ಘಗ್ಗರ್ ನದಿ ಪ್ರವಾಹ: ತನ್ನ ಆದೇಶ ಗೌರವಿಸದ ಪಂಜಾಬ್, ಹರ್ಯಾಣ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಶಿಫಾರಸುಗಳನ್ನು ಜಾರಿಗೆ ತಂದು ಅಫಿಡವಿಟ್ ಸಲ್ಲಿಸಲು ಎರಡೂ ಸರ್ಕಾರಗಳು ವಿಫಲವಾಗಿವೆ ಎಂದಿರುವ ಪೀಠ ಎರಡೂ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಮನ್ಸ್‌ ನೀಡಿದೆ.
Supreme Court with Punjab and Haryana Map
Supreme Court with Punjab and Haryana Map

ಪ್ರತಿವರ್ಷ ಸುಮಾರು 25 ಹಳ್ಳಿಗಳ ಜಮೀನು ಹಾಳುಗೆಡವುವ ಘಗ್ಗರ್‌ ನದಿ ಪ್ರವಾಹದ ಸಮಸ್ಯೆ ಸರಿಪಡಿಸಲು ವಿಫಲವಾದ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. [ಮೂನಾಕ್ ನಗರ ಪಂಚಾಯತ್ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

ಸಮಸ್ಯೆ ಪರಿಹರಿಸಲು ಪುಣೆಯ ತಜ್ಞ ಸಂಸ್ಥೆಯೊಂದು ನೀಡಿದ್ದ ವರದಿ ಜಾರಿಗೆ ತರಲು ವಿಫಲವಾದ ಎರಡೂ ರಾಜ್ಯಗಳ ಬಗ್ಗೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿದೆ.

"ಶಿಫಾರಸು ಜಾರಿಯ ಪ್ರಗತಿ ಕುರಿತು ಚರ್ಚಿಸಲು ಸಂಬಂಧಪಟ್ಟ ಭಾಗೀದಾರರು ಪ್ರತಿ ನಾಲ್ಕು ವಾರಗಳಿಗೊಮ್ಮೆ ಸಭೆ ಸೇರಬೇಕೆಂದು 2018ರಲ್ಲಿ ತಾನು ಆದೇಶ ನೀಡಿದ್ದರೂ ರಾಜ್ಯ ಸರ್ಕಾರಗಳು ಅದಕ್ಕೆ ಸ್ಪಂದಿಸದೇ ಇರುವುದು ಅತ್ಯಂತ ದುರದೃಷ್ಟಕರ” ಎಂದು ನವೆಂಬರ್ 9ರಂದು ನೀಡಿದ ಆದೇಶದಲ್ಲಿ ಪೀಠ ತಿಳಿಸಿದೆ.

Also Read
ಎಫ್ಐಆರ್ ರದ್ದತಿ ವೇಳೆ 45 ದಿನ ಯಮುನಾ ನದಿ ಸ್ವಚ್ಛಗೊಳಿಸುವ ಷರತ್ತು ವಿಧಿಸಿದ ದೆಹಲಿ ಹೈಕೋರ್ಟ್

ಹೀಗಾಗಿ ಶಿಫಾರಸುಗಳ ಜಾರಿ ಇರಲಿ, ಒಂದು ಅಫಿಡವಿಟ್‌ ಸಲ್ಲಿಸಲು ಕೂಡ ವಿಫಲವಾಗಿರುವ ಎರಡೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ನ. 15ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸಮನ್ಸ್‌ ನೀಡಿತು.

“ಹರ್ಯಾಣ ಸರ್ಕಾರ ವರದಿಯೊಂದನ್ನು ಸಲ್ಲಿಸಿದ್ದರೂ ಅದು ತೃಪ್ತಿಕರವಾಗಿಲ್ಲ. ಪಂಜಾಬ್‌ ಸರ್ಕಾರ ವರದಿ ಸಲ್ಲಿಸುವ ಗೊಡವೆಗೇ ಹೋಗಿಲ್ಲ. ಇದು ಘಗ್ಗರ್‌ ಪ್ರವಾಸ ಸಮಸ್ಯೆ ನಿಭಾಯಿಸುವ ಬಗ್ಗೆ ಸರ್ಕಾರಗಳು ಗಂಭೀರವಾಗಿರುವ ರೀತಿ. ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಸಂಬಂಧಿಸಿದಂತೆ ಇದುವರೆಗೆ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಯಾವುದೇ ಗೌರವ ದೊರೆತಿಲ್ಲ” ಎಂದು ಅದು ಕಿಡಿಕಾರಿದೆ.

Kannada Bar & Bench
kannada.barandbench.com