ತಮ್ಮ ನೂತನ ಸಾಕ್ಷ್ಯಚಿತ್ರ ʼಕಾಳಿʼಯಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವಂತೆ ಬಿಂಬಿಸಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಖಲೈ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಒಂಬತ್ತು ಎಫ್‌ಐಆರ್‌ಗಳನ್ನು ರದ್ದುಪಡಿಸಲು ಸೂಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.
ಪ್ರಕರಣವನ್ನು ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠದ ಮುಂದೆ ಪ್ರಸ್ತಾಪಿಸಲಾಗಿದ್ದು ಜನವರಿ 20, 2023ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ ನಂತರ ತನ್ನ ಮತ್ತು ತನ್ನ ಕುಟುಂಬಕ್ಕೆ ಹಿಂಸೆ ನೀಡುವುದಾಗಿ ಬೆದರಿಕೆ ಕರೆಗಳು ಬಂದಿವೆ ಎಂದು ಲೀನಾ ದೂರಿದ್ದಾರೆ.
ಕವಿಯತ್ರಿ, ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಅವರು “ಕಾಳಿಯನ್ನು ಆಮೂಲಾಗ್ರವಾಗಿ ಒಳಗೊಳ್ಳುವ ದಯಾಮಯಿಯಾಗಿ ತಮ್ಮ ಕಿರು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ” ಎಂದು ತಿಳಿಸಿದ್ದಾರೆ. ಕಾಳಿಯ ಪಾತ್ರದಲ್ಲಿ ಸ್ವತಃ ಲೀನಾ ನಟಿಸಿದ್ದಾರೆ.
ತಮ್ಮ ವಿರುದ್ಧದ ಎಲ್ಲಾ ತನಿಖೆಗೆ ತಡೆ ನೀಡಬೇಕು ಮತ್ತು ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಅವರು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಹಾಗೂ ಅತ್ಯಾಚಾರದ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಕೆ ಪ್ರಾರ್ಥಿಸಿದ್ದಾರೆ.