

ಮೈಸೂರು ರಸ್ತೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಕಾರು ಓಡಿಸಿದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ವ್ಯಕ್ತಿಯು ಸಮುದಾಯ ಸೇವೆ ಮಾಡುವುದಾಗಿ ಹೇಳಿರುವುದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ “ಹಸಿರು ಲ್ಯಾಂಬೊರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಮತ್ತೆ ಲ್ಯಾಂಬೊರ್ಗಿನಿಯಲ್ಲಿ ಬನ್ನಿ” ಎಂದು ಗುರುವಾರ ಮೌಖಿಕವಾಗಿ ಹೇಳಿದೆ.
ಅಂತಿಮವಾಗಿ “ಯಾವ ರೀತಿಯ ಸಮುದಾಯ ಸೇವೆಯನ್ನು ಬೆಂಗಳೂರಿನ ಸಿ ವಿ ರಾಮನ್ ನಗರದ ಬಿ ಆರ್ ಚಿರಂತ್ ಮಾಡಬೇಕು” ಎಂಬುದನ್ನು ಆದೇಶದಲ್ಲಿ ವಿವರಿಸುವುದಾಗಿ ಹೇಳಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ಇತ್ಯರ್ಥಪಡಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಚಿರಂತ್‌ಗೆ ಪಶ್ಚಾತಾಪವಾಗಿದೆ. ಬಿಎನ್‌ಎಸ್‌ಎಸ್‌ನಲ್ಲಿ 10 ರೀತಿಯ ಸಮುದಾಯ ಸೇವೆಗಳಿವೆ. ಲ್ಯಾಂಬೊರ್ಗಿನಿಯಲ್ಲಿ ಹೋಗಿ, ರಸ್ತೆ ಕಸ ಗುಡಿಸಿ, ಮತ್ತೆ ಲ್ಯಾಂಬೊರ್ಗಿನಿಯಲ್ಲಿ ಬನ್ನಿ. ಸಂಚಾರ ನಿಯಮ ಉಲ್ಲಂಘಿಸಿರುವುದರಿಂದ ಸಂಚಾರ ನಿಯಮದ ಪಾಠ ಮಾಡುತ್ತೀರಾ? ನಿಮಯ ಉಲ್ಲಂಘಿಸಿ, ಕಲಿಯುವುದು ಹೇಗೆ ಎಂದು ಮಕ್ಕಳು ಕಲಿಯುತ್ತಾರೆ. ಯಾವ ಸೇವೆ ಮಾಡಬೇಕು ಎಂದು ಬರೆಯುತ್ತೇನೆ, ಅದನ್ನು ಮಾಡಬೇಕು” ಎಂದಿತು.
ಅರ್ಜಿದಾರರ ಪರ ವಕೀಲ ರಜತ್ ಅವರು “ಚಿರಂತ್ ಅವರನ್ನು ಅಫೆಂಡರ್ ಎಂದು ತೋರಿಸಲಾಗಿದೆ. ಚಿರಂತನ್ ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೂ, ಅವರು ಸಮುದಾಯ ಸೇವೆ ಮಾಡುವ ಇಚ್ಛೆ ಹೊಂದಿದ್ದಾರೆ. ಸಂಚಾರ ನಿಯಮಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ. ಸಂಚಾರ ನಿಯಮ ಉಲ್ಲಂಘಿಸದಂತೆ ಮಕ್ಕಳಿಗೆ ತಿಳಿಸುತ್ತಾರೆ. ಬೇರೊಂದು ಪ್ರಕರಣದಲ್ಲಿ ವೈದ್ಯರೊಬ್ಬರಿಗೆ ಸರ್ಕಾರಿ ಶಾಲೆಯಲ್ಲಿ ಪ್ರತಿ ಭಾನುವಾರ ಆರು ತಿಂಗಳ ಕಾಲ ಸಮುದಾಯ ಸೇವೆ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇಡೀ ದೇಶದಲ್ಲೇ ಇದು ಮೊದಲ ಪ್ರಕರಣವಾಗಲಿದೆ. ವಿನಾಯಿತಿ ತೋರಬೇಕು” ಎಂದರು.
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಲ್ಯಾಂಬೊರ್ಗಿನಿ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ವ್ಯಕ್ತಿ ಶಾಲೆಯಲ್ಲಿ ಸಂಚಾರ ನಿಯಮದ ಪಾಠ ಮಾಡುವುದೇ? ಗಿಡಗಳನ್ನು ನೆಡುವುದು ಸೂಕ್ತ” ಎಂದರು. ಎಲ್ಲರ ವಾದ ಆಲಿಸಿದ ಪೀಠವು ಅರ್ಜಿ ಇತ್ಯರ್ಥಪಡಿಸಿದ್ದು, ವಿಸ್ತೃತ ಆದೇಶ ಮಾಡುವುದಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಮನುಷ್ಯನ ಪ್ರಾಣಕ್ಕೆ ಹಾನಿಯಾಗುವಂಥ ಸೈಲೆನ್ಸರ್ ಅಳವಡಿಸಿಕೊಂಡಿರುವ ಲ್ಯಾಂಬೊರ್ಗಿನಿ ಕಾರನ್ನು ಮೈಸೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿರುವ ವಿಡಿಯೊವನ್ನು ಸನಾತನ ಎಂಬ ಎಕ್ಸ್ ಖಾತೆಯಲ್ಲಿ ವೀಕ್ಷಿಸಿರುವುದಾಗಿ ಕರ್ತವ್ಯನಿರತ ಪಿಎಸ್‌ಐ ಆರ್ ರಾಮಸ್ವಾಮಿ ದೂರು ನೀಡಿದ್ದರು. ಇದರ ಅನ್ವಯ ಬೆಂಗಳೂರಿನ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಜನವರಿ 20ರಂದು -281 ಮತ್ತು ಭಾರತೀಯ ಮೋಟಾರು ವಾಹನಗಳ ಕಾಯಿದೆ 120 ಮತ್ತು177ರ ಅಡಿ ಚಿರಂತನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.