ಕೊಡವರಿಗೆ ಪ್ರತ್ಯೇಕ ಸ್ಥಾನಮಾನ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಕೊಡವ ನ್ಯಾಷನಲ್ ಕೌನ್ಸಿಲ್‌ ಅನ್ನು ಅರ್ಜಿಯಲ್ಲಿ ಪಕ್ಷಕಾರರನ್ನಾಗಿಸಿ, ಅರ್ಜಿಯಲ್ಲಿ ತಿದ್ದುಪಡಿ ಮಾಡಿ ಪ್ರತಿವಾದಿಗಳ ಜೊತೆ ಹಂಚಿಕೊಳ್ಳುವಂತೆ ಸುಬ್ರಮಣಿಯನ್‌ ಸ್ವಾಮಿ ಅವರಿಗೆ ನ್ಯಾಯಾಲಯ ನಿರ್ದೇಶಿಸಿತು.
Subramanian Swamy and Karnataka HC
Subramanian Swamy and Karnataka HC

ಕೊಡವರು ಭೌಗೋಳಿಕ, ರಾಜಕೀಯ ಸ್ವಾಯತ್ತತೆ ಹೊಂದಲು ಕೊಡವ ನ್ಯಾಷನಲ್ ಕೌನ್ಸಿಲ್‌ನ ಶಾಸನಬದ್ಧ ಬೇಡಿಕೆ ಈಡೇರಿಸಲು ಹೈಕೋರ್ಟ್‌ ನಿಗಾದಲ್ಲಿ ಮತ್ತು ಸಂವಿಧಾನದ ಅಡಿ ಆಂತರಿಕ ರಾಜಕೀಯ ಸ್ವಯಂ ನಿರ್ಧರಣದ ಹಕ್ಕಿಗಾಗಿ ಆಯೋಗ ರಚಿಸಲು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕೊಡವ ರಾಷ್ಟ್ರೀಯ ಸಮಿತಿ (ಸಿಎನ್‌ಸಿ) ಕೋರಿಕೆಯಂತೆ ನಿರ್ದಿಷ್ಟ ಕಾಲಮಿತಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಬಿಜೆಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೇಂದ್ರ ಕಾನೂನು ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ಜೂನ್ 14ಕ್ಕೆ ನ್ಯಾಯಾಲಯ ಮುಂದೂಡಿತು.

ಇದಕ್ಕೂ ಮುನ್ನ, ಸುಬ್ರಹ್ಮಣಿಯಂ ಸ್ವಾಮಿ ಅವರು ಕೊಡವ ರಾಷ್ಟ್ರೀಯ ಸಮಿತಿ (ಸಿಎನ್‌ಸಿ) ಕೊಡವರಿಗೆ ಪ್ರತ್ಯೇಕ ಸ್ಥಾನ ಮಾನ ನೀಡುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಿದೆ, ಆದರೆ, ಸರ್ಕಾರ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಸಂಬಂಧ ನಿರ್ದೇಶನ ನೀಡಬೇಕು ಎಂದು ಕೋರಿದರು.

Also Read
ಕೊಡವ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ: ಬುಡಕಟ್ಟು ಅಧ್ಯಯನ ನಡೆಸಿಲ್ಲ ಎಂದಾದರೆ ಮರು ಸಮೀಕ್ಷೆ ಮಾಡಬೇಕು – ಹೈಕೋರ್ಟ್‌

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಕೊಡವ ರಾಷ್ಟ್ರೀಯ ಸಮಿತಿಯನ್ನು ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಲಾಗಿದೆಯೇ? ಅವರು ಪ್ರತ್ಯೇಕ ಸ್ಥಾನಮಾನಕ್ಕಾಗಿ ಮನವಿ ಮಾಡಿದ್ದಾರೆ. ಆ ಸಂಸ್ಥೆಗೆ ಕೊಡವ ಜನಾಂಗದ ಸಂಪ್ರದಾಯ, ಪದ್ದತಿಗಳು ತಿಳಿದಿವೆ. ಅವರನ್ನು ಪಕ್ಷಕಾರರನ್ನಾಗಿ ಮಾಡಿ ಎಂದು ಸಲಹೆ ನೀಡಿತು. ಇದಕ್ಕೆ ಒಪ್ಪಿಗೆ ನೀಡಿದ ಅರ್ಜಿದಾರರು ಅರ್ಜಿಯನ್ನು ತಿದ್ದುಪಡಿ ಮಾಡುವುದಾಗಿ ತಿಳಿಸಿದರು.

ಈ ಅಂಶ ದಾಖಲಿಸಿಕೊಂಡ ಪೀಠವು ಮಂಗಳವಾರದ ಒಳಗಾಗಿ ಅರ್ಜಿ ತಿದ್ದುಪಡಿ ಮಾಡಬೇಕು ಎಂದು ಅರ್ಜಿದಾರರಿಗೆ ನಿರ್ದೇಶಿಸಿತು. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com