ಗೌತಮ್ ಗಂಭೀರ್ ಪ್ರತಿಷ್ಠಾನ ಅಪರಾಧ ಎಸಗಿದೆ ಎಂದ ಔಷಧ ನಿಯಂತ್ರಕ: ಕ್ರಮಕ್ಕೆ ಸೂಚಿಸಿದ ದೆಹಲಿ ಹೈಕೋರ್ಟ್‌

ವಿಚಾರಣೆಯ ವೇಳೆ ನ್ಯಾಯಾಲಯ ʼಕಾಳಸಂತೆಯಲ್ಲಿ ಔಷಧ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತು.
ಗೌತಮ್ ಗಂಭೀರ್ ಪ್ರತಿಷ್ಠಾನ ಅಪರಾಧ ಎಸಗಿದೆ ಎಂದ ಔಷಧ ನಿಯಂತ್ರಕ: ಕ್ರಮಕ್ಕೆ ಸೂಚಿಸಿದ ದೆಹಲಿ ಹೈಕೋರ್ಟ್‌
Gautam gambhirtwitter

ಕೋವಿಡ್‌ ಎರಡನೇ ಅಲೆ ವೇಳೆ ಫ್ಯಾಬಿಫ್ಲೂ ಔಷಧದ ಅಕ್ರಮ ದಾಸ್ತಾನು ಮತ್ತು ವಿತರಣೆ ಮಾಡಿದ ಗೌತಮ್‌ ಗಂಭೀರ್‌ ಪ್ರತಿಷ್ಠಾನವು ಔಷಧ ಮತ್ತು ಕಾಂತಿವರ್ಧಕ ಕಾಯಿದೆಯ ನಿಬಂಧನೆಗಳಡಿ ಅಪರಾಧ ಎಸಗಿದೆ ಎಂದು ದೆಹಲಿಯ ಔಷಧ ನಿಯಂತ್ರಕ ಗುರುವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. (ಡಾ. ದೀಪಕ್‌ ಸಿಂಗ್‌ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ದೆಹಲಿಯ ಔಷಧ ನಿಯಂತ್ರಕ ಸಲ್ಲಿಸಿದ ತನಿಖಾ ವರದಿಯನ್ನು ಅಧ್ಯಯನ ಮಾಡಿದ ನ್ಯಾಯಮೂರ್ತಿ ವಿಪಿನ್ ಸಾಂಘಿ ಅವರು ಪ್ರತಿಷ್ಠಾನ ಮತ್ತು ಅನಧಿಕೃತ ಮಾರಾಟ ಮಾಡಿದ ವಿತರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಅದರಂತೆ ಎಲ್ಲಾ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿಯ ಔಷಧ ನಿಯಂತ್ರಕ ಪರ ವಾದ ಮಂಡಿಸಿದ ಹೆಚ್ಚುವರಿ ಸ್ಥಾಯಿ ವಕೀಲೆ ನಂದಿತಾ ರಾವ್‌ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಇದೇ ವೇಳೆ ನ್ಯಾಯಾಲಯ ಕಾಳಸಂತೆಯಲ್ಲಿ ಔಷಧ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತು.

ವೈಯಕ್ತಿಕ ಬಳಕೆಗಾಗಿ ಔಷಧ, ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದರೆ ಅದು ನಿಬಂಧನೆಗಳ ಉಲ್ಲಂಘನೆಯಾಗದು. ಕೋವಿಡ್‌ ಚಿಕಿತ್ಸೆಗಾಗಿ ನೈಜ ಕಾರಣಕ್ಕೆ ಸಂಗ್ರಹ ಮಾಡಿದ್ದರೆ ಅಂತಹ ಪ್ರಕರಣಗಳನ್ನು ಮುಂದುವರೆಸಬೇಕಿಲ್ಲ. ಔಷಧ ಸರಬರಾಜನ್ನು ತಡೆಯುವ ಅಥವಾ ಸ್ಥಗಿತಗೊಳಿಸುವ ಉಲ್ಲಂಘನೆಕಾರರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಿ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಅಪರಾಧಿಗಳ ವಿರುದ್ಧ ಕೈಗೊಂಡ ಕ್ರಮಗಳನ್ನು ವಿವರಿಸುವ ವಸ್ತುಸ್ಥಿತಿ ವರದಿ ನೀಡುವಂತೆ ಔಷಧ ನಿಯಂತ್ರಕಕ್ಕೆ ನ್ಯಾಯಾಲಯ ಸೂಚಿಸಿದೆ.

ಗಂಭೀರ್‌ ಅವರು ಸಾರ್ವಜನಿಕ ಮನೋಭಾವದಿಂದ ಔಷಧ ಮತ್ತು ಆಮ್ಲಜನಕ ಸಂಗ್ರಹಿಸಿದ್ದಾರೆ. ಅದನ್ನು ಸಂಗ್ರಹಿಸಲು ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದಾರೆ. ಆದರೆ ಯಾವ ಬೆಲೆ ತೆತ್ತು? ನೀವು ದಾನ ಮಾಡಿದ್ದೀರಿ ಎಂಬುದರಲ್ಲಿ ಸಂದೇಹ ಇಲ್ಲ. ಆದರೆ ನೀವು ಕೊರತೆ ಮತ್ತು ಅನಾನುಕೂಲತೆಯನ್ನೂ ಸೃಷ್ಟಿಸಿದ್ದೀರಿ. ಬಹುಶಃ ಇದು ಬೇರೆಯದೇ ಹಾದಿ ಇರಬಹುದು?” ಎಂದು ನ್ಯಾಯಾಲಯ ಹೇಳಿದೆ.

Also Read
ಔಷಧ ದಾಸ್ತಾನು: ಗೌತಮ್ ಗಂಭೀರ್ ಉದ್ದೇಶ ಒಳ್ಳೆಯದಿದ್ದರೂ ಮಾಡಿದ್ದು ಕೆಡುಕು ಎಂದ ದೆಹಲಿ ಹೈಕೋರ್ಟ್

ಕೋವಿಡ್‌ ಔಷಧಗಳ ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ಗಂಭೀರ್‌ ಹಾಗೂ ಎಎಪಿಯ ಇಬ್ಬರು ಶಾಸಕರ ವಿರುದ್ಧ ಎರಡು ಪ್ರತ್ಯೇಕ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿತ್ತು. ಈ ಹಿಂದಿನ ವಿಚಾರಣೆ ವೇಳೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿಯೂ ಆಗಿರುವ ಗಂಭೀರ್‌ ಅವರ ಔಷಧ ಅಕ್ರಮ ದಾಸ್ತಾನು ಮತ್ತು ಹಂಚಿಕೆ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಔಷಧ ನಿಯಂತ್ರಕಕ್ಕೆ ನ್ಯಾಯಾಲಯ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com