[ಗೂಂಡಾ ಕಾಯಿದೆ] ಮಾರ್ಗಸೂಚಿಗಳ ಹೊರತಾಗಿಯೂ ಅಧಿಕಾರಿಗಳಿಂದ ದೋಷಪೂರಿತ ಬಂಧನ ಆದೇಶ: ಹೈಕೋರ್ಟ್‌ ಕಳವಳ

ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರು ದಾವೂದ್‌ ನದಾಫ್‌ ವಿರುದ್ಧ 2025ರ ಜೂನ್‌ 3ರಂದು ಹೊರಡಿಸಿರುವ ಬಂಧನ ಆದೇಶವನ್ನು ಹೈಕೋರ್ಟ್‌ ವಜಾಗೊಳಿಸಿದೆ.
Karnataka HC and Goonda Act
Karnataka HC and Goonda Act
Published on

ಸರಳ ತಪ್ಪುಗಳು ಮರುಕಳಿಸುವುದನ್ನು ತಡೆಯಲು ನ್ಯಾಯಾಲಯ ಹೊರಡಿಸಿದ ಹಲವಾರು ಮಾರ್ಗಸೂಚಿಗಳ ಹೊರತಾಗಿಯೂ ರಾಜ್ಯ ಸರ್ಕಾರದ ಅಧಿಕಾರಿಗಳು 'ಗೂಂಡಾ ಕಾಯಿದೆ' ಅಡಿಯಲ್ಲಿ ದೋಷಪೂರಿತ ಬಂಧನ ಆದೇಶಗಳನ್ನು ಹೊರಡಿಸುತ್ತಲೇ ಇರುವುದು ತೀವ್ರ ಕಳವಳಕಾರಿ ವಿಚಾರ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಹೇಳಿದೆ.

ಕರ್ನಾಟಕದಲ್ಲಿ ಅಕ್ರಮ ವಸ್ತುಗಳ ಮಾರಾಟಗಾರರು, ಮಾದಕ ವಸ್ತು ಮಾರಾಟಗಾರರು, ಜೂಜುಕೋರರು, ಗೂಂಡಾಗಳ (ಅನೈತಿಕ ಮಾನವ ಕಳ್ಳಸಾಗಣೆ, ಕೊಳಚೆ ಪ್ರದೇಶಗಳ ಅತಿಕ್ರಮಣಕಾರರು ಮತ್ತು ವಿಡಿಯೋ ಅಥವಾ ಆಡಿಯೋ ನಕಲುಗಾರರು) ನಿಯಂತ್ರಣ ಕಾಯಿದೆ 1985ರ (ಗೂಂಡಾ ಕಾಯಿದೆ) ಅಡಿ ಪತಿ ಹುಬ್ಬಳ್ಳಿಯ ದಾವೂದ್‌ ನದಾಫ್‌ ಬಂಧನ ಪ್ರಶ್ನಿಸಿ ಪ್ರತಿಭಾ ತಲಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಬಿ ಮುರಳೀಧರ್‌ ಪೈ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರು ದಾವೂದ್‌ ನದಾಫ್‌ ವಿರುದ್ಧ 2025ರ ಜೂನ್‌ 3ರಂದು ಹೊರಡಿಸಿರುವ ಬಂಧನ ಆದೇಶವನ್ನು ವಜಾಗೊಳಿಸಿದೆ.

“2019ರಲ್ಲಿ ಹೈಕೋರ್ಟ್‌ನ ಸಮನ್ವಯ ವಿಭಾಗೀಯ ಪೀಠವು ಜಯಮ್ಮ ವರ್ಸಸ್‌ ಬೆಂಗಳೂರು ಪೊಲೀಸ್‌ ಆಯುಕ್ತರು ಪ್ರಕರಣದಲ್ಲಿ ಹೊರಡಿಸಿದ್ದ ಆದೇಶದಲ್ಲಿ 13 ಅಂಶಗಳ ಮಾರ್ಗಸೂಚಿ ರೂಪಿಸಿ, ಅದರ ಪ್ರತಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು, ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಮತ್ತು ಎಲ್ಲಾ ಪೊಲೀಸ್‌ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ರವಾನಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ದುರದೃಷ್ಟಕರವೆಂದರೆ ಆನಂತರ ಏನೂ ಬದಲಾದಂತಿಲ್ಲ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

“ಸಕ್ಷಮ ಪ್ರಾಧಿಕಾರವು ಬಂಧನ ಆದೇಶ ಹೊರಡಿಸಿದ್ದು, ಅನುವಾದ ಮಾಡದೇ ಓದಲು ಸಾಧ್ಯವಾಗದ ದಾಖಲೆಗಳನ್ನು ದಾವೂದ್‌ ಸಾಬ್‌ ಸಹೋದರರಿಗೆ ಒದಗಿಸಲಾಗಿದೆ. ಬಂಧನ ಆದೇಶದ ಜೊತೆಗೆ ಸ್ಪಷ್ಟವಾಗಿರುವ ಮತ್ತು ಓದಲು ಅನುಕೂಲವಾಗುವ ದಾಖಲೆಗಳನ್ನು ಒದಗಿಸಬೇಕು ಎಂದು 2019ರ ಆದೇಶದಲ್ಲಿನ ಮಾರ್ಗಸೂಚಿಯಲ್ಲಿ ಹೇಳಿತ್ತು. ಇದನ್ನು ಪಾಲಿಸದ ಹಿನ್ನೆಲೆಯಲ್ಲಿ ಹಲವು ಬಂಧನ ಆದೇಶಗಳನ್ನು ವಜಾಗೊಂಡಿವೆ” ಎಂದೂ ಆದೇಶದಲ್ಲಿ ದಾಖಲಿಸಲಾಗಿದೆ.

Also Read
ಗೂಂಡಾ ಕಾಯಿದೆಯಡಿ ರೌಡಿಶೀಟರ್‌ ಬಂಧನ: ಸರ್ಕಾರದ ಕ್ರಮ ಎತ್ತಿ ಹಿಡಿದ ಹೈಕೋರ್ಟ್‌, ಹೇಬಿಯಸ್‌ ಅರ್ಜಿ ವಜಾ

“ಈ ಘನ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಸರ್ಕಾರವಾಗಲಿ, ಸಕ್ಷಮ ಪ್ರಾಧಿಕಾರವಾಗಲಿ ಪಾಲಿಸದಿರುವುದು ದುರದೃಷ್ಟಕರ. ಹೀಗಾಗಿ, ಸಕ್ಷಮ ಪ್ರಾಧಿಕಾರದ ಲೋಪಗಳನ್ನೇ ಆಧರಿಸಿ ಗೂಂಡಾ ಕಾಯಿದೆ ಅಡಿ ಹೊರಡಿಸಿರುವ ಬಂಧನ ಆದೇಶ ಅಕ್ರಮ ಎಂದು ಘೋಷಿಸಬೇಕು ಎಂದು ಅರ್ಜಿಗಳನ್ನು ಸಲ್ಲಿಸಿ, ಯಶ ಕಾಣಗಲಾಗುತ್ತಿದೆ. ಹಾಲಿ ಪ್ರಕರಣದಲ್ಲಿ 800 ಪುಟಗಳ ಪೈಕಿ 185 ಓದಲಾಗದ ಪುಟಗಳ ಜೊತೆಗೆ ಬಂಧನ ಆದೇಶ ಒದಗಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರೆಯ ಪರವಾಗಿ ಹಿರಿಯ ವಕೀಲ ಸಂದೇಶ್‌ ಚೌಟ, ವಕೀಲ ಅವಿನಾಶ್‌ ಅಂಗಡಿ, ಸರ್ಕಾರದ ಪರವಾಗಿ ಪಿ ಎನ್‌ ಹಟ್ಟಿ ವಾದಿಸಿದ್ದರು.

Attachment
PDF
Prathiba Talapati Vs State of Karnataka
Preview
Kannada Bar & Bench
kannada.barandbench.com