[ಪ್ಲೇಸ್ಟೋರ್ ವಿವಾದ] ಉತ್ತರಿಸಲು ಗೂಗಲ್‌ಗೆ ಜ.5ರ ವರೆಗೆ ಅವಕಾಶ; ಮಾಹಿತಿದಾರರ ಬೆನ್ನತ್ತಲು ಗೂಗಲ್‌ ಯತ್ನ ಎಂದ ಸಿಸಿಐ

ಪ್ಲೇ ಬಿಲ್ಲಿಂಗ್‌ ವ್ಯವಸ್ಥೆಯನ್ನು 2022ರ ಅಕ್ಟೋಬರ್‌ 31ರ ವರೆಗೆ ಜಾರಿಗೊಳಿಸುವುದಿಲ್ಲ. ಹೀಗಾಗಿ, ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಮಧ್ಯಂತರ ಪರಿಹಾರ ಕೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದ ಗೂಗಲ್‌.
Google, Karnataka High Court
Google, Karnataka High Court

“ಪ್ಲೇಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಮುಂದಿನ ವರ್ಷದ ಜನವರಿ 5ರ ವರೆಗೆ ಕಾಲಾವಕಾಶ ನೀಡಲಾಗುವುದು. ಅಲ್ಲಿಯವರೆಗೆ ಯಾವುದೇ ಆದೇಶ ಹೊರಡಿಸಬಾರದು” ಎಂಬ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಮೌಖಿಕ ಭರವಸೆಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ.

ಗೂಗಲ್‌ನ ಪ್ಲೇಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದಂತೆ ಸಿಸಿಐ ಡಿಸೆಂಬರ್‌ 31ರ ಗಡುವು ವಿಧಿಸಿದ್ದನ್ನು ಪ್ರಶ್ನಿಸಿ ಗೂಗಲ್‌ ಮತ್ತು ಅದರ ಸಮೂಹ ಸಂಸ್ಥೆಗಳು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ನೇತೃತ್ವದ ಏಕಸದಸ್ಯ ರಜಾಕಾಲೀನ ಪೀಠವು ನಡೆಸಿತು.

ನಿಗದಿತ ಅವಧಿಯಲ್ಲಿ ಗೂಗಲ್‌ನಿಂದ ಪ್ರತಿಕ್ರಿಯೆ ಸಲ್ಲಿಸದಿದ್ದರೆ ಲಭ್ಯವಿರುವ ದಾಖಲೆಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಿಸಿಐ ಹೇಳಿದೆ. ಇದಕ್ಕೆ ಎಲ್ಲಾ ಪಕ್ಷಕಾರರು ಒಪ್ಪಿದ್ದು, ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 5ಕ್ಕೆ ಮುಂದೂಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಗೂಗಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯಮ್‌ ಅವರು “ಪ್ಲೇ ಬಿಲ್ಲಿಂಗ್‌ ವ್ಯವಸ್ಥೆಯನ್ನು ಗೂಗಲ್‌ ಜಾರಿಗೆ ತಂದಿದೆ. ಆದರೆ, 2022ರ ಅಕ್ಟೋಬರ್‌ 31ರ ವರೆಗೆ ನೂತನ ಬಿಲ್ಲಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಮಧ್ಯಂತರ ಪರಿಹಾರ ಕೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಆಕ್ಷೇಪಿಸಿದರು.

ಮುಂದುವರೆದು, “ದೂರಿಗೆ ಸಂಬಂಧಿಸಿದಂತೆ ಡಿಸೆಂಬರ್‌ 31ರ ಒಳಗೆ ವಿಸ್ತೃತವಾಗಿ ಪ್ರತಿಕ್ರಿಯಿಸಬೇಕು ಎಂದು ಸಿಸಿಐ ಆದೇಶಿಸಿದೆ. ಆದರೆ, ನಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ದೂರುದಾರರ ದಾಖಲೆ ಮತ್ತು ಮಾಹಿತಿಯನ್ನು ನೀಡಿಲ್ಲ. ಹೀಗಿರುವಾಗ ಪ್ರತಿಕ್ರಿಯಿಸುವುದು ಹೇಗೆ” ಎಂದು ಅವರು ಪ್ರಶ್ನಿಸಿದರು.

“ಸರ್ಕಾರದ ಭಾಗವಾದ ಸಿಸಿಐ ಮತ್ತು ನ್ಯಾಯಾಧಿಕರಣಗಳು ನ್ಯಾಯಿಕ ಕೆಲಸ ನಿರ್ವಹಿಸುತ್ತವೆ. ಹೀಗಾಗಿ, ಇಲ್ಲಿ ನ್ಯಾಯಿಕ ಸದಸ್ಯರು ಇರಬೇಕಾಗುತ್ತದೆ. ನ್ಯಾಯಿಕ ಸದಸ್ಯರು ಇರಬೇಕು ಎಂದು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಸಹ ಹೇಳಿವೆ. ಸಿಸಿಐನಲ್ಲಿ ನ್ಯಾಯಿಕ ಅಧಿಕಾರಿಯ ಕುರಿತು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ್ದ ನಿರ್ದೇಶನವನ್ನು ಅಮಾನತಿನಲ್ಲಿ ಇಡಬೇಕು ಎಂದು ಸಿಸಿಐ ಒಂದೂವರೆ ವರ್ಷದ ಬಳಿಕ ಮೇಲ್ಮನವಿ ಸಲ್ಲಿಸಿದೆ. ಇಲ್ಲಿಯವರೆಗೂ ಸಿಸಿಐನಲ್ಲಿ ನ್ಯಾಯಿಕ ಅಧಿಕಾರಿ ಇಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದರು.

“ಗೌಪ್ಯತೆ ಕಾಪಾಡಬೇಕಿರುವುದರಿಂದ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಳ್ಳಲಾಗದು ಎಂದು ಸಿಸಿಐ ಹೇಳಿದೆ. ಈ ಸಂಬಂಧ ಸಿಸಿಐನ ಸೆಕ್ಷನ್‌ 57ರ ಅಡಿ ಗೌಪ್ಯತಾ ವಿಭಾಗವು ಆದೇಶ ಹೊರಡಿಸಬೇಕು. ಆದರೆ, ಅದನ್ನೂ ಮಾಡಲಾಗಿಲ್ಲ” ಎಂದು ಪೀಠದ ಗಮನಸೆಳೆದರು.

ಇದಕ್ಕೆ ಪ್ರತಿಯಿಸಿದ ಸಿಸಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ಅವರು “ಗೂಗಲ್‌ ಪ್ರತಿಕ್ರಿಯಿಸಿರಬೇಕಾಗಿರುವುದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ತಡೆಹಿಡಿಯಲಾಗಿಲ್ಲ. ಸಿಸಿಐ ಕಾಯಿದೆಯ ಸೆಕ್ಷನ್‌ 35ರ ಪ್ರಕಾರ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡುವ ಅಧಿಕಾರ ಸಿಸಿಐಗೆ ಇದೆ. ಹೀಗಾಗಿ, ದೂರು ನೀಡಿರುವ ಭಾರತದ ನವೋದ್ಯಮಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಭಾರತದ ಅಪ್ಲಿಕೇಶನ್ ಡೆವಲಪರ್‌ಗಳ ಮಾಹಿತಿಯನ್ನು ನೀಡದಿದ್ದರೆ ಗೂಗಲ್‌ಗೆ ಪ್ರತಿಕ್ರಿಯಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಮಾಹಿತಿದಾರರ ಬೆನ್ನತ್ತಲು ಗೂಗಲ್‌ ಪ್ರಯತ್ನಿಸುತ್ತಿದೆ” ಎಂದು ಆಪಾದಿಸಿದರು.

“ಗೂಗಲ್‌ ತನ್ನ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಮನವಿ ದಾಖಲಿಸಬೇಕು. ಪ್ರಾಧಿಕಾರದ ವಿರುದ್ಧ ಅವರು ಆದೇಶ ಕೋರುತ್ತಿದ್ದಾರೆ. ಇದನ್ನು ಹೇಗೆ ಮಾಡಲಾಗುತ್ತದೆ? ಗೂಗಲ್‌ ಕೋರಿಕೆಯಂತೆ ನ್ಯಾಯಾಲಯವು ಆದೇಶ ಮಾಡಿದರೆ ಇದನ್ನೇ ಬಳಸಿಕೊಂಡು ಅವರು ಪದೇಪದೇ ಆದೇಶ ವಿಸ್ತರಣೆ ಕೋರುತ್ತಾರೆ. ನ್ಯಾಯಾಲಯ ನಿಗದಿಪಡಿಸಿದ ದಿನದಂದು ವಾದಿಸಲು ನಾವು ಸಿದ್ಧವಿದ್ದೇವೆ. ಸಿಸಿಐ ನೋಟಿಸ್‌ಗೆ ಗೂಗಲ್‌ ಜನವರಿ 7 ವರೆಗೆ ಪ್ರತಿಕ್ರಿಯೆ ಸಲ್ಲಿಸಬಹುದಾಗಿದೆ. ಅಲ್ಲಿಯವರೆಗೆ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಈ ಪ್ರಕರಣವನ್ನು ಇಡೀ ಜಗತ್ತು ಗಮನಿಸುತ್ತಿದೆ. ನ್ಯಾಯಾಲಯದ ಆದೇಶದಿಂದ ತಪ್ಪು ಸಂದೇಶ ರವಾನೆಯಾಗಬಾರದು” ಎಂದು ಪೀಠಕ್ಕೆ ಪರಿಪರಿಯಾಗಿ ಮನವಿ ಮಾಡಿದರು.

Also Read
ಸಿಸಿಐನ ಪ್ಲೇಸ್ಟೋರ್‌ ತನಿಖೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಗೂಗಲ್‌

“ಸಿಸಿಐ ನ್ಯಾಯಿಕ ಅಧಿಕಾರಿಯನ್ನು ಒಳಗೊಂಡಿರಬೇಕು. ಆದರೆ, ಕೆಲಸ ನಿರ್ವಹಿಸದೇ ಇರಲಾಗದು ಎಂದು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಹೇಳಿವೆ. ಹೀಗಿರುವಾಗ ರಜಾಕಾಲದಲ್ಲಿ ಮಧ್ಯಂತರ ಆದೇಶ ಪಡೆಯುವ ಮೂಲಕ ಸಿಸಿಐ ಕೆಲಸ ನಿರ್ವಹಿಸದಂತೆ ತಡೆಯಲು ಗೂಗಲ್‌ ಬಯಸುತ್ತಿದೆ. ಹೀಗಾಗಿ, ಯಾವುದೇ ಆದೇಶ ಮಾಡಬಾರದು” ಎಂದು ಕೋರಿದರು.

ಗೂಗಲ್‌ ಪ್ರತಿನಿಧಿಸಿದ್ದ ಮತ್ತೊಬ್ಬ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು “ಡಿಸೆಂಬರ್‌ 31ರ ಒಳಗೆ ಪ್ರತಿಕ್ರಿಯೆ ಸಲ್ಲಿಸದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಸಿಸಿಐ ಹೇಳಿದೆ. ಇಂಥ ಸಂದರ್ಭದಲ್ಲಿ ಕಂಪೆನಿಯಾಗಿ ನಮಗೆ ಕೆಲವು ಆತಂಕಗಳಿವೆ” ಎಂದರು. ಇದಕ್ಕೆ ಪೀಠವು “ಸಿಸಿಐ ಪರ ವಕೀಲರು ಭರವಸೆ ನೀಡಿದ್ದಾರೆ. ಅದನ್ನು ಪರಿಗಣಿಸೋಣ” ಎಂದು ಹೇಳಿತು.

ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಅನ್ನು ವಕೀಲ ಅಬೀರ್‌ ರಾಯ್‌ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com