ಯೂರೋಪ್ ಮಾದರಿಯ ವ್ಯವಸ್ಥೆಯನ್ನೇ ಭಾರತದಲ್ಲಿ ಗೂಗಲ್ ಅಳವಡಿಸಿಕೊಳ್ಳುತ್ತದೆಯೇ? ಸಿಸಿಐ ಪ್ರಕರಣದಲ್ಲಿ ಸುಪ್ರೀಂ ಪ್ರಶ್ನೆ

ಆದರೂ ಯಾವುದೇ ಆದೇಶ ನೀಡದ ನ್ಯಾಯಾಲಯ ಜನವರಿ 18, ಬುಧವಾರಕ್ಕೆ (ನಾಳಿದ್ದು) ಪ್ರಕರಣದ ವಿಚಾರಣೆ ಮುಂದುವರೆಸಲಿದೆ.
CCI, Google
CCI, Google
Published on

ಆಂಡ್ರಾಯ್ಡ್ ಮೊಬೈಲ್ ಸಾಧನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಯುರೋಪ್‌ನಲ್ಲಿ ಇರುವಂತಹ ವ್ಯವಸ್ಥೆಯನ್ನು ಭಾರತದಲ್ಲಿ ಗೂಗಲ್‌ ಜಾರಿಗೆ ತರುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.

ಆಂಡ್ರಾಯ್ಡ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌ಗೆ ₹1,337 ಕೋಟಿ ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ತಡೆ ನೀಡುವಂತೆ ಕೋರಿ ಗೂಗಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಪ್ರಶ್ನೆ ಕೇಳಿದೆ.  

Also Read
ಗೂಗಲ್‌ಗೆ ₹1,337 ಕೋಟಿ ದಂಡ: ಎನ್‌ಸಿಎಲ್‌ಎಟಿ ಪರಿಹಾರ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

ಯೂರೋಪ್‌ನಲ್ಲಿರುವ (ಸಿಸಿಐ ಮಾದರಿಯ)  ಆಯೋಗ ನೀಡಿದ ಇದೇ ರೀತಿಯ ಆದೇಶವನ್ನು ಗೂಗಲ್‌ ಪಾಲಿಸುತ್ತಿದೆ ಎಂದು ಸಿಸಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎನ್ ವೆಂಕಟರಾಮನ್ ಅವರು ತಿಳಿಸಿದಾಗ ನ್ಯಾಯಾಲಯ ಗೂಗಲ್ ಅನ್ನು ಈ ರೀತಿಯಾಗಿ ಪ್ರಶ್ನಿಸಿತು.

ಸಿಸಿಐ ನಿರ್ದೇಶನಗಳು ಗೂಗಲ್‌ ತೆಗೆದುಕೊಂಡ ಕ್ರಮಕ್ಕೆ ಸರಿಹೊಂದುತ್ತವೆಯೇ ಎಂದು ಸಿಜೆಐ ಪ್ರಶ್ನಿಸಿದಾಗ ಗೂಗಲ್‌ ಅನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಜೊತೆಗೆ ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ತಿಳಿಸಿದರು.

Also Read
ಸಿಸಿಐ ವಿಧಿಸಿದ್ದ ₹1,337 ಕೋಟಿ ದಂಡದಲ್ಲಿ ಶೇ.10ರಷ್ಟು ಠೇವಣಿ ಇರಿಸಲು ಗೂಗಲ್‌ಗೆ ಸೂಚಿಸಿದ ಎನ್‌ಸಿಎಲ್‌ಎಟಿ

ಆಗ ಸಿಜೆಐ “ಗೂಗಲ್‌ ಯೂರೋಪ್‌ನಲ್ಲಿರುವ ವ್ಯವಸ್ಥೆಯನ್ನೇ ಭಾರತದಲ್ಲೂ ಅಳವಡಿಸಿಕೊಂಡಿದೆಯೇ ಎಂಬುದರ ಬಗ್ಗೆ ದಯವಿಟ್ಟು ಯೋಚಿಸಿ ಬಳಿಕ ಉತ್ತರಿಸಿ” ಎಂದು ತಿಳಿಸಿ ಪ್ರಕರಣವನ್ನು ಜನವರಿ 18, ಬುಧವಾರಕ್ಕೆ (ನಾಳಿದ್ದು) ಮುಂದೂಡಿದರು.

ಭಾರತೀಯ ಸ್ಪರ್ಧಾ ಆಯೋಗ ವಿಧಿಸಿದ್ದ ₹ 1,337 ಕೋಟಿ ದಂಡದ ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಆದೇಶ ಪ್ರಶ್ನಿಸಿ ಗೂಗಲ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com