ಪ್ಲೇಸ್ಟೋರ್‌ ಬಿಲ್ಲಿಂಗ್‌ ನೀತಿಯನ್ನು ಅ. 31ರವರೆಗೆ ಜಾರಿ ಮಾಡುವುದಿಲ್ಲ ಎಂದ ಗೂಗಲ್; ಅರ್ಜಿ ಇತ್ಯರ್ಥ

ವಿಚಾರಣೆ ವೇಳೆ ಗೂಗಲ್ ಇಂಡಿಯಾ ಮತ್ತು ಅಲಯನ್ಸ್ ಡಿಜಿಟಲ್‌ ಇಂಡಿಯಾ ಫೆಡರೇಷನ್‌ (ಎಡಿಐಎಫ್) ಪರ ವಕೀಲರಾದ ಗೌತಮಾದಿತ್ಯ ಮತ್ತು ಅಬೀರ್‌ ರಾಯ್‌ ಅವರು ಜಂಟಿ ಮೆಮೊ ಸಲ್ಲಿಸಿದರು.
Karnataka HC and Google play

Karnataka HC and Google play

ಪ್ಲೇಸ್ಟೋರ್ ಬಿಲ್ಲಿಂಗ್‌ ನೀತಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ನಡೆಸುವ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಗೂಗಲ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕರ್ನಾಟಕ ಹೈಕೋರ್ಟ್‌ ಮುಂದೆ ಸೋಮವಾರ ಪುನರುಚ್ಚರಿಸಿದೆ.

ಪ್ಲೇಸ್ಟೋರ್‌ನ ನೂತನ ನಿಯಮಗಳಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳಿಗೆ 2021ರ ಡಿಸೆಂಬರ್‌ 31ರೊಳಗೆ ಉತ್ತರಿಸುವಂತೆ ಗಡುವು ವಿಧಿಸಿದ್ದ ಸಿಸಿಐ ಕ್ರಮ ಪ್ರಶ್ನಿಸಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತದರ ಸಮೂಹ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಗೂಗಲ್ ಇಂಡಿಯಾ ಮತ್ತು ಅಲಯನ್ಸ್ ಡಿಜಿಟಲ್‌ ಇಂಡಿಯಾ ಫೆಡರೇಷನ್‌ (ಎಡಿಐಎಫ್) ಪರ ವಕೀಲರಾದ ಗೌತಮಾದಿತ್ಯ ಮತ್ತು ಅಬೀರ್‌ ರಾಯ್‌ ಅವರು ಜಂಟಿ ಮೆಮೊ ಸಲ್ಲಿಸಿದರು.

Also Read
[ಗೂಗಲ್‌ ಪ್ಲೇ ಸ್ಟೋರ್‌] ಎರಡು ಸುತ್ತಿನ ದಾವೆ ಬೇಡ, ಅಂತಿಮವಾಗಿ ಪ್ರಕರಣದ ವಿಚಾರಣೆ: ಹೈಕೋರ್ಟ್‌ಗೆ ಸಿಸಿಐ ವಿವರಣೆ

“ಪ್ಲೇಸ್ಟೋರ್ ನೀತಿಯ ಕುರಿತಂತೆ ಸಿಸಿಐ ವಿಚಾರಣೆಗೆ ನೀಡಲಾಗಿರುವ ಸಹಕಾರವನ್ನು ಗೂಗಲ್ ಇಂಡಿಯಾ ಮುಂದುವರಿಸಲಿದೆ. 2022ರ ಅಕ್ಟೋಬರ್‌ 31ರವರೆಗೆ ಉದ್ದೇಶಿತ ಪ್ಲೇಸ್ಟೋರ್ ನೀತಿ ಜಾರಿ ಮಾಡುವುದಿಲ್ಲ. ಈ ಹೇಳಿಕೆ ಪರಿಗಣಿಸಿ ಪ್ರಕರಣದಲ್ಲಿ ಮಧ್ಯಂತರ ಪರಿಹಾರ ಕೋರಿ ಎಡಿಐಎಫ್ ಸಲ್ಲಿಸಿರುವ ಅರ್ಜಿಯನ್ನು ಮುಕ್ತಾಯಗೊಳಿಸಬಹುದು. ಮುಂದೆ ಯಾವುದಾದರೂ ತಕರಾರು ಕಂಡುಬಂದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಎಡಿಐಎಫ್‌ಗೆ ಅನುಮತಿ ನೀಡಬಹುದು” ಎಂದು ಮೆಮೊನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಒಪ್ಪಿದ ಪೀಠವು ಅರ್ಜಿ ಇತ್ಯರ್ಥಪಡಿಸಿತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಪ್ಲೇಸ್ಟೋರ್‌ನ ನೂತನ ಬಿಲ್ಲಿಂಗ್ ನಿಯಮಗಳಿಗೆ ಸಂಬಂಧಿಸಿದಂತೆ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧದ ವಿಚಾರಣೆಯನ್ನು 60 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಸಿಐ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.

Related Stories

No stories found.
Kannada Bar & Bench
kannada.barandbench.com