ಗೋಧ್ರಾ ರೈಲು ದಹನ ಪ್ರಕರಣ: ಜಾಮೀನು ಅರ್ಜಿ ನಿರ್ಧರಿಸಲು ಅಪರಾಧಿಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಜಾಮೀನು ಅರ್ಜಿಗಳು ಇರುವುದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ವಿವರ ಕೇಳಿತು.
Godhra, Supreme Court
Godhra, Supreme Court
Published on

ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಜಾಮೀನು ಅರ್ಜಿಗಳ ಕುರಿತು ತೀರ್ಪು ನೀಡುವುದಕ್ಕಾಗಿ ನ್ಯಾಯಾಲಯಕ್ಕೆ ಸಹಾಯಕವಾಗಿ ಅಪರಾಧಿಗಳ ವಯಸ್ಸು ಮತ್ತು ಅವರು ಜೈಲಿನಲ್ಲಿರುವ ಅವಧಿ ಸೇರಿದಂತೆ ವಿವಿಧ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಅರ್ಜಿದಾರರು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಸೂಚಿಸಿದೆ.  

ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಜಾಮೀನು ಅರ್ಜಿಗಳು ಇರುವುದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ವಿವರ ಕೇಳಿತು.

ಅರ್ಜಿದಾರರನ್ನು ಪ್ರತಿನಿಧಿಸಿರುವ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಹಾಗೂ ರಾಜ್ಯದ ಪರ ವಕೀಲರು ಒಟ್ಟಿಗೆ ಕೂತು ಅಪರಾಧಿಗಳು ಎಸಗಿರುವ ಅಪರಾಧ, ಅವರ ವಯಸ್ಸು, ಈವರೆಗೆ ಅವರು ಅನುಭವಿಸಿರುವ ಶಿಕ್ಷೆಯ ಅವಧಿ ಮುಂತಾದ ಒಂದು ಸಮಗ್ರ ಪಟ್ಟಿಯನ್ನು ನಮ್ಮ ಅನುಕೂಲಕ್ಕಾಗಿ ಸಿದ್ಧಪಡಿಸಲು ಸಾಧ್ಯವೇ ಎಂದು ಪೀಠ ಕೇಳಿತು. ಮುಂದುವರೆದು, ಆ ರೀತಿಯಲ್ಲಿ ಒಂದು ಸಮಗ್ರ ಕೋಷ್ಠಕವನ್ನು ರೂಪಿಸಿ ಎಂದು ಸೂಚಿಸಿತು.

Also Read
ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ವಾದದ ವೇಳೆ ಗುಜರಾತ್‌ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ ಅವರು ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ   11 ಅಪರಾಧಿಗಳಿಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದ 2017ರ ಹೈಕೋರ್ಟ್‌ ನಿರ್ಧಾರಕ್ಕೆ ಬಲವಾದ ಅಸಮ್ಮತಿ ವ್ಯಕ್ತಪಡಿಸಿದರು.

ವಿಚಾರಣಾ ನ್ಯಾಯಾಲಯವು 20 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 11 ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಹೈಕೋರ್ಟ್ ಬಳಿಕ 11 ಅಪರಾಧಿಗಳಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು ಎಂದು ಅವರು ವಿವರಿಸಿದರು.

"ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಸಜೀವ ದಹನ ಮಾಡಲಾಗಿದೆ. ರೈಲಿನ ಬೋಗಿಯಿಂದ ಹೊರಬರದಂತೆ ಹೊರಗಿನಿಂದ ಲಾಕ್ ಮಾಡಲಾಗಿದೆ ...  ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸುವ ಬಗ್ಗೆ ನಿರ್ಧರಿಸಬೇಕು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದ್ದು ಮರಣದಂಡನೆ ವಿಧಿಸಲು ಯೋಗ್ಯವಾಗಿದೆ” ಎಂದರು.

Also Read
ಗೋಧ್ರೋತ್ತರ ಗಲಭೆ: 19 ಮಂದಿ ಕೊಲೆ ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್‌ ನ್ಯಾಯಾಲಯ

ವಿಚಾರಣೆಯ ಒಂದು ಹಂತದಲ್ಲಿ "ಅಪರಾಧಿಯೊಬ್ಬನ ಹೆಂಡತಿ ಕೊನೆಯ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.. ಈಗ ಅವರ ವಯಸ್ಸು ಎಷ್ಟು?" ಎಂದು ನ್ಯಾಯಾಲಯ ಪ್ರಶ್ನಿಸಿತು.

ಹಿರಿಯ ವಕೀಲ ಸಂಜಯ್ ಹೆಗ್ಡೆ “ಕೆಲವು ಅಪರಾಧಿಗಳು ಈಗ 60ರ ಹರೆಯದವರಾಗಿದ್ದಾರೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ  11 ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ” ಎಂದರು.

ಆಗ ಮೆಹ್ತಾ ಅವರು "ಹೌದು, ಇದು ಅತ್ಯಂತ ಗಂಭೀರ ಅಪರಾಧವಾಗಿತ್ತು. ನಾವು ಅದನ್ನು ಬಲವಾಗಿ ವಾದಿಸುತ್ತಿದ್ದೇವೆ" ಎಂದು ಸಮರ್ಥಿಸಿಕೊಂಡರು.

ಹಿರಿಯ ವಕೀಲ ಕೆಟಿಎಸ್ ತುಳಸಿ ಅವರು ವಾದ ಮಂಡಿಸುತ್ತಾ “ಆರೋಪಿಗಳಲ್ಲಿ ಒಬ್ಬರಾದ ಬಿಲಾಲ್ ಇಸ್ಮಾಯಿಲ್ ಅವರು ಗುಜರಾತ್‌ ಭಾಷೆ ಗೊತ್ತಿಲ್ಲದೆ ಹೇಳಿಕೆಗೆ ತಮ್ಮ ಹೆಬ್ಬೆರಳಿನ ಗುರುತನ್ನು ಒತ್ತಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಪ್ರಕರಣದ ವಿಚಾರಣೆಯನ್ನು ಇನ್ನೊಂದು ದಿನಕ್ಕೆ ಮುಂದೂಡಿದ ನ್ಯಾಯಾಲಯ, ಮಾಹಿತಿ ಪಟ್ಟಿ ಸಿದ್ಧಪಡಿಸುವಂತೆ ಆದೇಶಿಸಿತು.

ಫೆಬ್ರವರಿ 2002ರಲ್ಲಿ ಗೋಧ್ರಾ ರೈಲು ದಹನ ನಡೆದಿತ್ತು. ಘಟನೆ ಗುಜರಾತ್‌ನಲ್ಲಿ ಕೋಮು ಗಲಭೆಗೆ ಕಾರಣವಾಗಿ ಸುಮಾರು 2,000 ಜನರು ಸಾವನ್ನಪ್ಪಿದರು. ಪ್ರಕರಣದ 31 ಅಪರಾಧಿಗಳಲ್ಲಿ ಒಬ್ಬರಿಗೆ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.

Kannada Bar & Bench
kannada.barandbench.com