₹ 10 ಕೋಟಿಗೂ ಅಧಿಕ ಮೊತ್ತದ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆಯನ್ನುಆಶ್ರಯಿಸದಂತೆ ಸರ್ಕಾರ ಮತ್ತು ಅದರ ಘಟಕಗಳು ಅಥವಾ ಪ್ರತನಿಧಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಇತ್ತೀಚೆಗೆ ನೀಡಿದ್ದ ಜ್ಞಾಪನಾ ಪತ್ರದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನು ಮಾಡಬೇಕಿತ್ತೋ ಅದಕ್ಕೆ ಈ ನಿರ್ಧಾರ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಅನಿರುದ್ಧ್ ಕೃಷ್ಣನ್ ವಿರಚಿತ ಕಮರ್ಷಿಯಲ್ ಡಿಸ್ಪ್ಯೂಟ್ ರೆಸಲ್ಯೂಷನ್ - ಸ್ಟೇಟ್ ಆಫ್ ದಿ ಲಾ ಇನ್ ಇಂಡಿಯಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು .
"ಹೈಪ್ರೊಫೈಲ್ ಪ್ರಕರಣಗಳಲ್ಲಿ ಮಧ್ಯಸ್ಥಿಕೆಗೆ ಹೋಗಬೇಡಿ ಎಂದು ಸರ್ಕಾರ ಹೇಳುತ್ತಿರುವ ಸುತ್ತೋಲೆಯನ್ನು ನಾನು ಇತ್ತೀಚೆಗೆ ನೋಡಿದ್ದೇನೆ. ( ಏನು ಮಾಡಬೇಕಿತ್ತೋ ಅದಕ್ಕೆ) ಇದು ವಿರುದ್ಧವಾಗಿದೆ ... ನಾವು ಈಗಲೂ ಎದುರಿಸುತ್ತಿರುವ ಸವಾಲುಗಳು ಅಗಾಧವಾಗಿಯೇ ಉಳಿದಿವೆ. ಕ್ಯುರೇಟಿವ್ ನ್ಯಾಯವ್ಯಾಪ್ತಿಯು ಮಧ್ಯಸ್ಥಗಾರರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಪಕ್ಷಕಾರನಾಗಿದ್ದಾಗ ಮಧ್ಯಸ್ಥಿಕೆ ಎಂಬುದು ನಡೆಯಬೇಕೆ ಎಂಬ ಸಂಕೇತಗಳು ಮಧ್ಯಸ್ಥಿಕೆ ವಲಯದಿಂದ ಹೊರಹೊಮ್ಮುತ್ತಿವೇ. ಹಾಗಾಗಬಾರದು. ಸ್ಥಳದಲ್ಲೇ ನಡೆಸುವ ಮಧ್ಯಸ್ಥಿಕೆ ಮುಖ್ಯವಾಗಿದ್ದು ರಾಜಿ ಸಂಧಾನ ಕೂಡ ಬಹಳ ಮುಖ್ಯ” ಎಂದು ಅವರು ಹೇಳಿದರು.
ಸರ್ಕಾರವನ್ನು ಒಳಗೊಂಡಿರುವ ಸಾರ್ವಜನಿಕ ಖರೀದಿ ಒಪ್ಪಂದಗಳಲ್ಲಿ ಮಧ್ಯಸ್ಥಿಕೆ ಷರತ್ತುಗಳನ್ನು ವಾಡಿಕೆಯಂತೆ ಬಳಸಬಾರದು ಎಂದು ಜೂನ್ 3 ರಂದು ಕೇಂದ್ರ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಶಿಫಾರಸು ಮಾಡಲಾಗಿತ್ತು.
ಆರ್ಬಿಟ್ರೇಶನ್ ಬಾರ್ ಆಫ್ ಇಂಡಿಯಾ (ಎಬಿಐ) ಮತ್ತು ಇಂಡಿಯನ್ ಆರ್ಬಿಟ್ರೇಶನ್ ಫೋರಮ್ ಕೂಡ ಈ ಜ್ಞಾಪಕ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಭಾರತದಲ್ಲಿ ದೃಢವಾದ ಮಧ್ಯಸ್ಥಿಕೆ ವ್ಯವಸ್ಥೆಯನ್ನು ರೂಪಿಸುವ ಸರ್ಕಾರದ ಪ್ರಯತ್ನಗಳನ್ನು ಈ ಸುತ್ತೋಲೆ ದುರ್ಬಲಗೊಳಿಸುತ್ತದೆ ಎಂದು ಅವು ಹೇಳಿದ್ದವು.
ನ್ಯಾ. ಕೌಲ್ ಅವರು ದೇಶದ ವಾಣಿಜ್ಯ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಹೆಚ್ಚು ಸಮಯ ಹಿಡಿಯುತ್ತಿದ್ದು ಅಂತಹ ವ್ಯಾಜ್ಯಗಳ ವಿಚಾರಣೆ ನಡೆಸುವ ನ್ಯಾಯಮಂಡಳಿಗಳು ನಿವೃತ್ತ ನ್ಯಾಯಮೂರ್ತಿಗಳ ಕೇಂದ್ರಗಳಾಗುವ ಬದಲು ಅಲ್ಲಿ ತಜ್ಞರೂ ವಿಚಾರಣೆ ನಡೆಸುವಂತಾಗಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.