ಕೊಡವ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ: ಬುಡಕಟ್ಟು ಅಧ್ಯಯನ ನಡೆಸಿಲ್ಲ ಎಂದಾದರೆ ಮರು ಸಮೀಕ್ಷೆ ಮಾಡಬೇಕು – ಹೈಕೋರ್ಟ್‌

ರಾಜ್ಯ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಕೊಡವ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕಾನೂನುಬಾಹಿರವಾಗಿ ಪ್ರಶ್ನಾವಳಿ ರೂಪಿಸಿ ಅದರ ಅನ್ವಯ ವರದಿ ಸಿದ್ಧಪಡಿಸಿರುವುದರಿಂದ ವರದಿ ವಜಾಗೊಳಿಸಬೇಕು ಎಂದು ಕೋರಲಾಗಿತ್ತು.
Codava community and Karnataka HC
Codava community and Karnataka HC
Published on

ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿಸುವ ಸಂಬಂಧ ನಡೆಸಲಾಗಿರುವ ಬುಡಕಟ್ಟು ಅಧ್ಯಯನವು ರಾಜ್ಯ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದ್ದು ವರದಿಯನ್ನು ತಿರಸ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಒಪ್ಪದ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅರ್ಜಿ ವಿಲೇವಾರಿ ಮಾಡಿತು.

ಕೊಡವ ರಾಷ್ಟ್ರೀಯ ಒಕ್ಕೂಟ ಮತ್ತು ಎನ್‌ ಯು ನಾಚಪ್ಪ ಕೊಡವ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕೊಡವರಿಗೆ ಎಸ್‌.ಟಿ ಮೀಸಲಾತಿ ಕಲ್ಪಿಸುವ ಸಂಬಂಧ ಬುಡಕಟ್ಟು ಅಧ್ಯಯನ ವರದಿಯನ್ನು ಸಲ್ಲಿಸುವಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇದು ಶಿಫಾರಸ್ಸು ವರದಿಯಾಗಿದೆ. ಬುಡಕಟ್ಟು ಅಧ್ಯಯನಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆಯನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಐದು ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಬುಡಕಟ್ಟು ಅಧ್ಯಯನ ನಡೆಸಿಲ್ಲ ಎಂದಾದರೆ ಮರು ಸಮೀಕ್ಷೆ ನಡೆಸಲು ಸರ್ಕಾರ ಆದೇಶ ಮಾಡಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧದ ಕೋರಿಕೆ ಆಧರಿಸಿ ರಾಜ್ಯ ಸರ್ಕಾರವು ಬುಡಕಟ್ಟು ಅಧ್ಯಯನ ನಡೆಸುವಂತೆ ಮೈಸೂರಿನಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಅದರ ನಿರ್ದೇಶಕ ಟಿ ಟಿ ಬಸವನಗೌಡ ಅವರಿಗೆ 2016ರಲ್ಲಿ ಸೂಚಿಸಿತ್ತು.

“ಕೊಡವರ ಉಡುಗೆ-ತೊಡುಗೆ, ಆಹಾರ ಸಂಸ್ಕೃತಿ, ಆಚಾರ-ವಿಚಾರಗಳು ಸೇರಿದಂತೆ ಐದು ಮಾನದಂಡಗಳನ್ನು ಒಳಗೊಂಡು ಕೊಡವ ಬುಡಕಟ್ಟು ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ತನ್ನ ಆದೇಶದಲ್ಲಿ ರಾಜ್ಯ ಬುಡಕಟ್ಟು ಅಧ್ಯಯನ ಸಂಸ್ಥೆ ಮತ್ತು ಅದರ ನಿರ್ದೇಶಕರಿಗೆ ಸೂಚಿಸಿತ್ತು. ಆಕ್ಷೇಪಾರ್ಹವಾದ ಬುಡಕಟ್ಟು ಅಧ್ಯಯನ ಸಂಸ್ಥೆಯ ಪ್ರಶ್ನಾವಳಿಯು ಸರ್ಕಾರಿ ಆದೇಶದ ವ್ಯಾಪ್ತಿ ಮೀರಿದೆ. ಐದು ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸುವಂತೆ ಹೇಳಿರುವುದಕ್ಕೆ ಬದಲಾಗಿ ಕೊಡವ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕಾನೂನುಬಾಹಿರವಾಗಿ ಪ್ರಶ್ನಾವಳಿ ರೂಪಿಸಿ ಅದರ ಅನ್ವಯ ವರದಿ ಸಿದ್ಧಪಡಿಸಿರುವುದರಿಂದ ವರದಿ ವಜಾಗೊಳಿಸಬೇಕು” ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಮನವಿ ಮಾಡಿದ್ದರು.

ಪರಿಶಿಷ್ಟ ಪಂಗಡದ ಪಟ್ಟಿಗೆ ಸಮುದಾಯವೊಂದನ್ನು ಸೇರಿಸುವ ಸಂಬಂಧ ಅನುಸರಿಸಬೇಕಾದ ಮಾನದಂಡಗಳ ಕುರಿತು ಲೋಕೂರ್‌ ಸಮಿತಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ವಿಚಾರಗಳನ್ನು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಅದರ ನಿರ್ದೇಶಕರು ರೂಪಿಸಿರುವ ಪ್ರಶ್ನಾವಳಿಯು ವ್ಯಾಪ್ತಿ ಮೀರಿ ಕೊಡವ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯತ್ತ ಚಿತ್ತ ನೆಟ್ಟಿದೆ. ಹೀಗಾಗಿ, ಇದು ಕಾನೂನುಬಾಹಿರವಾಗಿದ್ದು, ಬದಿಗೆ ಸರಿಸಲು ಅರ್ಹವಾಗಿದೆ ಎಂದು ಹೇಳಲಾಗಿತ್ತು.

Also Read
ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳಿದ ಕರ್ನಾಟಕ ಹೈಕೋರ್ಟ್

ಕೊಡಗಿನಲ್ಲಿ ಕುರುಬ ಮತ್ತು ನಾಯಕ ಸಮುದಾಯಕ್ಕೆ ಎಸ್‌.ಟಿ ಮೀಸಲಾತಿ ಕಲ್ಪಿಸುವ ಸಂಬಂಧ ರೂಪಿಸಲಾಗಿದ್ದ ಪ್ರಶ್ನಾವಳಿಗೂ ಕೊಡವ ಸಮುದಾಯಕ್ಕೆ ಎಸ್‌.ಟಿ ಮೀಸಲಾತಿ ಕಲ್ಪಿಸುವ ಸಂಬಂಧ ರೂಪಿಸಲಾಗಿರುವ ಪ್ರಶ್ನಾವಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಅದರ ನಿರ್ದೇಶಕರ ಸ್ವೇಚ್ಛಾಚಾರ ಬಹಿರಂಗವಾಗಿದ್ದು, ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿರುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕೋರಲಾಗಿದೆ.

ಕೊಡವ ಸಮುದಾಯದ ಬುಡಕಟ್ಟು ಅಧ್ಯಯನ ವಿಚಾರದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಪೂರ್ವಗ್ರಹಪೀಡಿತವಾಗಿದ್ದಾರೆ. ನಿರ್ದೇಶಕರು ವ್ಯವಸ್ಥಿತವಾಗಿ ಸಮೀಕ್ಷೆಯ ಹಾದಿ ತಪ್ಪಿಸಿ ಕೊಡವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಎಸ್‌.ಟಿ ಮೀಸಲಾತಿಯನ್ನು ತಪ್ಪಿಸುತ್ತಿದ್ದಾರೆ. ಹೀಗಾಗಿ, ಆಕ್ಷೇಪಾರ್ಹವಾದ ಸಮೀಕ್ಷೆ ಮತ್ತು ವರದಿಯು ದುರುದ್ದೇಶದಿಂದ ಕೂಡಿದೆ. ಎಲ್ಲಾ ಕೋನದಿಂದ ನೋಡಿದಾಗಲೂ ಆಕ್ಷೇಪಾರ್ಹವಾದ ನಡೆಯು ಸ್ವೇಚ್ಛೆಯಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ. ಅಲ್ಲದೇ ವ್ಯಾಪ್ತಿಯನ್ನು ಮೀರುವುದರಿಂದ ಇದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿತ್ತು.

Kannada Bar & Bench
kannada.barandbench.com