ಗೋವಾದ ರೆಸ್ಟರಂಟ್, ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ನಡೆಸಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಥವಾ ಅವರ ಪುತ್ರಿ ಜೊಯಿಶ್ ಇರಾನಿ ಪರವಾನಗಿ ಪಡೆದಿದ್ದಾರೆ ಎನ್ನುವುದಕ್ಕಾಗಲಿ ಅಥವಾ ಅದಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂಬುದಕ್ಕಾಗಲಿ ಯಾವುದೇ ದಾಖಲೆಗಳಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಕೇಂದ್ರ ಸಚಿವೆ ಇರಾನಿ ಮತ್ತವರ ಮಗಳು ಅಕ್ರಮವಾಗಿ ಗೋವಾದಲ್ಲಿ ಬಾರ್ ಮಾಲೀಕತ್ವ ಹೊಂದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದುದು ವಿವಾದದ ಕೇಂದ್ರ ಬಿಂದುವಾಗಿತ್ತು. ಸಿಲ್ಲಿ ಸೋಲ್ಸ್ ರೆಸ್ಟರಂಟ್ ಮತ್ತು ಬಾರ್‌ನ ಮಾಲೀಕರು ಇರಾನಿ ಮತ್ತವರ ಮಗಳು ಅಲ್ಲ ಎಂಬುದು ದೃಢಪಟ್ಟಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಅಸ್ತಿತ್ವದಲ್ಲಿರುವ ರೆಸ್ಟರಂಟ್ ಅಥವಾ ಅದು ಇರುವ ಭೂಮಿ ಫಿರ್ಯಾದುದಾರರ (ಸಚಿವೆ ಇರಾನಿ) ಅಥವಾ ಅವರ ಮಗಳ ಒಡೆತನದಲ್ಲಿಲ್ಲ. ಗೋವಾ ಸರ್ಕಾರ ನೀಡಿದ ಶೋಕಾಸ್ ನೋಟಿಸ್ ಕೂಡ ಫಿರ್ಯಾದಿ ಅಥವಾ ಅವರ ಮಗಳ ಹೆಸರಿನಲ್ಲಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ವಾಹಿನಿಗಳು ವೀಕ್ಷಕರನ್ನು ಸೆಳೆಯಲೆಂದು ವಾಸ್ತವಾಂಶಗಳನ್ನು ಪರಿಶೀಲಿಸದೆ ಸಚಿವರು ಮತ್ತು ಅವರ ಮಗಳ ವಿರುದ್ಧ ವೃಥಾ ಮಾನಹಾನಿಕರ ಆರೋಪ ಮಾಡಿವೆ ಎನ್ನುವುದು ಮೇಲ್ನೋಟಕ್ಕೆ ತಮ್ಮ ಅಭಿಪ್ರಾಯವಾಗಿದೆ ಎಂದು ನ್ಯಾ. ಮಿನಿ ಪುಷ್ಕರ್ಣ ಆದೇಶದಲ್ಲಿ ವಿವರಿಸಿದ್ದಾರೆ.
ಜುಲೈ 29 ರಂದು ಇರಾನಿ ಪರವಾಗಿ ಮಧ್ಯಂತರ ಪರಿಹಾರ ನೀಡಿದ್ದ ನ್ಯಾಯಾಲಯದ ಆದೇಶದ ವಿವರ ಸೋಮವಾರ ಮಾಧ್ಯಮಗಳಿಗೆ ಲಭ್ಯವಾಗಿದೆ. ಇರಾನಿ ಅವರ ವಿರುದ್ಧ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ಹೇಳಿಕೆಗಳನ್ನು ಹಿಂಪಡೆಯುವಂತೆ ನ್ಯಾಯಾಲಯ ತನ್ನ ಆದೇಶದಲ್ಲಿ ಸೂಚಿಸಿದೆ.
ಹಿನ್ನೆಲೆ
ಜುಲೈ 23 ರಂದುಪತ್ರಿಕಾಗೋಷ್ಠಿನಡೆಸಿದ್ದ ಕಾಂಗ್ರೆಸ್ ನಾಯಕರು ಇರಾನಿ ಅವರ ಪುತ್ರಿ ಜೋಯಿಶ್ ಇರಾನಿ ಮೃತ ವ್ಯಕ್ತಿಯ ಹೆಸರಿನಲ್ಲಿ ಪರವಾನಗಿ ನವೀಕರಿಸಿ ಗೋವಾದಲ್ಲಿ ರೆಸ್ಟರಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಆರೋಪಗಳು ಸುಳ್ಳು ಮತ್ತು ಮಾನಹಾನಿಕರವಾಗಿವೆ ಎಂದಿದ್ದ ಇರಾನಿ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೂರ್ವಗ್ರಹ ಪೀಡಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಹೀಗಾಗಿ ಹೇಳಿಕೆಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅಂತೆಯೇ ಕಾಂಗ್ರೆಸ್ ನಾಯಕರು ನಡೆಸಿದ್ದ ಪತ್ರಿಕಾಗೋಷ್ಠಿಯ ವಿವರಗಳನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕುವಂತೆ ನ್ಯಾಯಾಲಯ ಆದೇಶಿಸಿತ್ತು. ಒಂದು ವೇಳೆ ಕಾಂಗ್ರೆಸ್ ನಾಯಕರು 24 ಗಂಟೆಗಳ ಒಳಗೆ ಈ ನಿರ್ದೇಶನ ಪಾಲಿಸಲು ವಿಫಲವಾದರೆ ಸಾಮಾಜಿಕ ಜಾಲಗಾಣಗಳೇ ಅವುಗಳನ್ನು ಅಳಿಸಿಹಾಕಬೇಕು ಎಂದು ಸೂಚಿಸಿತ್ತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: