“ಕಾನೂನು ವೃತ್ತಿ ಅತ್ಯಂತ ಗೌರವಾನ್ವಿತವಾದುದು ಮತ್ತು ನನ್ನ ರಾಜಕಾರಣಕ್ಕೆ ವೃತ್ತಿಯ ಕೊಡುಗೆ ಅಪಾರವಾಗಿದೆ. ರಾಜಕೀಯ ಕ್ಷೇತ್ರದಲ್ಲಿನ ಇಂದಿನ ಬೆಳವಣಿಗೆಗಳನ್ನು ನೋಡುವಾಗ ಇತ್ತ ಬರಬಾರದಿತ್ತು. ವಕೀಲಿಕೆಯಲ್ಲಿಯೇ ಮುಂದುವರೆಯಬೇಕಿತ್ತು ಎಂದೆನಿಸಿದೆ” ಎಂಬುದು ಎರಡು ದಶಕಗಳಿಗೂ ಹೆಚ್ಚು ಕಾಲ ವಕೀಲಿಕೆ ಮಾಡಿರುವ ವಿರಾಜಪೇಟೆಯ ಶಾಸಕ, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಅವರ ಸ್ಪಷ್ಟ ನುಡಿಗಳು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಗಾಢ ಪ್ರಭಾವದಲ್ಲಿ ಬೆಳೆದು ಬಂದಿರುವ ಬೋಪಯ್ಯ ಅವರು ಸಂಘದ ಸೂಚನೆಗಳನ್ನು ಮರುಮಾತಿಲ್ಲದೇ ಒಪ್ಪಿ ನಡೆಯುವವರು. ಸಂಘದ ಸೂಚನೆಯ ಮೇರೆಗೆ ಕಾನೂನು ಶಿಕ್ಷಣವನ್ನು ಮೊಟಕುಗೊಳಿಸಿ ತುರ್ತು ಪರಿಸ್ಥಿತಿ ಹೋರಾಟಕ್ಕೆ ಇಳಿದು, ಬಂಧನಕ್ಕೆ ಒಳಗಾಗಿದ್ದರು ಎಂಬುದು ಗಮನಾರ್ಹ.
ರಾಜಕೀಯ ಏಳು-ಬೀಳುಗಳನ್ನು ಕಂಡಿರುವ ಬೋಪಯ್ಯ ಅವರು 2008ರಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗ ಸ್ಪೀಕರ್ ಹುದ್ದೆ ಅಲಂಕರಿಸಿದ್ದರು. ಭಿನ್ನಮತೀಯ ಶಾಸಕರ ಅನರ್ಹತೆ ವಿಚಾರದಲ್ಲಿ ಬೋಪಯ್ಯನವರು ಕೈಗೊಂಡ ನೀತಿ-ನಿರ್ಧಾರಗಳು ವಿವಾದ ಸೃಷ್ಟಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆಗೆ ಒಳಗಾಗಿದ್ದುಂಟು.
ಬೋಪಯ್ಯ ಅವರು “ಬಾರ್ ಅಂಡ್ ಬೆಂಚ್”ಗೆ ನೀಡಿರುವ ಸಂದರ್ಶನದಲ್ಲಿ ತಾವು ಕಾನೂನು ಓದುತ್ತಿದ್ದ ದಿನಗಳಿಂದ ಹಿಡಿದು ಸ್ಪೀಕರ್ ಆಗಿ ಶಾಸನಸಭೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿದವರೆಗಿನ ಹತ್ತು ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?
ಮಡಿಕೇರಿಗೆ ಸುಮಾರು ಹದಿನಾರು ಕಿಲೋಮೀಟರ್ ದೂರದಲ್ಲಿರುವ ಕಾಲೂರು ನಮ್ಮೂರು. ನಮ್ಮದು ತೀರ ಹಿಂದುಳಿದ ಗ್ರಾಮವಾಗಿತ್ತು. ಕಾನೂನು ವೃತ್ತಿ ಅತ್ಯಂತ ಗೌರವಯುತವಾದುದು. ಅಸಹಾಯಕರಿಗೆ ನೆರವಾಗುವ ಮೂಲಕ ಒಂದಷ್ಟು ಸಮಾಜ ಸೇವೆ ಮಾಡಬಹುದು ಎಂದು ಕಾನೂನು ಶಿಕ್ಷಣದತ್ತ ಮುಖಮಾಡಿದೆ. 1977 ರಿಂದ 1980ರ ವರೆಗೆ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದೆ. ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಮಂದಿಗೆ ಉಚಿತವಾಗಿ ವಕಾಲತ್ತು ಮಾಡಿದ್ದೇನೆ. ನನ್ನ ಪೋಷಕರಿಗೆ ನನ್ನನ್ನು ಡಾಕ್ಟರ್ ಅಥವಾ ಎಂಜಿಯರ್ ಮಾಡುವ ಉದ್ದೇಶವಿತ್ತು.
ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?
ನಾನು ಬಿಎಸ್‌ಸಿ ಪದವಿ ಮುಗಿಸಿ, ಬಿಎಂಎಸ್ ಕಾನೂನು ಪದವಿಗೆ ಸೇರಿಕೊಂಡಿದ್ದೆ. ಅಷ್ಟೊತ್ತಿಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್) ಬಂದಿದ್ದರಿಂದ ಅವರ ಕರೆಯ ಮೇರೆಗೆ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ ಇಳಿದಿದ್ದೆ. ಎರಡು ತಿಂಗಳು ಜೈಲಿನಲ್ಲಿದ್ದೆ. ನಾವು ಇಪ್ಪತ್ತೈದು ವರ್ಷಗಳ ಕೆಳಗಿನವರಾಗಿದ್ದರಿಂದ ಮೈಸೂರಿನ ಡಿಎಆರ್‌ನಲ್ಲಿ (ಜಿಲ್ಲಾ ಸಶಸ್ತ್ರ ಮೀಸಲು) ನಮ್ಮನ್ನು ಇಟ್ಟಿದ್ದರು. ನಮ್ಮ ಜೊತೆ ಎಚ್ ಗಂಗಾಧರನ್ ಸೇರಿದಂತೆ ಆರ್‌ಎಸ್‌ಎಸ್‌ನ ಪ್ರಮುಖರು ಇದ್ದರು. ಇದು ನನ್ನ ಮೇಲೆ ಪ್ರಭಾವ ಬೀರಿದ ಮಹತ್ವದ ಘಟನೆ.
ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್ ಮಾಡಿದ್ದೀರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?
ಕಾನೂನು ಪದವಿ ಪಡೆದ ನಂತರ ಬೆಂಗಳೂರಿನ ಬಸವನಗುಡಿಯಲ್ಲಿ ಎಚ್ ಎಸ್ ರಾಮಚಂದ್ರ ಎಂಬ ಹಿರಿಯ ವಕೀಲರ ಬಳಿ ಒಂದೂವರೆ ವರ್ಷ ಪ್ರಾಕ್ಟೀಸ್ ಮಾಡಿದೆ. ೧೯೮೧ರಲ್ಲಿ ಮರಳಿ ಮಡಿಕೇರಿಗೆ ಬಂದು ನನ್ನ ಪ್ರೌಢಶಾಲೆಯ ಪ್ರಾಧ್ಯಾಪಕರಾಗಿದ್ದ ವಕೀಲ ಶಿವಕುಮಾರ್ ಎಂಬವರ ಬಳಿ ಸೇರಿಕೊಂಡೆ. ನಮ್ಮ ಕುಟುಂಬದ ಹಿನ್ನೆಲೆ ಚೆನ್ನಾಗಿತ್ತು. ಆದ್ದರಿಂದ ವಕೀಲಿಕೆಯ ದುಡಿಮೆಯ ಬಗ್ಗೆ ಅಷ್ಟೇನೂ ಚಿಂತಿತನಾಗಿರಲಿಲ್ಲ.
ನೀವು ವಾದ ಮಂಡಿಸಿದ ಮೊದಲ ಕೇಸ್ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?
ಎರಡು ದಶಕಗಳಿಗೂ ಹೆಚ್ಚು ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ವೃತ್ತಿಯ ಆರಂಭದ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರು ಪೊಲೀಸರನ್ನು ನಿಂದಿಸಿ ಬಂದಿದ್ದರು. ಆ ಪ್ರಕರಣ ನಡೆಸಿದ್ದೆ. ಆನಂತರ ಅಸಂಖ್ಯ ಕ್ರಿಮಿನಲ್ ಪ್ರಕರಣಗಳನ್ನು ನಡೆಸಿದ್ದೇನೆ. ನಮ್ಮ ಸೀನಿಯರ್‌ಗಳು ಸಿವಿಲ್ ಪ್ರಕರಣಗಳನ್ನು ನಡೆಸುತ್ತಿದ್ದರು.
ವಕೀಲ ವೃತ್ತಿಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?
ಹಿಂದೆ ಹೇಳಿದಂತೆ ಜನತೆಗೆ ಒಂದಷ್ಟು ಒಳಿತು ಮಾಡುವ ಉದ್ದೇಶವಿತ್ತು ಅಷ್ಟೆ. ವಿದ್ಯಾರ್ಥಿ ಜೀವನದಿಂದಲೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೊತೆಗೆ ಗುರುತಿಸಿಕೊಂಡಿದ್ದರಿಂದ ನನ್ನ ಗುರುತಿಸಿ ಕಾಲಕಾಲಕ್ಕೆ ಸಂಘವು ಜವಾಬ್ದಾರಿಗಳನ್ನು ನೀಡಿದೆ. ಶಾಸಕನಾಗುತ್ತೇನೆ, ಮತ್ತೊಂದು ಆಗುತ್ತೇನೆ ಎಂಬುದನ್ನು ನಾನು ಎಣಿಸಿರಲಿಲ್ಲ. ಸಂಘದ ಸೂಚನೆಯಂತೆ ನಡೆದುಕೊಂಡು ಬಂದಿದ್ದೇನೆ ಅಷ್ಟೆ.
ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?
ನಾನು ರಾಜಕಾರಣಕ್ಕೆ ಬರುವಲ್ಲಿ ಕಾನೂನು ಕ್ಷೇತ್ರದ ಪ್ರಭಾವ ಅಪಾರವಾಗಿದೆ. ನಾನೆಂದೂ ಯಾರಿಗೂ ವಕೀಲಿಕೆಯ ಶುಲ್ಕ ಕೇಳುತ್ತಿರಲಿಲ್ಲ. ಅವರು ಕೊಟ್ಟಷ್ಟು ಪಡೆದುಕೊಳ್ಳುತ್ತಿದ್ದೆ. ನಮ್ಮ ಸುತ್ತಲಿನ ವಾತಾವರಣವೇ ಹಾಗಿತ್ತು. ಕೆಲವೊಮ್ಮೆ ಕಕ್ಷಿದಾರರಿಗೆ ಬಸ್ ಚಾರ್ಚ್ ಕೊಟ್ಟು ಕಳುಹಿಸಿದ ಉದಾಹರಣೆಗಳೂ ಇವೆ. ಇನ್ನು ವಿಧಾನಸಭೆ ಇರುವುದೇ ಶಾಸನ ರೂಪಿಸಲು. ಇಲ್ಲಿ ಕಾನೂನು ಶಿಕ್ಷಣದ ಹಿನ್ನೆಲೆ ಇದ್ದವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ವಿರೋಧ ಪಕ್ಷದಲ್ಲಿ ಇದ್ದರಂತೂ ಮಸೂದೆಯ ಸರಿ-ತಪ್ಪುಗಳ ಬಗ್ಗೆ ಮಾತನಾಡಲು ಸಾಕಷ್ಟು ಅವಕಾಶವಿರುತ್ತದೆ. ಆಡಳಿತ ಪಕ್ಷದಲ್ಲಿದ್ದರೆ ಮಸೂದೆಯ ಬಗ್ಗೆ ವಿರೋಧ ಮಾಡಲು ಅವಕಾಶವಿರುವುದಿಲ್ಲ. ಆದರೆ ಸಲಹೆಗಳನ್ನು ನೀಡಬಹುದಷ್ಟೆ.
ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆ ನೀಡುವುದನ್ನು ಈಗಲೂ ಮುಂದುವರೆಸಿದ್ದೀರಾ?
ಇಂದಿಗೂ ಕಾನೂನು ಸಲಹೆ-ಸೂಚನೆಗಳನ್ನು ನೀಡುತ್ತೇನೆ. ನಮ್ಮ ಕಚೇರಿ ಇದ್ದು, ಅದನ್ನು ನಮ್ಮ ಜೂನಿಯರ್‌ಗಳು ನಡೆಸುತ್ತಿದ್ದಾರೆ. ಯಾವುದಾದರೂ ಪ್ರಕರಣಗಳಿದ್ದರೆ ಅವರ ಬಳಿ ಕಳುಹಿಸುತ್ತೇನೆ. ೧೯೯೯ರಲ್ಲಿ ಚುನಾವಣೆಗೆ ನಿಂತು ಸೋತೆ. ಇದಕ್ಕೂ ಮುನ್ನ ವಿಧಾನ ಪರಿಷತ್ ಚುನಾವಣಾಗೆ ನಿಂತು ಸೋತಿದ್ದೆ. ೨೦೦೪ರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಎಲ್ಲರಿಗೂ ಇತ್ತು.
ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರೆಯಬೇಕಿತ್ತು ಎಂದೆನಿಸಿದೆಯೇ?
ಇಂದಿನ ರಾಜಕಾರಣದ ಸ್ಥಿತಿ ನೋಡಿದರೆ ಖಂಡಿತವಾಗಿಯೂ ನಾನು ವಕೀಲನಾಗಿಯೇ ಮುಂದುವರೆಯಬೇಕಿತ್ತು ಎಂದೆನಿಸಿದೆ. ವಕೀಲಿಕೆ ಗೌರವಾನ್ವಿತ ವೃತ್ತಿ. ಆರಂಭದಲ್ಲಿ ನ್ಯಾಯಾಧೀಶನಾಗುವ ಇರಾದೆ ಇತ್ತು. ಆದರೆ, ಅವಕಾಶ ಒದಗಿಬರಲಿಲ್ಲವಷ್ಟೆ.