೆ ಮನೆ ಮಾಡಿ ಮೋಹನ್‌, ಗೌರಿ ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ಮಧ್ಯೆ, ಆತ ಕುಂಬಳಗೋಡಿನಲ್ಲಿ ಶಾಸ್ತ್ರವನ್ನೂ ಹೇಳುತ್ತಿದ್ದ ಎನ್ನಲಾಗಿದೆ. ಈತನಿಗೆ ಗೋವಾ ಮೂಲದ ಸಂಘಟನೆಯೊಂದರ ಮೂಲಕ ಮೊದಲ ಆರೋಪಿ ಅಮೋಲ್‌ ಕಾಳೆಯ ಪರಿಚಯವಾಗಿತ್ತು.

Also Read
ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಮಹಾರಾಷ್ಟ್ರದ ಹೃಷಿಕೇಶ್‌ ದೇವ್ಡೀಕರ್‌ ಜಾಮೀನು ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಐದನೇ ಆರೋಪಿಯಾಗಿರುವ ಶಿಕಾರಿಪುರದ ಪ್ರವೀಣ್‌ ಎಂಬಾತನ ಜೊತೆಗೆ ಅಮೋಲ್ ಕಾಳೆಯು ಕುಂಬಳಗೋಡಿನಲ್ಲಿ ಮೋಹನ್‌ ನಾಯಕ್‌ ಮಾಡಿದ್ದ ಮನೆಗೆ ಬರುತ್ತಿದ್ದರು. ಆನಂತರ ಎರಡನೇ ಆರೋಪಿ ಪರಶುರಾಮ್‌ ವಾಗ್ಮೋರೆಯನ್ನೂ ಜೊತೆಗೆ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ಈ ಮೂವರು ಸೇರಿ ಗೌರಿ ಹತ್ಯೆಗೆ ಆರಂಭಿಕ ತಯಾರಿಗಳನ್ನು ಆ ಮನೆಯಲ್ಲಿ ಮಾಡಿದ್ದರು. ಆನಂತರ ಏಳನೇ ಆರೋಪಿಯಾದ ಮಾಗಡಿ ರಸ್ತೆಯಲ್ಲಿರುವ ಸೀಗೇಹಳ್ಳಿಯ ಸುರೇಶ್‌ ಎಂಬಾತನ ಮನೆಗೆ ಸ್ಥಳ ಬದಲಿಸಿದ್ದರು. ಆನಂತರ ಮೋಹನ್‌ ನಾಯಕ್‌ ಮನೆ ಖಾಲಿ ಮಾಡಿ, ಮಂಗಳೂರಿಗೆ ತೆರಳಿದ್ದನು ಎಂದು ಆರೋಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com